ತುಮಕೂರು: ನಗರದ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಲ್ಲಿ ಜು.13 ಮತ್ತು 14 ರಂದು ಎರಡು ದಿನಗಳ ಕಾಲ ರಾಜ್ಯಮಟ್ಟದ ಮಾಧ್ಯಮ ಹಬ್ಬ ಸಂಭ್ರಮ-2023 ಏರ್ಪಡಿಸಲಾಗಿದೆ.
ಎರಡು ದಿನಗಳ ರಾಜ್ಯ ಮಟ್ಟದ ಮಾಧ್ಯಮೋತ್ಸವ ಸಂಭ್ರಮ-2023 ಕಾರ್ಯಕ್ರಮವು ಶ್ರೀ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪಿ.ಜಿ. ಸೆಮಿನಾರ್ ಹಾಲ್ ನಲ್ಲಿ ನಡೆಯಲಿದೆ ಎಂದು ಎಸ್ಎಸ್ಐಟಿ ಪ್ರಾಂಶುಪಾಲರಾದ ಡಾ. ಎಂ.ಎಸ್. ರವಿಪ್ರಕಾಶ್ ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದರು.
ಜುಲೈ 13 ರಂದು ಬೆಳಗ್ಗೆ 10.30ಕ್ಕೆ ಶ್ರೀಸಿದ್ದಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಸಾಹೇ) ಕುಲಾಧಿಪತಿ ಮತ್ತು ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಕಾರ್ಯಕ್ರಮ ಉದ್ಘಾಟಿಸುವರು.
ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತರಾದ ಸುದರ್ಶನ್ ಚನ್ನಂಗಿಹಳ್ಳಿ, ಟಿವಿ ನಿರೂಪಕರಾದ ಸುಕನ್ಯ, ಸಾಹೆ ವಿವಿ ಉಪ ಕುಲಪತಿಗಳಾದ ಡಾ.ಕೆ.ಬಿ.ಲಿಂಗೇಗೌಡ, ಹಿರಿಯ ಪತ್ರಕರ್ತರಾದ ಎಸ್.ನಾಗಣ್ಣ, ಮಹಾನಗರ ಪಾಲಿಕೆ ಮಹಾಪೌರರಾದ ಪ್ರಭಾವತಿ ಸುಧೀಶ್ವರ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಂ.ಎಸ್.ರವಿಪ್ರಕಾಶ್ ವಹಿಸುವರು. ಇದೇ ಸಂದರ್ಭದಲ್ಲಿ ಪತ್ರಿಕೋದ್ಯಮ ಕ್ಷೇತ್ರಕ್ಕೆ ಕೊಡುಗೆ ನೀಡಿದ ಜಿಲ್ಲೆಯ ಸುಮಾರು 21 ಹಿರಿಯ ಪತ್ರಕರ್ತರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಮಾಧ್ಯಮೋತ್ಸವದ ಎರಡನೇ ದಿನದ ಕಾರ್ಯಕ್ರಮ ಜು. 14 ರಂದು ಬೆಳಗ್ಗೆ 10.30ಕ್ಕೆ ಪಿಜಿ ಸೆಮಿನಾರ್ ಹಾಲ್ ನಲ್ಲಿ ಜರುಗಲಿದ್ದು, ಶ್ರೀಸಿದ್ಧಾರ್ಥ ಅಡ್ವಾನ್ಸ್ ಹಾರ್ಟ್ ಸೆಂಟರ್ ಮತ್ತು ಕಾರ್ಡಿಯಾಕ್ ಫ್ರಾಂಟಿಡಾದ ನಿರ್ದೇಶಕ ಡಾ.ತಮೀಮ್ ಅಹಮದ್ ಅವರು ಮಾಧ್ಯಮ ಮತ್ತು ಆರೋಗ್ಯ ಸಂವಹನ ಕುರಿತು ವಿಚಾರ ಮಂಡಿಸಲಿದ್ದಾರೆ ಎಂದರು.
ಸಮಾರಂಭದಲ್ಲಿ ಸಾಹೇ ವಿವಿಯ ಕುಲಾಧಿಪತಿಗಳ ಸಲಹೆಗಾರರಾದ ವಿವೇಕ್ ವೀರಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್, ಪತ್ರಕರ್ತರಾದ ಟಿ.ಎನ್. ಮಧುಕರ್, ಜಿಲ್ಲಾ ಪ್ರೆಸ್ ಕ್ಲಬ್ ಅಧ್ಯಕ್ಷ ಶಶಿಧರ್ ದೋಣಿಹಕ್ಲು, ಮಹಾನಗರ ಪಾಲಿಕೆಯ ಸದಸ್ಯ ಜೆ.ಕುಮಾರ್ ಭಾಗವಹಿಸುವರು.
ಶ್ರೀಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ಹಿರಿಯ ವಿದ್ಯಾರ್ಥಿಗಳನ್ನು ಒಳಗೊಂಡ ಹಳೆಯ ವಿದ್ಯಾರ್ಥಿಗಳ ಸಮಾಗಮ ಸಭೆ ನಡೆಯಲಿದೆ ಎಂದು ಹೇಳಿದರು.
ಅಂದು ಮಧ್ಯಾಹ್ನ 3 ಗಂಟೆಗೆ ಎರಡು ದಿನಗಳ ಮಾಧ್ಯಮೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭವು ನಡೆಯಲಿದ್ದು, ಇದೇ ಸಂದರ್ಭದಲ್ಲಿ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಗುವುದು ಎಂದರು.
ಸಮಾರೋಪ ಸಮಾರಂಭದಲ್ಲಿ ಹಿರಿಯ ಪತ್ರಕರ್ತರಾದ ಬಿ.ಕೆ.ಗಣೇಶ್, ಪಾವಗಡ ಶಾಸಕ ಎಚ್.ವಿ. ವೆಂಕಟೇಶ್, ಲೇಖಕ ಡಾ.ಅಮ್ಮಸಂದ್ರ ಸುರೇಶ್, ಸ್ನೇಹ ಮನೋವಿಕಾಸ ಕೇಂದ್ರದ ಡಾ.ಲೋಕೇಶ್ಬಾಬು, ತುಮುಲ್ ಅಧ್ಯಕ್ಷ ಮಹಲಿಂಗಯ್ಯ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಗಿರೀಶ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಇ.ರಘುರಾಂ, ಜಿಲ್ಲಾ ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಯೋಗೀಶ್, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ರಾಯಸಂದ್ರ ರವಿಕುಮಾರ್, ಸ್ಫೂರ್ತಿ ಡೆವಲಪರ್ ಮಾಲೀಕ ಎಸ್.ಪಿ. ಚಿದಾನಂದ್, ಎಸ್ಎಸ್ ಸಿಎಂಎಸ್ ಆಡಳಿತಾಧಿಕಾರಿ ಖಲಂದರ್ ಪಾಷ ಉಪಸ್ಥಿತರಿರುವರು.
ಈ ಎರಡು ದಿನಗಳ ಮಾಧ್ಯಮೋತ್ಸವದಲ್ಲಿ ರಾಜ್ಯದ ವಿವಿಧ ಪದವಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಈ ಸಂಭ್ರಮ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗಾಗಿ ವರದಿಗಾರಿಕೆ, ಲೇಖನ ಬರವಣಿಗೆ, ರೇಡಿಯೋ ಜಾಕಿ, ಟೆಲಿವಿಷನ್ ಸುದ್ದಿ ವಾಚನ ಸ್ಪರ್ಧೆ ಒಳಗೊಂಡಂತೆ ವಿವಿಧ 8 ಸ್ಪರ್ಧೆ ಏರ್ಪಡಿಸಲಾಗಿದ್ದು, ಈ ಎಲ್ಲಾ ಸ್ಪರ್ಧೆಗಳು ಪಿಜಿ ಬ್ಲಾಕ್ ನಲ್ಲಿ ನಡೆಯಲಿವೆ ಎಂದು ಮಾಹಿತಿ ನೀಡಿದರು.
ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಬಿ.ಟಿ.ಮುದ್ದೇಶ್ ಮಾತನಾಡಿ, ಎರಡು ದಿನಗಳ ಕಾಲ ನಡೆಯುವ ರಾಜ್ಯಮಟ್ಟದ ಮಾಧ್ಯಮ ಹಬ್ಬ ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ರಾಜ್ಯದ ವಿವಿಧ ಜಿಲ್ಲೆಗಳ 1600 ಕಾಲೇಜುಗಳಿಗೆ ಆಹ್ವಾನ ನೀಡಲಾಗಿದ್ದು, ಇದುವರೆಗೂ ಬೆಳಗಾವಿ, ಕೊಪ್ಪಳ, ಹಾಸನ, ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ 20 ತಂಡಗಳು ನೋಂದಾಯಿಸಿಕೊಂಡಿವೆ ಎಂದರು.
ಮಾಧ್ಯಮೋತ್ಸವದಲ್ಲಿ ಪಾಲ್ಗೊಳ್ಳುವ ಎಲ್ಲಾ ತಂಡಗಳಿಗೂ ಸಂಸ್ಥೆ ವತಿಯಿಂದ ಉಚಿತ ಊಟ, ವಸತಿ ವ್ಯವಸ್ಥೆಯನ್ನು ಸುಸಜ್ಜಿತವಾಗಿ ಮಾಡಲಾಗಿದ್ದು, ನೋಂದಣಿ ಶುಲ್ಕ 100 ರೂ. ನಿಗದಿಪಡಿಸಲಾಗಿದೆ ಎಂದರು.
ಪತ್ರಿಕೋದ್ಯಮ ಹೊರತುಪಡಿಸಿ ಬೇರೆ ಬೇರೆ ವಿಷಯಗಳ ವಿದ್ಯಾರ್ಥಿಗಳಿಗೂ ಸಹ ಈ ಮಾಧ್ಯಮೋತ್ಸವದಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಲಾಗಿದೆ. ಹಾಗೆಯೇ ಬೇರೆ ಬೇರೆ ವಿಭಾಗಗಳ ಕಾಲೇಜು ವಿದ್ಯಾರ್ಥಿಗಳು ಸಹ ಈ ಹಬ್ಬದಲ್ಲಿ ಪಾಲ್ಗೊಳ್ಳಲು ಆಸಕ್ತರಾಗಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಸ್ಎಸ್ ಸಿಎಂಎಸ್ ಆಡಳಿತಾಧಿಕಾರಿ ಖಲಂದರ್ ಪಾಷ, ಉಪನ್ಯಾಸಕರಾದ ನಾಗೇಂದ್ರ, ಜ್ಯೋತಿ.ಸಿ, ಶ್ವೇತ, ಹರೀಶ್ ಕುಮಾರ್ ಮತ್ತಿತರರು ಇದ್ದರು.
Comments are closed.