ತುಮಕೂರು: ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿರುವ ಎಲ್ಲಾ 1586 ಕುಡಿಯುವ ನೀರಿನ ಆರ್ಓ ಪ್ಲಾಂಟ್ಗಳನ್ನು ಸಂಬಂಧಿಸಿದ ಗ್ರಾಮ ಪಂಚಾಯಿತಿಗಳೇ ನಿರ್ವಹಣೆ ಮಾಡಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ಪ್ರಭು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿಯಲ್ಲಿ ತಮ್ಮ ಕೊಠಡಿಯಲ್ಲಿ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಆರ್ಓ ಪ್ಲಾಂಟ್ ಗಳನ್ನು ಖಾಸಗಿ ಏಜೆನ್ಸಿಗಳು ನಿರ್ವಹಣೆ ಮಾಡುತ್ತಿದ್ದಲ್ಲಿ ಕೂಡಲೇ ಆಯಾ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಬೇಕು ಎಂದರಲ್ಲದೆ ಜಿಲ್ಲೆಯಲ್ಲಿರುವ ಆರ್ಓ ಪ್ಲಾಂಟ್ ಗಳ ಸಣ್ಣಪುಟ್ಟ ದುರಸ್ತಿಯನ್ನು ಸಂಬಂಧಿಸಿದ ಪಂಚಾಯತಿಯವರೇ ನಿರ್ವಹಿಸಬೇಕು ಎಂದು ಸೂಚಿಸಿದರು.
ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ಆದ್ಯತೆ ಮೇರೆಗೆ ಕೊಳವೆ ಬಾವಿ ಕೊರೆಸಲು ಕ್ರಿಯಾ ಯೋಜನೆ ತಯಾರಿಸಿ ಕೂಡಲೇ ಸಮಿತಿಯಿಂದ ಅನುಮೋದನೆ ಪಡೆಯಬೇಕು, ಜನ- ಜಾನುವಾರುಗಳಿಗೆ ಕುಡಿಯುವ ನೀರಿನ ಬವಣೆ ಬಾರದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಜಲ್ ಜೀವನ್ ಮಿಷನ್ ಯೋಜನೆಯಡಿ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ತೆರೆದ ಗುಂಡಿಗಳಿಂದ ಸಂಚಾರಕ್ಕೆ ತೊಂದರೆಯಾಗುವುದರಿಂದ ಮನೆ- ಮನೆಗೆ ನಳ ಸಂಪರ್ಕಕ್ಕಾಗಿ ರಸ್ತೆಗಳಲ್ಲಿ ತೆಗೆದಿರುವ ಗುಂಡಿಗಳನ್ನು ತಪ್ಪದೇ ಮುಚ್ಚಬೇಕು ಎಂದು ತಿಳಿಸಿದರಲ್ಲದೆ ಇನ್ನು ಮುಂದೆ ಜೆಜೆಎಂ ಯೋಜನೆ ಪೂರ್ಣಗೊಳ್ಳುವವರೆಗೂ ಪ್ರತೀ ವಾರ ಪ್ರಗತಿ ಪರಿಶೀಲನಾ ಸಭೆ ನಡೆಸಬೇಕೆಂದು ಸೂಚಿಸಿದರು.
ಜಿಲ್ಲೆಯಲ್ಲಿ ಸಾಂಕ್ರಾಮಿಕವಲ್ಲದ ರೋಗ ಪತ್ತೆ ಹಚ್ಚಲು ಆಶಾ, ಅಂಗನವಾಡಿ ಕಾರ್ಯಕರ್ತರನ್ನು ಬಳಸಿಕೊಂಡು ಮನೆ- ಮನೆ ಭೇಟಿ ನೀಡುವ ಕಾರ್ಯಕ್ರಮವನ್ನು ತಕ್ಷಣವೇ ಪ್ರಾರಂಭಿಸಬೇಕು. ಗ್ರಾಮೀಣ ಭಾಗದಲ್ಲಿ ಪ್ರತಿ 3 ತಿಂಗಳಿಗೊಮ್ಮೆ 30 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಪೂರ್ಣ ಆರೋಗ್ಯ ತಪಾಸಣೆಯಾಗಬೇಕು ಎಂದು ತಾಕೀತು ಮಾಡಿದರಲ್ಲದೆ, ಈ ತಪಾಸಣೆಯಲ್ಲಿ ಕ್ಯಾನ್ಸರ್, ಮಧುಮೇಹ, ರಕ್ತದೊತ್ತಡ ಹಾಗೂ ಹೈಪರ್- ಟೆನ್ಷನ್ ನಿಂದ ಬಳಲುತ್ತಿರುವವರಿಗೆ ಸಕಾಲಿಕ ಚಿಕಿತ್ಸೆ ನೀಡುವುದರೊಂದಿಗೆ ಪ್ರತೀ ತಿಂಗಳೂ ರೋಗಿಗಳಿಗೆ ಔಷಧಿ ವಿತರಿಸಬೇಕು. ಇದರಿಂದ ಗ್ರಾಮೀಣರ ಆರೋಗ್ಯ ಕಾಪಾಡಲು ಸಾಧ್ಯವಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ್ ಅವರಿಗೆ ನಿರ್ದೇಶಿಸಿದರು.
ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮುಂಗಾರು ಮಳೆಯಾಗಿರುವುದರಿಂದ ಕೆಲವು ಜನವಸತಿ ಪ್ರದೇಶಗಳಲ್ಲಿ ಹಾಲಿ ಇರುವ ಕೊಳವೆ ಬಾವಿಗಳು ಬತ್ತಿ ಹೋಗಿದ್ದು, ಕುಡಿಯುವ ನೀರಿನ ಸಮಸ್ಯೆ ತಲೆದೋರಿರುವುದರಿಂದ ಮುಂದಿನ 20 ದಿನಗಳಲ್ಲಿ ಮಳೆ ಪರಿಸ್ಥಿತಿ ಇದೇ ರೀತಿ ಮುಂದುವರೆದಲ್ಲಿ ಉದ್ಭವಿಸಬಹುದಾದ ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಕಾಂಟಿಜೆನ್ಸಿ ಕ್ರಿಯಾ ಯೋಜನೆ ತಯಾರಿಸಿ ನೀರು ಮತ್ತು ನೈರ್ಮಲ್ಯ ಸಮಿತಿಯಿಂದ ಅನುಮೋದನೆ ಪಡೆದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಅದೇ ರೀತಿ 2022-23ನೇ ಸಾಲಿನಲ್ಲಿ ಕೈಗೊಳ್ಳಲಾಗಿದ್ದ ವಿಶೇಷ ಅಭಿವೃದ್ಧಿ ಯೋಜನೆಯಡಿ ಉಳಿಕೆ ಕಾಮಗಾರಿಗಳನ್ನು 2023-24ನೇ ಸಾಲಿಗಾಗಿ ಮುಂದುವರೆದ ಕಾಮಗಾರಿಗಳ ಕ್ರಿಯಾ ಯೋಜನೆಗೂ ಸಹ ಸಮಿತಿ ಅನುಮೋದನೆಗಾಗಿ ಮಂಡಿಸಿ ಸರ್ಕಾರಕ್ಕೆ ಸಲ್ಲಿಸಲು ನಿರ್ಣಯ ಕೈಗೊಳ್ಳಲಾಯಿತು.
ಗ್ರಾಮೀಣ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ರವೀಶ್ ಮಾತನಾಡಿ, 2023- 24ನೇ ಸಾಲಿನ 2215 ಮತ್ತು 4215 ಲೆಕ್ಕ ಶೀರ್ಷಿಕೆಯಡಿ ವಿಶೇಷ ಅಭಿವೃದ್ಧಿ ಯೋಜನೆಯ ಮುಂದುವರೆದ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಜಿಲ್ಲೆಯ 314 ಕಾಮಗಾರಿ ಕೈಗೊಳ್ಳಲು ತಯಾರಿಸಿರುವ ಕ್ರಿಯಾ ಯೋಜನೆ ಸಮಿತಿಯ ಅನುಮೋದನೆಗಾಗಿ ಮಂಡಿಸಿದರು. ಈ ಪೈಕಿ 4215 ಲೆಕ್ಕಶೀರ್ಷಿಕೆಯಡಿ 5.58 ಕೋಟಿ ರೂ. ಹಾಗೂ 2215 ಲೆಕ್ಕ ಶೀರ್ಷಿಕೆಯಡಿ 17.73 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕಾಮಗಾರಿ ಕೈಗೊಳ್ಳಲು ಕ್ರಿಯಾ ಯೋಜನೆಗೆ ಅನುಮೋದನೆ ಪಡೆಯಬೇಕಾಗಿದೆ ಎಂದರು.
ಅದೇ ರೀತಿ 2023-24ನೇ ಸಾಲಿನ ಮುಂದುವರೆದ ಕಾಂಟಿಜೆನ್ಸಿ ಕ್ರಿಯಾ ಯೋಜನೆಯಡಿ ಸಮಸ್ಯಾತ್ಮಕ ಗ್ರಾಮಗಳಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿ ಒಟ್ಟು 123 ಕುಡಿಯುವ ನೀರಿನ ಕಾಮಗಾರಿ ಕೈಗೊಳ್ಳಲು ಉದ್ದೇಶಿಸಿದ್ದು, ಸದರಿ ಕಾಮಗಾರಿಗಳಿಗೆ 360.75 ಲಕ್ಷ ರೂ. ಅನುದಾನದ ಅಗತ್ಯವಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಜಿಲ್ಲೆಯ ಗಿಡ- ಮರಗಳನ್ನು ಬೆಳೆಸಿ ವನ ಸಂಪತ್ತನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮುಂದಿನ ವರ್ಷದೊಳಗೆ 5 ಲಕ್ಷ ಸಸಿ ಬೆಳೆಸುವ ಗುರಿಯನ್ನು ಪ್ರಾದೇಶಿಕ ಅರಣ್ಯ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್.ನಾಗರಾಜು ಅವರಿಗೆ ವಹಿಸಲಾಯಿತು.
ಸಭೆಯಲ್ಲಿ ಸಮಿತಿ ಸದಸ್ಯರಾದ ಸಹಾಯಕ ಕೃಷಿ ನಿರ್ದೇಶಕ ಚಿದಾನಂದ ಸ್ವಾಮಿ, ವಾರ್ತಾ ಇಲಾಖೆಯ ಗ್ರಂಥಪಾಲಕಿ ಆರ್.ರೂಪಕಲಾ ಮತ್ತಿತರರು ಹಾಜರಿದ್ದರು.
Comments are closed.