ಗುಬ್ಬಿ: ಕಾಯಿ ಕೊಬ್ಬರಿ ಬೆಳೆಯುವ ರೈತರು ಇಲ್ಲಿ ಕುಳಿತು ಪ್ರತಿಭಟನೆ ಮಾಡುವ ಬದಲು ಬೆಂಗಳೂರಿನಲ್ಲಿ ಒಟ್ಟಿಗೆ 50 ಸಾವಿರಕ್ಕೂ ಹೆಚ್ಚು ರೈತರು ಒಂದುಗೂಡಿ ಪ್ರತಿಭಟನೆ ಮಾಡಲು ಸಿದ್ಧರಾಗಿ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರಪ್ಪ ತಿಳಿಸಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ದಿಂದ ಹಮ್ಮಿಕೊಂಡಿದ್ದ ಕೇಂದ್ರ ಸರ್ಕಾರ ಒಂದು ಕ್ವಿಂಟಾಲ್ ಕೊಬ್ಬರಿಗೆ ಕನಿಷ್ಠ 20 ಸಾವಿರ ಬೆಂಬಲ ಬೆಲೆ ನಿಗದಿಪಡಿಸಬೇಕು. ರಾಜ್ಯ ಸರ್ಕಾರ ಕೂಡಲೇ ಒಂದು ಕ್ವಿಂಟಾಲ್ ಕೊಬ್ಬರಿಗೆ 5,000 ಪ್ರೋತ್ಸಾಹ ಧನ ನೀಡಬೇಕೆಂದು ಒತ್ತಾಯಿಸಿ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿ, ದುಡಿಯುವ ರೈತ ಸಮುದಾಯವನ್ನು ಪ್ರತಿ ಸರಕಾರವು ಕೆಟ್ಟದಾಗಿಯೇ ನೋಡುತ್ತಾ ಬಂದಿದೆ. ನಮ್ಮಲ್ಲಿ ಒಗ್ಗಟ್ಟಿನ ಸಂಘಟನೆ ಮಾಡಿದಾಗ ಮಾತ್ರ ನಾವು ಗೆಲುವು ಸಾಧಿಸಬಹುದು ಎಂದರು.
ಕೊಬ್ಬರಿ ಬೆಳೆ ಬೆಳೆಯುವ ರೈತರೇ ಒಟ್ಟಾದಾಗ ತಮ್ಮ ನಾಯಕರನ್ನು ಗೆಲ್ಲಿಸಬಹುದು ಎಂಬುದನ್ನು ತಾವು ಮರೆಯಬಾರದು. ಬಿಜೆಪಿ ಪಕ್ಷ ರೈತರ ಹಿತ ಕಾಪಾಡುವಲ್ಲಿ ಸಂಪೂರ್ಣ ವಿಫಲವಾದ ಹಿನ್ನೆಲೆಯಲ್ಲಿ ರೈತ ಸಂಘವೇ ಬಿಜೆಪಿಯನ್ನು ಸೋಲಿಸಲು ಮುಂದಾಗಿತ್ತು. ಈಗ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಿದ್ದು ರೈತರ ಪರ ನಿಲ್ಲದೆ ಹೋದರೆ ಮುಂದೆ ಬರುವ ಚುನಾವಣೆಯಲ್ಲಿ ಪ್ರತಿಫಲ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ರಾಜ್ಯದ 13 ಜಿಲ್ಲೆಗಳಲ್ಲಿ ತೆಂಗು ಪ್ರಮುಖ ಬೆಳೆಯಾಗಿದ್ದು ಲಕ್ಷಾಂತರ ಕುಟುಂಬಗಳು ಜೀವನ ಮಾಡುತ್ತಿದ್ದಾರೆ. ಗುಬ್ಬಿ ತಾಲೂಕಿನಲ್ಲಿ ಸುಮಾರು 37000 ಹೆಕ್ಟೇರ್ಗಿಂತಲೂ ಹೆಚ್ಚು ಪ್ರದೇಶದಲ್ಲಿ ತೆಂಗು ಬೆಳೆಯಲಾಗಿದೆ ಕಳೆದ ವರ್ಷ 19000 ಕೊಬ್ಬರಿ ಬೆಲೆ ಈಗ 7500 ಕ್ಕೆ ಬಂದಿದೆ. ಒಂದು ಕ್ವಿಂಟಾಲ್ ಉತ್ಪಾದನಾ ವೆಚ್ಚವೇ 16760 ಆಗುತ್ತದೆ ಎಂದ ಮೇಲೆ ಒಂದು ವರ್ಷ ಕಾಪಾಡಿದರು 8000 ಸಿಗುತ್ತಿಲ್ಲ. ಕೇಂದ್ರ ಸರ್ಕಾರ ಇದುವರೆಗೂ ಬೆಂಬಲ ಬೆಲೆ ಘೋಷಣೆ ಮಾಡದ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದಲ್ಲಿ ರೈತರು ಹೋರಾಟ ಮಾಡುವ ಎಚ್ಚರಿಕೆ ನೀಡಿದರು.
ದೊಡ್ಡಗುಣಿ ಹಿರೇಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಹಿತ ಕಾಪಾಡುವ ಕೆಲಸಕ್ಕೆ ಮುಂದಾಗಬೇಕು. ಅನ್ನದಾತರನ್ನು ಸೋಲಿಸಲು ಮುಂದಾದರೆ ಇಡೀ ರಾಜಕೀಯ ವ್ಯವಸ್ಥೆ ಅದಲು ಬದಲಾಗುತ್ತದೆ ಎಂಬುದನ್ನು ನಾಯಕರು ನೆನಪಿನಲ್ಲಿಟ್ಟುಕೊಳ್ಳಬೇಕು. ರೈತರ ಹಿತ ಕಾಪಾಡುವ ಸರ್ಕಾರಗಳು ಇದರ ಬಗ್ಗೆ ಚಿಂತಿಸಲಿ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಉಪಾಧ್ಯಕ್ಷ ಮಹೇಶ್ ಪ್ರಭು, ಸಂಯುಕ್ತ ಹೋರಾಟ ಕರ್ನಾಟಕ ಜಿಲ್ಲಾ ಸಂಚಾಲಕ ಯತಿರಾಜು, ತಾಲೂಕು ಅಧ್ಯಕ್ಷ ಕೆ ಎನ್.ವೆಂಕಟೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಸಿ.ಶಂಕರಪ್ಪ, ತೆಂಗು ಬೆಳೆಗಾರರ ಸಂಘದ ಅಧ್ಯಕ್ಷ ಮೃತ್ಯುಂಜಯಪ್ಪ, ಜೆಡಿಎಸ್ ಪಕ್ಷದ ಬಿ.ಎಸ್.ನಾಗರಾಜು ಕೊಬ್ಬರಿ ಬೆಳೆಗಾರರ ಹೋರಾಟ ಸಮಿತಿ ಯೋಗೀಶ್ವರ ಸ್ವಾಮಿ, ರೈತ ಮುಖಂಡರಾದ ಚಿರತೆ ಚಿಕ್ಕಣ್ಣ, ಜಗದೀಶ್, ಲೋಕೇಶ್, ಅತ್ತಿಕಟ್ಟೆ ಶಂಕರ್, ಕುಮಾರಸ್ವಾಮಿ, ನಾಗರಾಜು ಇತರರು ಹಾಜರಿದ್ದರು.
Comments are closed.