ಪಾವಗಡ: ಸರ್ಕಾರಿ ಸಂಬಳ ಪಡೆಯುವ ಪ್ರತಿಯೊಬ್ಬರೂ ಸಾರ್ವಜನಿಕರ ಸೇವಕರಿದ್ದಂತೆ ಎಂಬುದನ್ನು ಮನಗಂಡು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದರೆ ಸರ್ಕಾರದ ಯೋಜನೆಗಳು ಸಾರ್ವಜನಿಕರಿಗೆ ತಲುಪಲಿವೆ ಎಂದು ಕರ್ನಾಟಕ ರಾಜ್ಯ ಉಪ ಲೋಕಾಯುಕ್ತ ಕೆ.ಎನ್.ಫಣೀಂದ್ರ ತಿಳಿಸಿದರು.
ಪಟ್ಟಣದ ಬಿಇಒ ಕಚೇರಿ ಬಳಿಯ ಶತಮಾನ ಕಂಡ ಸರ್ಕಾರಿ ಶಾಲೆಯಲ್ಲಿ ಶ್ರೀರಾಮಕೃಷ್ಣ ಸೇವಾಶ್ರಮದಿಂದ ಏರ್ಪಡಿಸಿದ್ದ ನೂತನ ಅಡುಗೆ ಕೋಣೆ ನಿರ್ಮಾಣದ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದೊಂದಿಗೆ ಜೀವನದ ಮುಖ್ಯ ಗುರಿ ಹೊಂದಿರಬೇಕು, ಜೀವನದಲ್ಲಿಯಾವುದೇ ಹುದ್ದೆ, ಪದವಿಗಳಿದ್ದರೂ ಲಂಚಗುಳಿತನ ಹಾಗೂ ಭ್ರಷ್ಟಾಚಾರದಿಂದ ದೂರ ಉಳಿಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ತಿಳಿಸಿದರು.
ಉತ್ತಮ ಸಮಾಜದ ನಿರ್ಮಾಣಕ್ಕೆ ಶಿಕ್ಷಣವೊಂದೇ ದಾರಿಯಾಗಿದೆ, ಪೋಷಕರು ಶಿಕ್ಷಕರೊಂದಿಗೆ ಕೈಜೋಡಿಸಿದರೆ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯಾಗಲಿದೆ, ಅಧಿಕಾರಿಗಳು ತಮ್ಮ ಕಚೇರಿಗಳಲ್ಲಿ ಕಾಲ ಕಳೆಯದೆ ಖುದ್ದು ಸ್ಥಳಗಳಿಗೆ ಭೇಟಿ ನೀಡಿ ಸಮಸ್ಯೆ ಆಲಿಸಬೇಕು, ಸಮಾಜದ ಎಲ್ಲಾ ವಿಚಾರಗಳು ಅಧಿಕಾರಿಗಳಿಗೆ ತಿಳಿಯುವುದಿಲ್ಲ. ಜನತೆ ಅಧಿಕಾರಿಗಳನ್ನು ಎಚ್ಚರಿಸಬೇಕಿದೆ ಎಂದರು.
ಸ್ಥಳೀಯ ಶಿಕ್ಷಣಾಧಿಕಾರಿ ಹಾಗೂ ಡಿಡಿಪಿಐಗಳ ನಿರ್ಲಕ್ಷದಿಂದ ಕ್ಷೇತ್ರ ಶೈಕ್ಷಣಿಕವಾಗಿ ಹಿಂದುಳಿದಿದೆ, ಪೋಷಕರು ತಮ್ಮ ಮಕ್ಕಳು ಬರುವ ಶಾಲೆಯ ಸ್ಥಿತಿಗತಿ ತಿಳಿದು ಸಂಬಂಧಪಟ್ಟ ಅಧಿಕಾರಿಗಳಿಗೆ ವಿಷಯ ತಿಳಿಸಿಲ್ಲ, ಆದ್ದರಿಂದಲೇ ಶತಮಾನ ಕಂಡ ಶಾಲೆ ಅಳಿವಿನಂಚಿನಲ್ಲಿ ನಿಂತಿದೆ ಎಂದರು.
ಉತ್ತಮ ಸಮಾಜದ ನಿರ್ಮಾಣ ಹಾಗೂ ದೇಶದ ಅಭಿವೃದ್ಧಿಗಾಗಿ ಶಾಲಾ ಮಟ್ಟದಲ್ಲೇ ಶೈಕ್ಷಣಿಕ ಕ್ರಾಂತಿಯಾಗಬೇಕಿದೆ. ಎಲ್ಲಾ ಇಲಾಖೆಗಳ ಅಧಿಕಾರಿಗಳು ತಮ್ಮ ಜವಾಬ್ದಾರಿಯುತ ಕೆಲಸಗಳನ್ನು ಮಾಡಿದರೆ ಸಮಸ್ಯೆಗಳು ತಾನಾಗಿಯೇ ಬಗೆಹರಿಯುತ್ತವೆ ಎಂದರು.
ಶಿಥಿಲಾವಸ್ಥೆ ತಲಿಪಿರುವ ಶಾಲೆಯನ್ನು ಹೊಸದಾಗಿ ನಿರ್ಮಿಸಲು ಬೇಕಾದ ಅಗತ್ಯಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ಶಾಲಾ ಕಟ್ಟಡದ ಗುಣಮಟ್ಟ ಹಾಗೂ ಅದರ ನಿರ್ಮಾಣದ ಯೋಜನೆ ಸಿದ್ಧಪಡಿಸುವಂತೆ ಸ್ಥಳದಲ್ಲೇ ಇದ್ದ ಇಂಜಿನಿಯರ್ ಸುರೇಶ್ಗೆ ತಿಳಿಸಿದರು.
ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಜಪಾನಂದ ಸ್ವಾಮೀಜಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳೇ ಭವ್ಯ ಭಾರತ ದೇಶದ ನಿರ್ಮಾತೃಗಳಾಗಿದ್ದಾರೆ. ಶೈಕ್ಷಣಿಕ ಪ್ರಗತಿಯು ದೇಶದ ಅಭಿವೃದ್ಧಿ ಸೂಚಿಸುತ್ತದೆ, ಆದ್ದರಿಂದಲೇ ದೇಶದ ಅಭಿವೃದ್ಧಿ ಶಾಲಾ ಕೊಠಡಿಗಳಿಂದ ಪ್ರಾರಂಭವಾಗಬೇಕಿದೆ ಎಂದರು.
ಸರ್ಕಾರಗಳು ಅನುದಾನ ಬಿಡುಗಡೆ ಮಾಡುತ್ತವೆ. ಆದರೆ ಲೂಟಿ ಮತ್ತು ದಂಧೆಕೋರರು ರಣಹದ್ದುವಿನಂತೆ ಬಾಚಿ ನುಂಗುತ್ತಾರೆ, ಶೈಕ್ಷಣಿಕ ಪ್ರಗತಿ ವಿಚಾರದಲ್ಲೇ ಯಾಕೆ ಇಷ್ಟು ನಿರ್ಲಕ್ಷ್ಯ ಎಂದು ಸರ್ಕಾರ ಪ್ರಶ್ನಿಸಿದರು.
ರಾಮಕೃಷ್ಣ ಸೇವಾಶ್ರಮದಿಂದ ಶತಮಾನ ಕಂಡ ಶಾಲೆ ದತ್ತು ಪಡೆಯಲಾಗಿದೆ. ಸುಮಾರು ಎಂಟು ವರ್ಷಗಳಿಂದ ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಾ ಬಂದಿದ್ದೇವೆ, ಆಶ್ರಮದಿಂದ ಅಕ್ಷರ, ಆರೋಗ್ಯ, ಆಧ್ಯಾತ್ಮ, ಅವಗಹನಕ್ಕೆ ಸಂಬಂಧಿಸಿದ ಸೇವೆಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಶೀಘ್ರದಲ್ಲೇ ಶಾಲಾ ಮಕ್ಕಳ ಪೌಷ್ಠಿಕಾಂಶದ ಯೋಜನೆಗೆ ಚಾಲನೆ ನೀಡಲಾಗುವುದು ಎಂದರು.
ಇದೇ ವೇಳೆ ಸುಮಾರು ಆರು ಲಕ್ಷ ವೆಚ್ಚದ ಅಡುಗೆ ಕೋಣೆ ನಿರ್ಮಾಣಕ್ಕೆ ಕರ್ನಾಟಕ ರಾಜ್ಯ ಉಪ ಲೋಕಾಯುಕ್ತ ಕೆ.ಎನ್.ಫಣೀಂದ್ರ ಭೂಮಿ ಪೂಜೆ ನೆರವೇರಿಸಿದರು, ನಾಲ್ಕು ಶಾಲೆಯ ಸುಮಾರು ಐದು ನೂರು ಮಕ್ಕಳಿಗೆ ಶಾಲಾ ಬ್ಯಾಗ್ ವಿತರಿಸಿ ಶುಭಕೋರಿದರು.
ಲೋಕಾಯುಕ್ತ ಡಿವೈಎಸ್ಪಿ ಗೌತಮ್ ರಾಜೇಂದ್ರ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿದರು.
ಡಿಡಿಪಿಐ ಮಂಜುನಾಥ್, ಬಿಇಒ ಅಶ್ವಥನಾರಾಯಣ, ಮುಖ್ಯ ಶಿಕ್ಷಕ ಗಂಗಪ್ಪ ಹಾಗೂ ಶಾಲಾ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು, ಎಸ್ ಡಿಎಂಸಿ ಸದಸ್ಯ ಏಕಾಂತ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
Comments are closed.