ತುರುವೇಕೆರೆ: ತಾಲೂಕಿನ ತೂಯಲಹಳ್ಳಿ ಗ್ರಾಮದ ಬಾಲಕಿ ಮನೆ ಕಟ್ಟಿಕೊಳ್ಳಲು ನಿವೇಶ ನೀಡುವಂತೆ ರಾಷ್ಟ್ರಪತಿಗಳಿಗೆ ಕಳೆದ ತಿಂಗಳ 29 ರಂದು ಪತ್ರ ಬರೆದು ಮನವಿ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ.
ತಾಲೂಕಿನ ಮಾಯಸಂದ್ರ ಹೋಬಳಿ ತೂಯಲಹಳ್ಳಿ ಗ್ರಾಮದ ನಿವಾಸಿ ನಾಗರಾಜ್ ಎಂಬುವರ ಮಗಳ ಲಕ್ಷ್ಮೀ (11) ಮನೆ ನಿರ್ಮಿಸಿಕೊಳ್ಳಲು ನಿವೇಶನ ನೀಡುವಂತೆ ಮನವಿ ಮಾಡಿರುವ ಬಾಲಕಿಯಾಗಿದ್ದು, ತೂಯಲಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ.
ಈ ಬಾಲಿಕಿಯ ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದು, ಇರಲು ಮನೆ ಕೂಡ ಇಲ್ಲ, ಯಾವುದೇ ಸರ್ಕಾರಗಳು ಬಂದರೂ ಬಡವರ ಬಗ್ಗೆ ಕಾಳಜಿ ತೋರಲ್ಲ. ನಿವೇಶನ, ಮನೆ ನೀಡುತ್ತೇವೆ ಎಂದು ಹೇಳುವ ಆಳುವ ಮಂದಿ ಕೊಟ್ಟ ಮಾತಿನಂತೆ ನಡೆಯುವುದೇ ಇಲ್ಲ, ಇದರಿಂದ ಬಡವರ ನಿವೇಶನ, ಸೂರು ಪಡೆಯುವ ಆಸೆ ಕೇವಲ ಆಸೆಯಾಗಿಯೇ ಉಳಿಯಲಿದೆ. ಇಲ್ಲಿ ಬಾಲಕಿ ಲಕ್ಷ್ಮಿ ಕುಟುಂಬಕ್ಕೂ ಈ ವರೆಗೂ ಯಾವುದೇ ಸರ್ಕಾರಿಂದ ಸೌಲಭ್ಯ ಸಿಕ್ಕಿಲ್ಲ. ಸ್ಥಳೀಯ ಆಡಳಿತಗಳೂ ಈ ಕುಟುಂಬಕ್ಕೆ ನೆರವು ನೀಡುವ ಸೌಜನ್ಯವನ್ನೂ ತೋರುತ್ತಿಲ್ಲ, ಇದರಿಂದ ಬೇಸತ್ತ ಬಾಲಕಿ ರಾಷ್ಟ್ರಪತಿಗಳಿಗೇ ಪತ್ರ ಬರೆಯುವ ಮುಖೇನ ನಿವೇಶನಕ್ಕಾಗಿ ಮನವಿ ಮಾಡಿಕೊಂಡಿದ್ದಾಳೆ.
ಪತ್ರದ ಸಾರಾಂಶ…
ನಾನು ತಂದೆ, ತಾಯಿ ಹಾಗೂ ಇಬ್ಬರು ಸಹೋದರಿಯೊಂದಿಗೆ ಗುಡಿಸಲಿನಲ್ಲಿ ವಾಸವಿದ್ದೇನೆ, ನಾವು ಸದ್ಯ ವಾಸಿಸುತ್ತಿರುವ ಸ್ಥಳದಲ್ಲಿ ಮನೆ ಕಟ್ಟಿಕೊಳ್ಳಲು ನಮ್ಮ ಸಂಬಂಧಿಕರು ತಕರಾರು ಮಾಡುತ್ತಿದ್ದಾರೆ. ನಾವುಗಳು ಗುಡಿಸಲಿನಲ್ಲಿ ವಾಸವಿದ್ದೇವೆ. ಮನೆ ಕಟ್ಟಿಕೊಳ್ಳಲು ನಿವೇಶನವಿಲ್ಲ.
ಮಳೆಗಾಲ ಶುರುವಾದರೇ ಗುಡಿಸಿಲಿನಲ್ಲಿ ವಾಸವಿರುವ ನಮ್ಮ ಕುಟುಂಬದ ಸದಸ್ಯರೆಲ್ಲರೂ ಆತಂಕದಲ್ಲಿ ಕಾಲ ಕಳೆಯುವಂತಾಗಿದೆ. ದಯಮಾಡಿ ತಾವುಗಳು ನಮಗೆ ಮನೆ ನಿರ್ಮಿಸಿಕೊಳ್ಳುವುದಕ್ಕಾಗಿ ನಿವೇಶನ ಕೊಡಿಸಿ ಎಂದು ರಾಷ್ಟ್ರಪತಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ತಹಶೀಲ್ದಾರ್ ಭೇಟಿ…
ತೂಯಲಹಳ್ಳಿ ಸರಕಾರಿ ಶಾಲೆಯ ವಿದ್ಯಾರ್ಥಿನಿ ಲಕ್ಷ್ಮಿ ನಿವೇಶನಕ್ಕಾಗಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿರುವ ಹಿನ್ನಲೆಯಲ್ಲಿ ವಿಷಯ ತಿಳಿದ ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಅವರು ಗ್ರಾಮ ಲೆಕ್ಕಿಗರು ಹಾಗೂ ಸ್ಥಳೀಯ ಪಂಚಾಯಿತಿ ಪಿಡಿಓ ಅವರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಿವೇಶನ ಮಂಜೂರಾತಿ ಕುರಿತಂತೆ ಪಿಡಿಓ ಅವರು ತುರ್ತು ಕ್ರಮ ವಹಿಸುವಂತೆ ಸೂಚನೆ ನೀಡಿದ್ದಾರೆ.
ಈ ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯಿಸಿರುವ ಬಾಲಕಿ ನಾವು ತುಂಬಾ ದಿನದಿಂದ ಗುಡಿಸಲಿನಲ್ಲಿ ವಾಸವಿದ್ದೇವೆ. ನಮಗೆ ಯಾರೂ ಸಹಾಯ ಮಾಡಲು ಮುಂದೆ ಬರುತ್ತಿಲ್ಲ. ಅಧಿಕಾರಿಗಳು ಕೂಡ ನಮ್ಮ ಕಷ್ಟಕ್ಕೆ ಆಗುತ್ತಿಲ್ಲ. ನಮ್ಮ ಅಪ್ಪ ಅಮ್ಮ ಕಷ್ಟಪಟ್ಟು ದುಡಿದು ನಮ್ಮನ್ನು ಓದಿಸುತ್ತಿದ್ದಾರೆ. ನಮಗೆ ಇರಲು ಮನೆಯಿಲ್ಲದ ಕಾರಣ ಒಂದು ನಿವೇಶನ ಕೊಡಿಸುವಂತೆ ದೇಶದ ರಾಷ್ಟಪತಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದೇನೆ. ಅಲ್ಲಿಂದ ನಮಗೆ ನಿವೇಶನ ಸಿಗುವ ಭರವಸೆ ಇದೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಆಡಳಿತಗಳ ಅಸಡ್ಡಗೆ ಬೇಸತ್ತು ಬಾಲಕಿ ರಾಷ್ಟ್ರಪತಿಗಳಿಗೇ ಪತ್ರ ಬರೆಯುವ ಮುಖೇನ ತಮ್ಮ ಸಮಸ್ಯೆ ಹೇಳಿಕೊಂಡಿದ್ದಾಳೆ. ರಾಷ್ಟ್ರಪತಿ ಕಚೇರಿಯಿಂದ ಯಾವ ಉತ್ತರ ಬರಲಿದೆ, ಬಾಲಕಿ ಮನವಿಗೆ ಪರಿಹಾರ ಸಿಗುತ್ತಾ ಎಂಬುದನ್ನು ಕಾದುನೋಡಬೇಕಿದೆ.
Comments are closed.