ತುರುವೇಕೆರೆ: ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ನಾಫೆಡ್ ಕೊಬ್ಬರಿ ಖರೀದಿ ಕೇಂದ್ರಕ್ಕೆ ಲೋಕಾಯುಕ್ತ ಪೊಲೀಸ್ ಇನ್ಸ್ ಪೆಕ್ಟರ್ ಶಿವರುದ್ರಪ್ಪ ಮೇಟಿ ದಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಾಫೆಡ್ ಕೇಂದ್ರದ ಬಳಿ ಇದ್ದ ರೈತರೊಂದಿಗೆ ಖರೀದಿ ಕೇಂದ್ರದಲ್ಲಿನ ನ್ಯೂನತೆಗಳ ಬಗ್ಗೆ ವಿಚಾರಿಸಿದರು, ರೈತರು ಕೊಬ್ಬರಿ ಚೀಲ ಖರೀದಿ ಕೇಂದ್ರಕ್ಕೆ ಒಯ್ಯಲು ಪ್ರತಿ ಚೀಲಕ್ಕೆ ಲೋಡರ್ ಗಳಿಗೆ 40 ರೂ. ಕೊಡಲಾಗುತ್ತಿದೆ ಎಂದು ರೈತರಿಂದ ಮಾಹಿತಿ ಪಡೆದುಕೊಂಡರು. ಆನಂತರ ಖರೀದಿ ಕೇಂದ್ರದ ಸಿಬ್ಬಂದಿ ರೈತರಿಂದ ಚೀಲಕ್ಕೆ ಹಣ ಪಡೆಯುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ರೈತರಿಂದ ಚೀಲ ಇಳಿಸಿಕೊಳ್ಳಲು ಯಾವುದೇ ಕಾರಣಕ್ಕೂ ಹಣ ವಸೂಲಿ ಮಾಡದಂತೆ ತಾಕೀತು ಮಾಡಿದ ಅವರು ಲೋಡರ್ ಗಳಿಗೆ ನಾಫೆಡ್ ಖರೀದಿ ಕೇಂದ್ರದ ಜವಾಬ್ದಾರಿ ಹೊತ್ತವರು ನೀಡುತ್ತಾರೆ. ರೈತರು ಚೀಲ ಇಳಿಸಲು ಹಣ ಕೇಳಿದರೇ ಲೋಕಾಯುಕ್ತ ಕಚೇರಿಗೆ ಕರೆ ಮಾಡುವಂತೆ ತಿಳಿಸಿದರು.
ರೈತರನ್ನು ವಿನಾಕಾರಣ ಕಾಯಿಸದೆ ಅವರು ತಂದ ಉತ್ತಮ ಗುಣಮಟ್ಟದ ಕೊಬ್ಬರಿ ಖರೀದಿಸುವಂತೆ ಸಿಬ್ಬಂದಿಗೆ ತಿಳಿಸಿದರು. ಅಲ್ಪ ಪ್ರಮಾಣದ ಚೂರು ಕೊಬ್ಬರಿ ಖರೀದಿಸುವಂತೆ ಸೂಚನೆ ನೀಡಿದರು.
ನಾಫೆಡ್ ಖರೀದಿ ಕೇಂದ್ರಕ್ಕೆ ಭೇಟಿ ನೀಡುವ ಮೋದಲು ಎಪಿಎಂಸಿ ಕಚೇರಿಗೆ ಭೇಟಿ ನೀಡಿ ಸಿಬ್ಬಂದಿ ಹಾಜರಾತಿ ವಹಿ ಪರಿಶೀಲಿಸಿದರು. ಎಪಿಎಂಸಿ ಕಚೇರಿಯ ಮುಂದೆ ಲೋಕಾಯುಕ್ತರ ಪ್ರಕಟಣಾ ಫಲಕವನ್ನು ಕೂಡಲೇ ಅಳವಡಿಸುವಂತೆ ಸೂಚನೆ ನೀಡಿದರು.
ಈ ವೇಳೆ ತಾಲೂಕು ತೆಂಗು ಮತ್ತು ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ಎನ್.ಆರ್. ಜಯರಾಮ್, ಎಪಿಎಂಸಿ ಮ್ಯಾನೇಜರ್ ಹನುಮಂತರಾಜು ಹಾಗೂ ನಾಫೆಡ್ ಖರೀದಿ ಕೇಂದ್ರದ ಸಿಬ್ಬಂದಿ ಹಾಜರಿದ್ದರು.
Comments are closed.