ಬೆಂಗಳೂರು: ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಮಹಿಳಾ ಸ್ವಯಂ ಸೇವಾ ಸಂಸ್ಥೆ ನವ ಜ್ಞಾನ ಜ್ಯೋತಿ ಮಹಿಳಾ ಸಂಸ್ಥೆ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗೆ ನಿರಂತರವಾಗಿ ಕೆಲಸ ಮಾಡುತ್ತಿದೆ. ಸಂಘದ ಕಾರ್ಯದರ್ಶಿ ವಾಸಂತಿ ಹಾಗೂ ಅಧ್ಯಕ್ಷೆ ಶಾಂತಮ್ಮ ಅವರ ನೇತೃತ್ವದಲ್ಲಿ ಗ್ರಾಮೀಣ ಹಿಂದುಳಿದ ಹಾಗೂ ಅಲ್ಪ ಸಂಖ್ಯಾತ ಸಮುದಾಯದ ಬಡ ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವಿನ ಹಸ್ತ ಚಾಚಲಾಗುತ್ತಿದೆ.
ಕುರಿಸಾಕಾಣಿಕೆ, ಕೋಳಿ ಸಾಕಾಣಿಕೆ, ಟೈಲರಿಂಗ್ ತರಬೇತಿ, ಅಣಬೆ ಬೇಸಾಯ ಸೇರಿದಂತೆ ಬೇರೆ ಬೇರೆ ಸ್ವ ಉದ್ಯೋಗ ಕೈಗೊಳ್ಳಲು ಅನುಕೂಲವಾಗುವ ತರಬೇತಿಯನ್ನು ಸ್ವಯಂ ಸೇವಾ ಸಂಸ್ಥೆ ನೀಡುತ್ತಿದೆ. ಅಲ್ಲದೆ, ಗ್ರಾಮೀಣ ಮಕ್ಕಳಿಗೆ ಉಚಿತ ಶಾಲಾ ಪರಿಕರಗಳು ಹಾಗೂ ಆಹಾರ ಧಾನ್ಯಗಳನ್ನು ಸಂಸ್ಥೆಯಿಂದ ನೀಡುವ ಮೂಲಕ ಗ್ರಾಮೀಣ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆಯನ್ನು ನವ ಜ್ಞಾನ ಜ್ಯೋತಿ ಮಹಿಳಾ ಸಂಸ್ಥೆ ಕಳೆದ ಎಂಟು ವರ್ಷಗಳಿಂದ ನೀಡುತ್ತಾ ಬಂದಿದೆ.
ಗ್ರಾಮೀಣ ಮಹಿಳೆಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಕಿರು ಸಾಲ ಯೋಜನೆ ಹಾಗೂ ಅಲೆಮಾರಿ ಸಮುದಾಯದ ಮಹಿಳೆಯರಿಗೆ ತಾತ್ಕಾಲಿಕ ವಸತಿಗಾಗಿ ತಾಡಪತ್ರಿ ಸೇರಿದಂತೆ ವಿವಿಧ ಪರಿಕರಗಳನ್ನು ನವ ಜ್ಞಾನ ಜ್ಯೋತಿ ಮಹಿಳಾ ಸಂಸ್ಥೆ ನೀಡುತ್ತಿದೆ.
ಆದರೆ ಇತ್ತೀಚೆಗೆ ಈ ಸಂಸ್ಥೆಯ ವಿರುದ್ಧ ಕೆಲ ಪಟ್ಟಭದ್ರ ಹಿತಾಸಕ್ತಿಗಳು ವ್ಯವಸ್ಥಿತವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲಸಲ್ಲದ ಆರೋಪ ಮಾಡಿ ಸಂಘದ ಮಹಿಳಾ ಪದಾಧಿಕಾರಿಗಳ ವಿರುದ್ಧ ತೇಜೋವಧೆ ಮಾಡಲಾಗುತ್ತಿದೆ ಎಂದು ಸಂಘದ ಕಾರ್ಯದರ್ಶಿ ವಾಸಂತಿ ಮತ್ತು ಅಧ್ಯಕ್ಷೆ ಶಾಂತಮ್ಮ ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಸಂಘದ ಕೆಲ ಹಿಂದಿನ ಸದಸ್ಯೆಯರು ಈ ಅಪಪ್ರಚಾರದ ಹಿಂದೆ ಇದ್ದಾರೆ ಎಂದು ವಾಸಂತಿ ಹಾಗೂ ಶಾಂತಮ್ಮ ದೂರಿದ್ದಾರೆ. ತಮಗೆ ಮಾನಸಿಕ ಕಿರುಕುಳ ಆಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಸಂಘದ ಸದಸ್ಯೆಯರಲ್ಲೇ ಅನಗತ್ಯ ಗೊಂದಲ ಸೃಷ್ಠಿಯಾಗುತ್ತಿರುವ ಕಾರಣದಿಂದ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಂಡಿರುವುದಾಗಿ ಹಾಲಿ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
Comments are closed.