ಬಾಬೂಜಿ ಚಿಂತನೆ ಸರ್ವಕಾಲಕ್ಕೂ ಮಾದರಿ

ಯುವ ಪೀಳಿಗೆ ಬಾಬೂಜಿ ಜೀವನ ಚರಿತ್ರೆ ತಿಳಿಯಲಿ: ಜಿಲ್ಲಾಧಿಕಾರಿ

125

Get real time updates directly on you device, subscribe now.


ತುಮಕೂರು: ಹಸಿರು ಕ್ರಾಂತಿಯ ಹರಿಕಾರ, ರಾಷ್ಟ್ರ ನಾಯಕ ಡಾ.ಬಾಬು ಜಗಜೀವನ ರಾಂ ಅವರ ಆದರ್ಶ ಹಾಗೂ ಚಿಂತನೆಗಳು ಎಲ್ಲಾ ಕಾಲಕ್ಕೂ ಮಾದರಿಯಾಗಿದ್ದು, ಅವರ ವ್ಯಕ್ತಿತ್ವ ಹಾಗೂ ಜೀವನ ಚರಿತ್ರೆಯನ್ನು ಅರಿತು ಇಂದಿನ ಯುವ ಪೀಳಿಗೆ ಮುನ್ನಡೆಯಬೇಕಿದೆ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಡಾ.ಬಾಬು ಜಗಜೀವನ ರಾಂ ಅವರ 37ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ವಾತಂತ್ರ್ಯ ಬಂದ ನಂತರ ಭಾರತದಲ್ಲಿ ಹಸಿವು ಒಂದು ಪಿಡುಗಾಗಿ ಸಂಭವಿಸಿತ್ತು. ಆ ಸಮಯದಲ್ಲಿ ಡಾ.ಬಾಬು ಜಗಜೀವನ ರಾಂ ಅವರು ಕೃಷಿ ಕ್ಷೇತ್ರದಲ್ಲಿ ಹಸಿರು ಕ್ರಾಂತಿಯನ್ನು ದೇಶದ ಉದ್ದಗಲಕ್ಕೂ ಹಬ್ಬಿಸುವ ಮೂಲಕ ಆಹಾರ ಉತ್ಪಾದನೆ ಹೆಚ್ಚು ಮಾಡಿದ್ದರು ಎಂದು ತಿಳಿಸಿದರು.
ಡಾ.ಬಾಬು ಜಗಜೀವನ ರಾಂ ಅವರು ತಮ್ಮ ಶಾಲಾ ದಿನಗಳಲ್ಲಿ ಅಸ್ಪಶ್ಯತೆ ಮೆಟ್ಟಿ ನಿಂತು ಉನ್ನತ ಪದವಿ ಶಿಕ್ಷಣ ಪಡೆದು ಭಾರತ ಸರ್ಕಾರದಲ್ಲಿ ರಕ್ಷಣಾ, ಕೃಷಿ, ಕಾರ್ಮಿಕ ಸಚಿವರಾಗಿ ಹಾಗೂ ಉಪ ಪ್ರಧಾನಿಯಾಗಿ ಸೇವೆ ಸಲ್ಲಿಸಿರುತ್ತಾರೆ ಎಂದು ತಿಳಿಸಿದರು.

ದೇಶದಾದ್ಯಂತ ಅವರ ಹೆಸರಿನಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳು ಹಾಗೂ ರೈಲ್ವೆ ಇಲಾಖೆಯ ಲೋಕೋಮೋಟಿವ್ ಟ್ರೈನಿಂಗ್ ಇನ್ಸಿಟ್ಯೂಟ್ ಇರುತ್ತವೆ, ಡಾ.ಬಾಬು ಜಗಜೀವನ ರಾಂ ಅವರ ಹೆಸರಿನಲ್ಲಿ ಶಿಕ್ಷಣ ಸಂಸ್ಥೆಗಳು ಇರುವುದು ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು.

ರಕ್ಷಣ ಸಚಿವರಾಗಿದ್ದ ಸಮಯದಲ್ಲಿ ದೇಶದ ಭದ್ರತೆಗಾಗಿ ಹಲವಾರು ಭದ್ರತಾ ನಿಯಮಗಳನ್ನು ರೂಪಿಸಿದ್ದು, ಅದರಂತೆ ಇಂದಿಗೂ ಸದರಿ ನಿಯಮಗಳು ಪಾಲನೆಯಾಗುತ್ತಿವೆ. ಇಂತಹ ಮಹನೀಯರ ತತ್ವಾದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕೆಂದು ಕರೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ ಮಾತನಾಡಿ, ಬಾಬೂಜಿ ಎಂದೇ ಪ್ರಖ್ಯಾತಿ ಪಡೆದ ಡಾ.ಬಾಬು ಜಗಜೀವನ ರಾಂ ಅವರು ಎಲ್ಲಾ ವರ್ಗದ ಜನರ ಒಳಿತಿಗಾಗಿ ಅವರು ನಿರ್ವಹಿಸಿದ್ದ ಇಲಾಖೆಗಳ ಮೂಲಕ ದೊಡ್ಡ ಕ್ರಾಂತಿ ಉಂಟು ಮಾಡಿದ್ದರೆಂದು ತಿಳಿಸಿದರು.

ಸಮುದಾಯದ ಮುಖಂಡ ವೈ.ಎಸ್.ಹುಚ್ಚಯ್ಯ ಮಾತನಾಡಿ, ಡಾ.ಬಾಬು ಜಗಜೀವನ ರಾಂ ಅವರು ರಕ್ಷಣಾ ಖಾತೆ ಸಚಿವರಾಗಿದ್ದ ಸಮಯದಲ್ಲಿ ಭಾರತದ ರಕ್ಷಣಾ ಇಲಾಖೆಯು ಎಷ್ಟು ಬಲಿಷ್ಠವಾಗಿದೆ ಎಂದು ವಿಶ್ವಕ್ಕೆ ತೋರಿಸಿ ಕೊಟ್ಟಿದ್ದರು ಹಾಗೂ ಬಾಂಗ್ಲಾ ದೇಶದ ವಿಭಜನೆಯಲ್ಲಿ ಭಾರತಕ್ಕೆ ಗೌರವ ತಂದು ಕೊಟ್ಟಿದ್ದರು ಎಂದು ಸ್ಮರಿಸಿದರು.

ಈ ಸಂದರ್ಭ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಪ್ರಭು, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಉಪ ವಿಭಾಗಾಧಿಕಾರಿ ಹೆಚ್.ಶಿವಪ್ಪ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ದಿನೇಶ್.ಬಿ.ಎಂ, ಆದಿ ಜಾಂಭವ ಅಭಿವೃದ್ಧಿ ನಿಗಮ ಜಿಲ್ಲಾ ವ್ಯವಸ್ಥಾಪಕ ಜಯರಾಂ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಮಂಜುನಾಥ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಮುದಾಯದ ಮುಖಂಡರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!