ತುರುವೇಕೆರೆ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ತಾಯಿಯ ಗರ್ಭದಲ್ಲಿ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿ ಆಸ್ಪತ್ರೆ ಎದುರು ಮಗುವಿನ ಶವವಿಟ್ಟು ಕರುನಾಡ ವಿಜಯಸೇನೆ, ಆಟೋ ಚಾಲಕ ಸಂಘದ ಪದಾಧಿಕಾರಿಗಳು ಹಾಗೂ ಮೃತ ಮಗುವಿನ ಸಂಬಂಧಿಕರು ಪ್ರತಿಭಟನೆ ನಡೆಸಿದರು.
ಈ ವೇಳೆ ಕರುನಾಡ ವಿಜಯ ಸೇನೆಯ ಸುರೇಶ್ ಮಾತನಾಡಿ, ತುರುವೇಕೆರೆ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಸೇವೆ ಅಲಭ್ಯವಾಗಿದೆ. ಅದರಲ್ಲೂ ಹೆರಿಗೆಗೆ ಬರುವ ಬಡ ರೋಗಿಗಳು ಹಣ ಕೊಟ್ಟು ಸೇವೆ ಪಡೆಯುವಂತಾಗಿದೆ. ಹಣವಿಲ್ಲದೇ ಸರಕಾರಿ ಆಸ್ಪತ್ರೆಯ ಸೇವೆಗಳು ಬಡವರಿಗೆ ದೊರಕದಂತಾಗಿದೆ. ಸರಕಾರಿ ಆಸ್ಪತ್ರೆಯ ವೈದ್ಯರು ಪಟ್ಟಣದಲ್ಲಿ ಖಾಸಗಿ ಆಸ್ಪತ್ರೆ ತೆರೆದಿದ್ದು ಸರಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ತಮ್ಮ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುತ್ತಾರೆ. ಕಳೆದ ಕೆಲ ತಿಂಗಳಿಂದ ಹೆರಿಗೆ ಸಂದರ್ಭದಲ್ಲಿ ಶಿಶುಗಳ ಮರಣ ಹೆಚ್ಚುತ್ತಿದ್ದು ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣವಾಗಿದ್ದು, ಇದಕ್ಕೆ ಕಾರಣವಾದ ವೈದ್ಯರನ್ನು ತಕ್ಷಣ ಅಮಾನತು ಮಾಡಬೇಕು ಹಾಗೂ ಸರಕಾರಿ ಆಸ್ಪತ್ರೆಯ ವೈದ್ಯರು ತೆರೆದಿರುವ ಖಾಸಗಿ ಕ್ಲೀನಿಕ್ ಗಳನ್ನು ಮುಚ್ಚುವಂತೆ ಆಗ್ರಹಿಸಿದರು.
ಪ್ರತಿಭಟನೆ ಸುದ್ದಿ ತಿಳಿದ ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಪ್ರತಿಭಟನಾಕಾರರ ಮನವಿ ಆಲಿಸಿದರು. ಆಡಳಿತ ವೈದ್ಯಾಧಿಕಾರಿ ಡಾ.ಹರಿ ಪ್ರಸಾದ್ ಅವರನ್ನು ಕರೆದು ಆರೋಗ್ಯ ಸೇವೆ ಬಡವರಿಗೆ ಲಭ್ಯವಾಗುವಂತೆ ಸೂಚನೆ ನೀಡಿದ ಅವರು ಶಿಶು ಮರಣಕ್ಕೆ ನೈಜ ಕಾರಣ ಪತ್ತೆ ಹಚ್ಚುವ ಮೂಲಕ ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸುವಂತೆ ಸೂಚನೆ ನೀಡಿದರು.
ಪ್ರತಿಭಟನೆ ಸುದ್ದಿ ತಿಳಿದು ತಾಲೂಕು ಆಸ್ಪತ್ರೆಯ ಉಸ್ತುವಾರಿ ಹಾಗೂ ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಚಂದ್ರಶೇಖರ್ ಆಗಮಿಸಿ ಪ್ರತಿಭಟನಾಕಾರರ ಮನವಿ ಆಲಿಸಿದರು. ಪ್ರತಿಭಟನಾಕಾರರ ಆರೋಪದ ಮೇರೆಗೆ ಡಾ. ಮುರುಳಿ ಅವರನ್ನು ತಕ್ಷಣ ಜಾರಿಗೆ ಬರುವಂತೆ ತಾಲೂಕು ಆಸ್ಪತ್ರೆಯ ಸೇವೆಯಿಂದ ಬಿಡುಗಡೆ ಮಾಡಲಾಗುವುದು. ಘಟನೆ ಕುರಿತಂತೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
ತಾಲೂಕು ಆಸ್ಪತ್ರೆಯ ಉಸ್ತುವಾರಿ ಡಾ.ಚಂದ್ರಶೇಖರ್ ನೀಡಿದ ಭರವಸೆಯ ಮೇರೆಗೆ ಪ್ರತಿಭಟನೆ ಕೈಬಿಡಲಾಯಿತು. ಪಿಎಸ್ಐ ರಾಮಚಂದ್ರಪ್ಪ ಆಸ್ಪತ್ರೆ ಬಳಿ ಅಗತ್ಯ ಬಂದೋಬಸ್ತ್ ಕಲ್ಪಿಸಿದ್ದರು.
ಪ್ರತಿಭಟನೆಯಲ್ಲಿ ಕರುನಾಡ ವಿಜಯ ಸೇನೆಯ ಮಂಜುನಾಥ್ ಮುನಿಯೂರು, ಕೃಷ್ಣಮೂರ್ತಿ, ಆಟೋ ಚಾಲಕರ ಸಂಘದ ಅಧ್ಯಕ್ಷ ಗಂಗಾಧರ್, ಮಾಹಿತಿ ಹಕ್ಕು ಕಾರ್ಯಕರ್ತ ದೊರೆಸ್ವಾಮಿ, ಪದಾಧಿಕಾರಿಗಳಾದ ಚಂದ್ರಣ್ಣ, ಗುಂಡ, ಲೋಕೇಶ್, ಲಿಂಗರಾಜ್ ಮತ್ತಿತರಿದ್ದರು.
Comments are closed.