ತುರುವೇಕೆರೆ: ತಾಲೂಕಿನ ಮಾಯಸಂದ್ರ ಹೋಬಳಿ ಯರದಹಳ್ಳಿ ಸರ್ವೇ ನಂ.29 ರ ಗುಂಡು ತೋಪನ್ನು ಒತ್ತುವರಿ ಮಾಡಿಕೊಂಡಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ತಹಸೀಲ್ದಾರ್ ವೈ.ಎಂ.ರೇಣುಕುಮಾರ್ ಮತ್ತು ತಂಡ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿ ಕಂದಾಯ ಇಲಾಖೆ ಸ್ವಾಧೀನಕ್ಕೆ ಪಡೆಯುವ ಮೂಲಕ ಭೂ ಕಬಳಿಕೆದಾರರಿಗೆ ಎಚ್ಚರಿಕೆ ಸಂದೇಶ ರವಾನಿಸಿದರು.
ತಾಲೂಕಿನ ಶೆಟ್ಟಿಗೊಂಡನಹಳ್ಳಿ ಗ್ರಾಪಂ ವ್ಯಾಪ್ತಿಯ ಯರದಹಳ್ಳಿಯಲ್ಲಿ ಸರ್ವೇ ನಂ.29 ರಲ್ಲಿ 4 ಎಕರೆಗೂ ಹೆಚ್ಚು ವಿಸ್ತೀರ್ಣದ ಗುಂಡು ತೋಪು ಒತ್ತುವರಿ ಮಾಡಿರುವ ಬಗ್ಗೆ ತಹಶೀಲ್ದಾರರಿಗೆ ಸಾರ್ವಜನಿಕರು ದೂರು ನೀಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಮಂಗಳವಾರ ಸ್ಥಳಕ್ಕೆ ಆಗಮಿಸಿ ಪೊಲೀಸ್ ಬಿಗಿ ಬಂದೋಬಸ್ತ್ ನಲ್ಲಿ ಗುಂಡುತೋಪನ್ನು ಒತ್ತುವರಿಯಿಂದ ಮುಕ್ತಗೊಳಿಸುವ ಮೂಲಕ ಸಾರ್ವಜನಿಕ ಪ್ರಶಂಸೆಗೆ ಪಾತ್ರರಾದರು.
ಕಾರ್ಯಾಚರಣೆ ಕುರಿತು ಮಾತನಾಡಿದ ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಸಾರ್ವಜನಿಕ ದೂರಿನ ಮೇರೆಗೆ ಪರಿಶೀಲಿಸಿ ಯರದೇಹಳ್ಳಿ ಸರ್ವೇನಂ.29 ರಲ್ಲಿನ ಗುಂಡುತೋಪು ಒತ್ತುವರಿ ತೆರವುಗೊಳಿಸಲಾಗಿದೆ. ಇದೇ ಗ್ರಾಮದಲ್ಲಿ ಸರ್ವೇ ನಂ.44 ಹಾಗೂ 51 ರಲ್ಲಿ ಗುಂಡು ತೋಪು ಒತ್ತುವರಿಯಾಗಿರುವ ಬಗ್ಗೆ ದೂರುಗಳು ಸಲ್ಲಿಕೆಯಾಗಿದ್ದು, ದಾಖಲೆಗಳನ್ನು ಪರಿಶೀಲಿಸಿ ಒತ್ತುವರಿ ತೆರವುಗೊಳಿಸಿ ಒತ್ತುವರಿದಾರರಿಗೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು. ಯರದೇಹಳ್ಳಿ ಸರ್ವೇ ನಂ.29 ರಲ್ಲಿ 20 ಗುಂಟೆ ಜಮೀನನ್ನು ಸ್ಮಶಾನಕ್ಕೆ ಮೀಸಲಿರಿಸಲಾಗಿದೆ. ಸರ್ವೇ ನಂ.29 ರಲ್ಲಿ ಭೂಕಬಳಿಕೆ ಮಾಡಿದ ವ್ಯಕ್ತಿ ಗ್ರಾಪಂ ನೌಕರನೆಂದು ತಿಳಿದು ಬಂದಿದ್ದು ತನಿಖೆ ನಡೆಸಿ ಅವರ ವಿರುದ್ಧವೂ ಶಿಸ್ತುಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ತಿಳಿಸಿದರು.
ತಾಲೂಕಿನ ವ್ಯಾಪ್ತಿಯಲ್ಲಿ ಸರಕಾರಿ ಭೂಮಿಗಳು, ಸ್ಮಶಾನ, ಕೆರೆ ಕುಂಟೆಗಳು ಒತ್ತುವರಿಯಾಗಿದ್ದರೆ ತಾಲೂಕು ಆಡಳಿತಕ್ಕೆ ಮಾಹಿತಿ ನೀಡಬಹುದಾಗಿದೆ. ದಾಖಲೆ ಪರಿಶೀಲಿಸಿ ಒತ್ತುವರಿ ಖಚಿತವಾದರೆ ಯಾವುದೇ ಒತ್ತಡಕ್ಕೆ ಮಣಿಯದೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ತಿಳಿಸಿದ್ದಾರೆ.
ಕಾರ್ಯಾಚರಣೆ ವೇಳೆ ಪಿಎಸ್ಐ ರಾಮಚಂದ್ರಪ್ಪ, ರಾಜಸ್ವ ನಿರೀಕ್ಷಕ ರಂಗಸ್ವಾಮಿ, ಗ್ರಾಮಾಡಳಿತಾಧಿಕಾರಿ ಅಣ್ಣಪ್ಪ, ಗ್ರಾಪಂ ಪಿಡಿಓ ಅಣ್ಣಪ್ಪ, ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಸಹಾಯಕರು, ಭೂಮಾಪನಾ ಇಲಾಖೆ ಸಿಬ್ಬಂದಿ ಇದ್ದರು.
Comments are closed.