ತುಮಕೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಿದ್ದೇ ಬಂದಿದ್ದು, ತಮ್ಮ ಪ್ರಣಾಳಿಕೆಯಲ್ಲಿ ಘೋಷಿಸಿದ್ದ 5 ಉಚಿತ ಗ್ಯಾರಂಟಿಗಳ ಜಾರಿಗೆ ಮುಂದಾಗಿದೆ. ಆದರೆ ಫಲಾನುಭವಿಗಳು ಯೋಜನೆಯ ಫಲ ಪಡೆಯಲು ಬೇಕಿರುವ ಅಗತ್ಯ ದಾಖಲೆ ಪಡೆಯಲು, ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸಲು ಕಚೇರಿಗಳಿಗೆ ಮುಗಿಬೀಳುತ್ತಿದ್ದಾರೆ.
ಹೌದು, ಗೃಹ ಲಕ್ಷ್ಮಿ, ಗೃಹಜ್ಯೋತಿ, ಉಚಿತ ಬಸ್ ಪ್ರಯಾಣದ ಶಕ್ತಿಯೋಜನೆ, ಅನ್ನ ಭಾಗ್ಯ ಯೋಜನೆ ಜಾರಿಗೆ ಸರ್ಕಾರ ಮುಂದಾಗಿದೆ. ಇದಾಗಲೇ ಶಕ್ತಿ ಯೋಜನೆ ಜಾರಿಯಾಗಿದ್ದು, ಮಹಿಳೆಯರು ಭರ್ಜರಿ ಟೂರ್ ಹೊಡೆಯುತ್ತಿರುವುದನ್ನು ನಿತ್ಯ ನೋಡುತ್ತಿದ್ದೇವೆ. ಇನ್ನು ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಇನ್ನೇನು ಗೃಹ ಲಕ್ಷ್ಮಿ ಯೋಜನೆಗೂ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗುತ್ತದೆ. ಯೋಜನೆಯ ಪ್ರಯೋಜನ ಪಡೆಯಲು ಅಗತ್ಯ ದಾಖಲೆಗಳು ಬೇಕು, ಆದರೆ ಸರಿಯಾದ ದಾಖಲೆಗಳಿಲ್ಲದೆ ಜನರು ಕಚೇರಿಗಳಿಗೆ ಸುತ್ತುವಂತಾಗಿದೆ.
ತುಮಕೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಸ್ಪಂದನಾ ಕೇಂದ್ರದಲ್ಲಿ ಆಧಾರ್ ಕಾರ್ಡ್ ಅಪ್ ಡೇಟ್ ಹಾಗೂ ಕೆಲವು ತಿದ್ದುಪಡಿಗಾಗಿ ಜನಸಾಮಾನ್ಯರು ನಿತ್ಯ ಜಮಾಯಿಸುತ್ತಿದ್ದಾರೆ.
ಈಗಾಗಲೇ ಗೃಹ ಜ್ಯೋತಿ ಯೋಜನೆಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲಾಗುತ್ತಿದೆ. ಆದರೆ ಅರ್ಜಿಸಲ್ಲಿಕೆಗೆ ವಿಳಾಸದ ಸಮಸ್ಯೆ, ಹೆರಿದ್ದರೆ ಇನಿಷಿಯಲ್ ಇಲ್ಲದಿರುವುದು. ಹೆಸರು ತಪ್ಪಾಗಿರುವುದು ಅರ್ಜಿ ಸಲ್ಲಿಸಲು ಸಮಸ್ಯೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜನರು ನಿತ್ಯ ಆಧಾರ್ ಅಪ್ ಡೇಟ್ ಗಾಗಿ ಸ್ಪಂದನಾ ಕೇಂದ್ರಕ್ಕೆ ಎಡತಾಕುತ್ತಿದ್ದಾರೆ.
ಇನ್ನು ಮುಂದೆ ಗೃಹಲಕ್ಷ್ಮಿ ಯೋಜನೆಗೂ ಅರ್ಜಿ ಸಲ್ಲಿಸಬೇಕಿರುವುದರಿಂದ ಅಲ್ಲಿಯೂ ಆಧಾರ್ ಕಾರ್ಡ್ ಪ್ರಮುಖವಾಗಿರುತ್ತದೆ, ಆಧಾರ್ ನಲ್ಲಿ ಯಾವುದೇ ರೀತಿ ತಪ್ಪುಗಳಿದ್ದಲ್ಲಿ ಯೋಜನೆ ಕೈತಪ್ಪಬಹುದು ಎಂಬ ಉದ್ದೇಶದಿಂದ ಆಧಾರ್ ನಲ್ಲಿನ ದೋಷಗಳನ್ನು ಸರಿಪಡಿಸಲು ಸಹ ಫಲಾನುಭವಿಗಳು ಸ್ಪಂದನಾ ಕೇಂದ್ರದತ್ತ ಆಗಮಿಸುತ್ತಿದ್ದಾರೆ.
ಸರ್ಕಾರ ಉತ್ತಮ ಯೋಜನೆ ಜಾರಿ ಮಾಡಿದೆ, ಗೃಹ ಜ್ಯೋತಿ, ಗೃಹಲಕ್ಷ್ಮಿ ಯೋಜನೆಗೆ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಆದರೆ ನನ್ನ ಆಧಾರ್ ಕಾರ್ಡ್ನಲ್ಲಿ ವಿಳಾಸ ತಪ್ಪಿದೆ. ಈ ಯೋಜನೆಗಳಿಗೆ ಅರ್ಜಿ ಸಲ್ಲಿಸಿದ ನಂತರ ಏನಾದರೂ ಸಮಸ್ಯೆ ಆಗಬಾರದು ಎಂಬ ಉದ್ದೇಶದಿಂದ ತಿದ್ದುಪಡಿ ಮಾಡಸಲು ಬಂದಿದ್ದೇನೆ, ಇಲ್ಲಿ ಜನರು ಹೆಚ್ಚಿಗೆ ಇರುವುದರಿಂದ ತಿದ್ದುಪಡಿ ಮಾಡಿಸಲು ದಿನವಿಡೀ ಕಾಯುವಂತಾಗಿದೆ ಎಂದು ನಗರದ ಮರಳೂರು ದಿಣ್ಣೆಯ ಜಯಮ್ಮ ಎಂಬುವವರು ಬೇಸರ ವ್ಯಕ್ತಪಡಿದರು.
ಒಟ್ಟಾರೆ ಸರ್ಕಾರದ ಗ್ಯಾರಂಟಿ ಯೋಜನೆ ಪಡೆಯಲೇ ಬೇಕು ಎಂದು ತೀರ್ಮಾನಿಸಿರುವ ಜನರು ಆಧಾರ್ ಕಾರ್ಡ್ ಅಪ್ ಡೇಟ್ ಗೆ ಸೇವಾಕೇಂದ್ರ, ತುಮಕೂರು ಒನ್ ಸೇರಿದಂತೆ ಸ್ಪಂದನಾ ಕೇಂದ್ರಗಳತ್ತ ನಿತ್ಯ ಆಗಮಿಸುತ್ತಿದ್ದು, ಜರೂರಾಗಿ ತಿದ್ದುಪಡಿ ಮಾಡಿಕೊಡಬೇಕು ಎಂಬ ಒತ್ತಾಯ ಸಾರ್ವಜನಿಕರಿಂದ ಕೇಳಿ ಬಂದಿದೆ.
ಪಿಂಚಣಿ ಪಡೆಯಲು ಆಧಾರ್ ತಿದ್ದುಪಡಿ!
ಆಧಾರ್ ತಿದ್ದುಪಡಿ ಕೇವಲ ಗ್ಯಾರಂಟಿ ಯೋಜನೆ ಮಾತ್ರ ಪಡೆಯಲು ಅಲ್ಲ ಸಾರ್, ಪಿಂಚಣಿ ಪಡೆಯಲು ಸಹ ತಿದ್ದುಪಡಿ ಮಾಡಿಸಲಾಗುತ್ತಿದೆ. ಕೆಲವರು ಕಮ್ಮಿ ವಯಸ್ಸಿನವರು 60 ವರ್ಷ ಹಾಕಿಸಿಕೊಂಡು ಪಿಂಚಣಿ ಪಡೆಯಲು ಮುಂದಾಗುತ್ತಿದ್ದಾರೆ. ನಮಗೆ 60ವರ್ಷ ದಾಟಿದೆ, ಆಧಾರ್ ಕಾರ್ಡ್ನಲ್ಲಿ ಕಮ್ಮಿ ಇದೆ, ಇದನ್ನು ತಿದ್ದುಪಡಿ ಮಾಡಿಕೊಡಿ ಎಂದು ಸ್ಪಂದನಾ ಕೇಂದ್ರಕ್ಕೆ ಬರುತ್ತಿದ್ದಾರೆ ಸಾರ್ ಎಂದು ಹೆಸರೇಳದ ಸಿಬ್ಬಂದಿ ತಿಳಿಸಿದ್ದಾರೆ.
Comments are closed.