ಹುಳಿಯಾರು: ಗೆದ್ದೆತ್ತಿನ ಬಾಲ ಹಿಡಿಯೋರೇ ಹೆಚ್ಚು ಎನ್ನುವ ಈ ಕಾಲಘಟ್ಟದಲ್ಲಿ ಸೋತವರಿಗೆ ಸನ್ಮಾನಿಸಿ ನಿಮ್ಮೊಂದಿಗೆ ನಾವಿದ್ದೇವೆ ಕುಗ್ಗಬೇಡಿ ಎಂದು ಆತ್ಮಸ್ಥೈರ್ಯ ತುಂಬಿರುವ ಘಟನೆ ಹುಳಿಯಾರಿನಲ್ಲಿ ನಡೆದಿದೆ.
ಹುಳಿಯಾರು ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಕರ್ನಾಟಕ ರಕ್ಷಣ ವೇದಿಕೆಯ ಕಲಾವಿದ ಗೌಡಿ, ಸ್ಟುಡಿಯೋ ಯತೀಶ್, ಕೊರಿಯರ್ ಹರೀಶ್ ಅವರುಗಳು ವಿವಿಧ ವಾರ್ಡ್‌ಗಳಲ್ಲಿ ಸ್ಪರ್ಧಿಸಿದ್ದರು. ದುರಾದೃಷ್ಟವಶತ್ ಈ ಮೂವರೂ ಸೋಲನ್ನನುಭವಿಸಿದ್ದರು, ಇವರನ್ನು ಕರವೇಯ ಅಧ್ಯಕ್ಷ ಕೋಳಿಶ್ರೀನಿವಾಸ್ ಸನ್ಮಾನಿಸಿ ಸೋಲು ಗೆಲುವು ಶಾಶ್ವತವಲ್ಲ ಅದು ಸದಾ ಬದಲಾಗುವ ಸಾಮಾನ್ಯ ಪ್ರಕ್ರಿಯೆ, ಇಂದು ಸೋತವರು ನಾಳೆ ಗೆಲ್ಲುತ್ತಾರೆ ಅದಕ್ಕೆ ಚಿಂತಿಸುವ ಅಗತ್ಯವಿಲ್ಲ ಎಂದು ಧೈರ್ಯ ತುಂಬಿದ್ದಾರೆ.
ಇಂದಿನ ಚುನಾವಣೆಗಳು ಜಾತಿ, ಹಣ, ಪ್ರಭಾವದ ಮೇಲೆ ನಡೆಯುತ್ತವೆ. ಹಾಗಾಗಿ ನಿಮ್ಮ ಸೇವಾಮನೋಭಾವ ಗುರುತಿಸುವಲ್ಲಿ ಮತದಾರರು ಸೋತಿದ್ದಾರೆ ವಿನಃ ನೀವು ಸೋತಿಲ್ಲ, ಹಾಗಂತ ತಮ್ಮಲ್ಲಿರುವ ಸೇವಾಗುಣ ಬಿಡದೆ ಮುಂದುವರಿಸಿ ಮುಂದೊಂದು ದಿನ ಮತದಾರರಿಗೆ ತಮ್ಮ ತಪ್ಪಿನ ಅರಿವಾಗಿ ನಿಮ್ಮ ಕೈ ಹಿಡಿಯುತ್ತಾರೆ. ಸೋಲು ಗೆಲುವಿನ ಮೆಟ್ಟಿಲು ಯಾರು ಕುಗ್ಗುವ ಅವಶ್ಯಕತೆ ಇಲ್ಲ ಎಲ್ಲರೂ ಒಗ್ಗಟ್ಟಾಗಿ ಗ್ರಾಮವನ್ನು ಅಭಿವೃದ್ಧಿದತ್ತ ಗಮನ ಹರಿಸೋಣ ಎಂದು ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಮೆಡಿಕಲ್ ಚನ್ನಬಸವಯ್ಯ, ಬಾಳೆಕಾಯಿ ಲಕ್ಷ್ಮೀಕಾಂತ್, ಬಸವರಾಜು, ನವೀನ್, ದಿವಾಕರ್, ಸಂತೋಷ್, ನಾಗರಾಜು, ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.
Comments are closed.