ಸಿದ್ದೇಶ್ ಯಾದವ್ ಗೆ ಶ್ರದ್ಧಾಂಜಲಿ ಸಲ್ಲಿಕೆ

120

Get real time updates directly on you device, subscribe now.


ತುಮಕೂರು: ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ನಿಧನರಾದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಸಿದ್ದೇಶ್ ಯಾದವ್ ಅವರಿಗೆ ಶ್ರದ್ಧಾಂಜಲಿ ಸಭೆಯನ್ನು ಜಿಲ್ಲಾಧ್ಯಕ್ಷ ರವಿಶಂಕರ್ ಹೆಬ್ಬಾಕ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಸಿದ್ದೇಶ್ ಯಾದವ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ತುಮಕೂರು ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಡಾ.ಎಂ.ಆರ್ ಹುಲಿನಾಯ್ಕರ್ ಮಾತನಾಡಿ, ಸಿದ್ದೇಶ್ ಯಾದವ್ ಬಡವ, ಬಲ್ಲಿದ ಎನ್ನದೆ ಎಲ್ಲರಿಗೂ ಸಹಾಯ ಮಾಡುತ್ತಿದ್ದ ವ್ಯಕ್ತಿ, ಪಕ್ಷದ ಕೆಲಸವೆಂದರೆ ದೇವರ ಕೆಲಸವೆಂದು ನಂಬಿದ್ದ ಅವರಿಗೆ ಚಿಕ್ಕ ವಯಸ್ಸಿನಲ್ಲೇ ಗುರುತರ ಜವಾಬ್ದಾರಿಯನ್ನು ಪಕ್ಷ ವಹಿಸಿತ್ತು, ಸಾವನ್ನಪ್ಪುವ ಮುನ್ನ ಕೂಡ ಬೆಂಗಳೂರಿನ ಪಕ್ಷದ ಕಚೇರಿಯಲ್ಲಿದ್ದ ಸಭೆ ಮುಗಿಸಿ ಹೊರ ಬರುವಾಗ ಹೃದಯಾಘಾತದಿಂದ ನಿಧನರಾದರು. ಇಂತಹ ನಿರಪೇಕ್ಷಿತ ಕಾರ್ಯಕರ್ತನನ್ನು ಕಳೆದುಕೊಂಡಿರುವುದು ನೋವುಂಟು ಮಾಡಿದೆ ಎಂದರು.

ಕಾಡುಗೊಲ್ಲ ಸಮುದಾಯದಲ್ಲಿ ಹುಟ್ಟಿದ ಸಿದ್ದೇಶ್ ಯಾದವ್ ಚಿತ್ರದುರ್ಗದ ಎಬಿವಿಪಿ ಕಾರ್ಯದರ್ಶಿ ಯಾಗಿ, ರಾಜ್ಯ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ ನಂತರ ಸಕ್ರಿಯ ರಾಜಕಾರಣಕ್ಕೆ ಬಂದು ಜಿಲ್ಲಾ ಒಬಿಸಿ ಮೋರ್ಚಾ ಬಳ್ಳಾರಿ ಜಿಲ್ಲಾ ಅಧ್ಯಕ್ಷರಾಗಿ, ರಾಜ್ಯ ಉಪಾಧ್ಯಕ್ಷ ರಾಗಿ ಕಳೆದ ಚುನಾವಣೆಯಲ್ಲಿ ಬಳ್ಳಾರಿ ಜಿಲ್ಲೆಯ ಪ್ರಭಾರಿಗಳಾಗಿ ಕೆಲಸ ಮಾಡಿದ್ದರು. ಪಕ್ಷದ ಸಂಘಟನೆಯ ಜೊತೆಗೆ ಕಾಡುಗೊಲ್ಲ ಸಮುದಾಯವನ್ನು ಸಂಘಟಿಸಿದ್ದರು ಎಂದು ಡಾ.ಹುಲಿನಾಯ್ಕರ್ ಸ್ಮರಿಸಿದರು

ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ರುದ್ರೇಶ್ ಮಾತನಾಡಿ, ಸಿದ್ದೇಶ್ ಯಾದವ್ ಚಿತ್ರದುರ್ಗ ಎಬಿವಿಪಿ ಕಾರ್ಯದರ್ಶಿ ಆಗಿದ್ದ ಸಂದರ್ಭದಿಂದಲೂ ನನಗೆ ಗೊತ್ತು, ಸಂಘಟನಾ ಚತುರರು, ಅವರ ಕಾರ್ಯ ವೈಖರಿ ಗುರುತಿಸಿಯೇ ಬಿಜೆಪಿ ಪಕ್ಷ ಅನೇಕ ಜವಾಬ್ದಾರಿ ನೀಡಿತ್ತು. 2013 ರಲ್ಲಿ ಹಿರಿಯೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿಯೂ ಕಣಕ್ಕೆ ಇಳಿದು ಸೋಲು ಕಂಡಿದ್ದರು. ಸಿದ್ದೇಶ್ ಯಾದವ್ ಅವರ ಸಾವು ಪಕ್ಷಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದರು.
ಬಿಜೆಪಿ ತುಮಕೂರು ಜಿಲ್ಲೆಯ ಮಾಧ್ಯಮ ಸಹ ಪ್ರಮುಖ್ ಜೆ.ಜಗದೀಶ್ ಮಾತನಾಡಿ, ಸದಾ ಲವಲವಿಕೆಯಿಂದ ಕೂಡಿರುತ್ತಿದ್ದ ಸಿದ್ದೇಶ್ ಯಾದವ್ ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅವರ ಸಾವಿನ ದುಃಖ ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.

ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ ಮಾತನಾಡಿ, ಕಳೆದ 20 ವರ್ಷ ಗಳಿಂದಲೂ ನಮ್ಮ ಅವರ ಒಡನಾಟವಿದೆ. ನಾನು ತುಮಕೂರು ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಇದ್ದಾಗ ಅವರು ಬಳ್ಳಾರಿ ಜಿಲ್ಲೆಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಸೋಮವಾರ ಪಕ್ಷದ ಕಚೇರಿಯಲ್ಲಿ ಸುಮಾರು ಮಧ್ಯಾಹ್ನ 1.45 ಗಂಟೆಯ ವರೆಗೆ ಜೊತೆಯಲ್ಲಿ ಇದ್ದ ಅವರು ಊಟದ ಸಮಯದಲ್ಲಿ ಎದೆ ನೋವು ಎಂದು ಹೇಳಿ ವೈದ್ಯರನ್ನು ಕಾಣಲು ತೆರಳಿದ್ದರು. ಆಸ್ಪತ್ರೆಯ ಬಾಗಿಲಲ್ಲಿ ಇಳಿಯುವಾಗ ಕುಸಿದು ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಪಕ್ಷದಲ್ಲಿ ಎಲ್ಲಾ ಜವಾಬ್ದಾರಿ ನಿಭಾಯಿಸುವುದರ ಜೊತೆಗೆ ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂಬ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ. ದುಖಃ ಭರಿಸುವ ಶಕ್ತಿಯನ್ನು ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ಈ ವೇಳೆ ಬಿಜೆಪಿ ಮುಖಂಡರಾದ ಸಂದೀಪ್, ಗಣೇಶ.ಜಿ, ಹನುಮಂತರಾಜು, ಶಿವಕುಮಾರ್ ಸ್ವಾಮಿ, ಚಂದ್ರಬಾಬು, ಪುಟ್ಟರಾಜು ಮತ್ತಿತರರು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!