ತುಮಕೂರು: ವಿದ್ಯಾರ್ಥಿಗಳು ಪರಿಶ್ರಮದ ವ್ಯಾಸಂಗದೊಂದಿಗೆ ತಮ್ಮ ಜೀವನ ಉತ್ತಮಪಡಿಸಿಕೊಂಡು ಒಳ್ಳೆಯ ಬದುಕು ರೂಪಿಸಿಕೊಳ್ಳಬೇಕು ಎಂದು ಪ.ಪೂ. ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಬಸವಲಿಂಗಪ್ಪ ಕರೆ ನೀಡಿದರು.
ನಗರದ ಬಿ.ಹೆಚ್.ರಸ್ತೆಯಲ್ಲಿರುವ ಸರ್ಕಾರಿ ಪ.ಪೂ. ಕಾಲೇಜಿಗೆ ಬೆಂಗಳೂರಿನ ಕೆಪಿಎಂಜಿ ಸಂಸ್ಥೆಯ ರೈಟ್ ಟು ಲೀವ್ ಸಂಸ್ಥೆಯ ಸಹಯೋಗದಲ್ಲಿ ಕೊಡುಗೆಯಾಗಿ ನೀಡಿದ 30 ಲ್ಯಾಪ್ ಟಾಪ್ ವಿತರಣೆ ಹಾಗೂ ಕಂಪ್ಯೂಟರ್ ಕೊಠಡಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಬಳಕೆ ಕುರಿತು ಹೆಚ್ಚಿನ ಜ್ಞಾನ ಸಂಪಾದನೆ ಅವಶ್ಯಕತೆ ಇದೆ. ಇದಕ್ಕೆ ಪೂರಕವಾಗಿ ಬೆಂಗಳೂರಿನ ಕೆಪಿಎಂಜಿ ಸಂಸ್ಥೆಯ ರೈಟ್ ಟು ಲೀವ್ ಸಂಸ್ಥೆಯವರು ಉಚಿತವಾಗಿ ಲ್ಯಾಪ್ ಟಾಪ್ಗಳನ್ನು ನೀಡುವ ಮೂಲಕ ಸಹಕಾರಿಯಾಗಿದ್ದಾರೆ. ಈ ಸೌಲಭ್ಯವನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಉಚಿತವಾಗಿ ಲ್ಯಾಪ್ ಟಾಪ್ ನೀಡಿದ ಬೆಂಗಳೂರಿನ ಕೆಪಿಎಂಜಿ ಸಂಸ್ಥೆಯ ಮುಖ್ಯಸ್ಥ ಶ್ರೀಕಾಂತ್.ಎನ್.ಡಿ. ಮಾತನಾಡಿ, ವಿದ್ಯಾರ್ಥಿಗಳು ಶ್ರದ್ಧೆ, ಪರಿಶ್ರಮದಿಂದ ವ್ಯಾಸಂಗ ಮಾಡಿ ಬದುಕಿನಲ್ಲಿ ತಮ್ಮ ಗುರಿ ಮುಟ್ಟಬೇಕು ಎಂದು ಕರೆ ನೀಡಿದರು.
ಸರ್ಕಾರಿ ಪ.ಪೂ. ಕಾಲೇಜಿನ ಪ್ರಾಂಶುಪಾಲ ರಾಜ್ ಕುಮಾರ್ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳು ನಗರದ ಮಕ್ಕಳೊಂದಿಗೆ ಸ್ಪರ್ಧಿಸುವ ಗುಣ ಬೆಳೆಸಿಕೊಂಡು ಸಮಾಜದ ಸಂಪತ್ತಾಗಬೇಕು ಎಂದು ಹೇಳಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಹೆಚ್ಚಿನ ಜ್ಞಾನ ಪಡೆದು ಪೈಪೋಟಿ ಜಗತ್ತಿನಲ್ಲಿ ಸ್ಪರ್ಧಿಸುವ ಸಾಮರ್ಥ್ಯ ಬರಲಿ ಎಂಬ ಸದುದ್ದೇಶದಿಂದ ಕೆಪಿಎಂಜಿ ಸಂಸ್ಥೆಯಲ್ಲಿ ಲ್ಯಾಪ್ ಟಾಪ್ ಕೊಡುಗೆಯಾಗಿ ನೀಡಿದ್ದಾರೆ. ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಉಚಿತವಾಗಿ ನೀಡಿರುವ ಲ್ಯಾಪ್ ಟಾಪ್ ಗಳನ್ನು ತುಂಬಾ ವ್ಯವಸ್ಥಿತವಾಗಿ ಬಳಸಿಕೊಂಡು ನೀಟ್ ಮತ್ತು ಸಿಇಟಿ ಪರೀಕ್ಷೆಗೆ ಸಂಬಂಧಿಸಿದಂತೆ ಉತ್ತಮ ಅಧ್ಯಯನ ಮಾಡಿ ಕಾಲೇಜು ಮತ್ತು ಪೋಷಕರಿಗೆ ಕೀರ್ತಿ ತರಬೇಕು ಎಂದು ಸಲಹೆ ಮಾಡಿದರು.
ಎನ್ಜಿಓ ಸಂಸ್ಥೆಯ ರಮೇಶ್.ಸಿ.ಪಿ. ಮಾತನಾಡಿ, ವಿದ್ಯಾರ್ಥಿಗಳು ಕೌಶಲ್ಯ ಅಭಿವೃದ್ಧಿ ಪಡಿಸಿಕೊಂಡು ಒಳ್ಳೆಯ ಮನಸ್ಸಿನಿಂದ ಗುರಿ ಸಾಧಿಸಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಕೆಪಿಎಂಜಿ ಮತ್ತು ಎನ್ ಜಿಓ ತಂಡದವರು ಪಿಯು ನಂತರದ ವೃತ್ತಿ ತರಬೇತಿ ಕೋರ್ಸ್ಗಳ ಬಗ್ಗೆ ವಿವಿಧ ರೀತಿಯ ಸಂವಹನ ಕೌಶಲ್ಯ, ಮಾಹಿತಿ ತಂತ್ರಜ್ಞಾನ ಕೌಶಲ್ಯ, ಸಂದರ್ಶನ ಕೌಶಲ್ಯಗಳ ಬಗ್ಗೆ ಅತ್ಯುಪಯುಕ್ತ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕ ವೃಂದದವರು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
Comments are closed.