ಕುಣಿಗಲ್: ವಯಸ್ಕ ಮಗನಿಗೆ ತಾಯಿ ಬೈಯ್ದು ಬುದ್ಧಿವಾದ ಹೇಳಿದ್ದಕ್ಕೆ ಮಗ ಆತ್ಮಹತ್ಯೆಗೆ ಯತ್ನಿಸಿದ್ದು, ಕುಣಿಗಲ್ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಿಂದ ಮಗ ತಾಯಿಯ ಮಡಿಲು ಸೇರಿದ ಘಟನೆ ನಡೆದಿದೆ.
ತಾಲೂಕಿನ ಕಸಬಾ ಹೋಬಳಿಯ ಗ್ರಾಮವೊಂದರ ವಿನಯ್ (ಹೆಸರು ಬದಲಿಸಿದೆ) ಇಂಜಿನಿಯರಿಂಗ್ ಪದವೀಧರನಾಗಿದ್ದು, ತಾಲೂಕಿನ ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ, ಈತನ ತಾಯಿ ಬೇರೆ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದರು. ಮಗನೊಂದಿಗೆ ದಿನಾಲೂ ದೂರವಾಣಿ ಮೂಲಕ ಮಾತನಾಡುತ್ತಿದ್ದ ತಾಯಿ ಸೋಮವಾರ ಮಗನ ಕೆಲ ನಡವಳಿಗೆ ಬೈಯ್ದಿದ್ದರು. ತಾಯಿ ಬೈಗುಳದಿಂದ ಬೇಸರಗೊಂಡ ಮಗ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಫೋನ್ ಸ್ವಿಚ್ ಆಫ್ ಮಾಡಿದ್ದ, ಗಾಬರಿಗೊಂಡ ತಾಯಿ ಮಗನಿಗೆ ಕರೆ ಮಾಡಿದರೂ ಫೋನ್ ಸ್ವಿಚ್ ಆಫ್ ಆದ ಕಾರಣ ಪೊಲೀಸ್ ತುರ್ತು ಸಹಾಯವಾಣಿ 112ರ ಮೂಲಕ ಕುಣಿಗಲ್ ಪೊಲೀಸರನ್ನು ಸಂಪರ್ಕಿಸಿ ಮಗನ ವಿವರ ನೀಡಿದ್ದರು.
ಇದರಂತೆ ಕಾರ್ಯಾಚರಣೆಗೆ ಇಳಿದ ಕುಣಿಗಲ್ ಪೊಲೀಸರು, ಜಿಲ್ಲಾ ಕೇಂದ್ರ ಪೊಲೀಸರ ಸಹಾಯದಿಂದ ಯುವಕನ ಮೊಬೈಲ್ ನ ಲೊಕೇಶನ್ ಪತ್ತೆ ಹಚ್ಚಿ, ಇಲ್ಲಿನ 112 ವಾಹನ ಸೇರಿದಂತೆ ಠಾಣೆಯ ಕೆಲ ಪೊಲಿಸರು ಲೊಕೇಶನ್ ಸುತ್ತಮುತ್ತಲ ಹುಡುಕಾಟ ನಡೆಸಿದಾಗ ತಾಲೂಕಿನ ಗಡಿಭಾಗದ ತಾಳೆಕೆರೆಯ ಮಾವಿನ ತೋಟದ ನಿರ್ಜನ ಪ್ರದೇಶದಲ್ಲಿ ಯುವಕ ಒಬ್ಬನೆ ಕುಳಿತಿರುವುದು ಪತ್ತೆಹಚ್ಚಿ ಆತನನ್ನು ರಕ್ಷಿಸಿ ಆತನ ತಾಯಿಗೆ ಕರೆ ಮಾಡಿದರು. ತಾಯಿ ಸ್ಥಳಕ್ಕೆ ಆಗಮಿಸಿದ ನಂತರ ಮಗನನ್ನು ತಾಯಿಯ ವಶಕ್ಕೆ ನೀಡಿ ಮಾನವೀಯತೆ ಮೆರೆದರು. ಒಬ್ಬನೆ ಮಗನಾದ್ದರಿಂದ ತಾಯಿ ತೀವ್ರ ಆತಂಕಕ್ಕೆ ಒಳಗಾಗಿ ಕುಣಿಗಲ್ ಪೊಲೀಸರ ಕಾರ್ಯಕ್ಕೆ ಮನದ ದುಂಬಿ ಹಾರೈಸಿದರು. ಯುವಕ ಖಿನ್ನತೆಯಿಂದ ಬಳಲುತ್ತಿದ್ದ ಎನ್ನಲಾಗಿದೆ.
Comments are closed.