ಜೈನ ಮುನಿ ಹತ್ಯೆ ಖಂಡಿಸಿ ಮೌನ ಪ್ರತಿಭಟನೆ

ಕೊಲೆಗಡುಕರಿಗೆ ಉಗ್ರ ಶಿಕ್ಷೆ ನೀಡಲು ಜೈನ ಬಂಧುಗಳ ಆಗ್ರಹ

122

Get real time updates directly on you device, subscribe now.


ತುಮಕೂರು: ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿಯ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಅಮಾನುಷ ಹತ್ಯೆ ಖಂಡಿಸಿ ಶ್ರೀದಿಗಂಬರ ಜೈನ ಶ್ರೀಪಾರ್ಶ್ವನಾಥಸ್ವಾಮಿ ಜೀನ ಮಂದಿರ, ತುಮಕೂರು ಜಿಲ್ಲಾ ಜೈನ ಒಕ್ಕೂಟ ಹಾಗೂ ಜೈನ ಸಮುದಾಯದ ವತಿಯಿಂದ ನಗರದಲ್ಲಿ ಮೌನ ಪ್ರತಿಭಟನೆ ನಡೆಸಿ ಕೊಲೆಗಡುಕರನ್ನು ಬಂಧಿಸುವಂತೆ ಒತ್ತಾಯಿಸಲಾಯಿತು.

ನಗರದ ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ಮಹಾವೀರ ಭವನದ ಮುಂಭಾಗದಲ್ಲಿ ಜಮಾಯಿಸಿದ ಜೈನ ಸಮುದಾಯದ ನರಸಿಂಹರಾಜಪುರದ ಶ್ರೀಲಕ್ಷ್ಮಿಸೇನ ಭಟ್ಟಾಕರ ಸ್ವಾಮಿಗಳ ನೇತೃತ್ವದಲ್ಲಿ ನಗರದ ಬಿ.ಹೆಚ್.ರಸ್ತೆ, ಎಂ.ಜಿ.ರಸ್ತೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಯವರಗೆ ಮೌನ ಮೆರವಣಿಗೆ ನಡೆಸಿ ಕಾಮಕುಮಾರ ನಂದಿ ಸ್ವಾಮೀಜಿಗಳ ಹತ್ಯೆ ಖಂಡಿಸಿ ಕೂಡಲೇ ಕೊಲೆ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಒತ್ತಾಯಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಮಾವೇಶಗೊಂಡ ಜೈನ ಸಮುದಾಯದವರನ್ನು ಉದ್ದೇಶಿಸಿ ನರಸಿಂಹರಾಜಪುರದ ಶ್ರೀಲಕ್ಷ್ಮಿಸೇನ ಭಟ್ಟಾಕರ ಸ್ವಾಮೀಜಿ ಮಾತನಾಡಿ, ಅತ್ಯಂತ ಅಹಿಂಸಾತ್ಮಕ ರೀತಿಯಲ್ಲಿ ಮುನಿಶ್ರೀಗಳ ಶರೀರವನ್ನು ವಿಕೃತಗೊಳಿಸಿ ಕೊಲೆ ಮಾಡಿರುವುದು ಅತ್ಯಂತ ಹೇಯ ಕೃತ್ಯ, ಇಂತಹ ಕೃತ್ಯವನ್ನು ಜೈನ ಸಮಾಜ ಹಾಗೂ ಜೈನ ಮಠಗಳು ತೀವ್ರವಾಗಿ ಖಂಡಿಸುತ್ತವೆ. ಇಡೀ ಮನುಕುಲವೇ ತಲೆತಗ್ಗಿಸುವ ವಿಚಾರವಾಗಿದೆ. ಸರ್ವಜನಾಂಗದ ಶಾಂತಿಯ ತೋಟಕ್ಕೆ ಕಪ್ಪು ಚುಕ್ಕೆಯಾಗಿದೆ. ಇಂದು ಜೈನ ಮುನಿಗಳಿಗೆ ಆಗಿರುವ ಕೆಲಸ, ಬೇರೆ ಸಮುದಾಯದ ಸ್ವಾಮೀಜಿಗಳಿಗೂ ಆಗಬಹುದು. ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎಲ್ಲಾ ಹಂತಕರನ್ನು ಬಂಧಿಸಿ ಕಾನೂನಾತ್ಮಕ ಕಾರ್ಯಾಚರಣೆ ಮುಂದುವರೆಸಿರುವುದು ಸ್ವಾಗತಾರ್ಹ. ಆದರೆ ಹಂತಕರಿಗೆ ಉಗ್ರ ಶಿಕ್ಷೆ ವಿಧಿಸಲೇಬೇಕು. ಹಂತಕರಿಗೆ ಯಾವುದೇ ರೀತಿಯ ಕರುಣೆ ತೋರಬಾರದು ಎಂದು ಸರಕಾರವನ್ನು ಆಗ್ರಹಿಸಿದರು.

ಶ್ರೀದಿಗಂಬರ ಜೈನ ಶ್ರೀಪಾರ್ಶ್ವನಾಥಸ್ವಾಮಿ ಜಿನ ಮಂದಿರ ಅಧ್ಯಕ್ಷ ಎಸ್.ಜೆ.ನಾಗರಾಜು ಮಾತನಾಡಿ, ಜೈನ ಸಮುದಾಯಕ್ಕೆ ಕರಾಳದಿನ, ಇಂದೊಂದು ಎಚ್ಚರಿಕೆ ಗಂಟೆ, ಮುಂಬರುವ ದಿನಗಳಲ್ಲಿ ಅಲ್ಪಸಂಖ್ಯಾತರಲ್ಲಿ ಅಲ್ಪಸಂಖ್ಯಾತರಾದಂತಹ ಜೈನ ಧರ್ಮದ ಸಾಧು ಸಂತರಿಗೆ ಇಂತಹ ಅಹಿತಕರ ಘಟನೆ ನಡೆಯದಂತೆ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಂಡು ಕಾನೂನು ಸುವ್ಯವಸ್ಥೆ ಕಾಪಾಡುವ ಜೊತೆಗೆ ಜೈನ ಸಮಾಜಕ್ಕೆ ಸೂಕ್ತ ನ್ಯಾಯ, ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿದ ಅವರು ವಕೀಲರು ಆರೋಪಿಗಳಿಗೆ ಬೇಲ್ ವಕಾಲತ್ತು ಹಾಕಬಾರದೆಂದು ಮನವಿ ಮಾಡಿದರು.

ಮೌನ ಪ್ರತಿಭಟನಾ ಮೆರವಣಿಗೆಯ ವೇಳೆ ಆಗಮಿಸಿ ಬೆಂಬಲ ಸೂಚಿಸಿದ ಮಾತನಾಡಿದ ಶಾಸಕ ಜೋತಿಗಣೇಶ್, ಜೈನ ಮುನಿಗಳ ಭಯಾನಕ ಹತ್ಯೆ ಖಂಡನೀಯ, ಇದು ಕೃತ್ಯ ನಾಗರಿಕ ಸಮಾಜ ತಲೆ ತಗ್ಗಿಸುವಂತಹದ್ದು, ಮುನಿಶ್ರೀಗಳನ್ನು ಕೊಲೆಗೈದಿರುವ ಆರೋಪಿಗಳಿಗೆ ಯಾವುದೇ ದಯಾ ದಾಕ್ಷಿಣ್ಯ ತೋರಿಸದೆ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಈ ನಿಟ್ಟಿನಲ್ಲಿ ಇಂದು ಸದನದಲ್ಲಿ ಪ್ರಸ್ತಾಪಿಸುವುದಾಗಿ ಭರವಸೆ ನೀಡಿದರು.
ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ಜೈನಮುನಿಗಳ ಹತ್ಯೆಯನ್ನು ಇಡೀ ದೇಶವೇ ಖಂಡಿಸಿದೆ, ಅತ್ಯಂತ ಕ್ರೂರ ರೀತಿಯಲ್ಲಿ ಕೊಲೆ ಮಾಡಿರುವ ಪ್ರಕರಣವನ್ನು ಸರಕಾರ ಸಿಬಿಐ ತನಿಖೆಗೆ ಒಳಪಡಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಮಾಜಿ ಸಚಿವ ಸೊಗಡು ಶಿವಣ್ಣ ಮಾತನಾಡಿ, ಇಡೀ ಘಟನೆಯನ್ನು ಅವಲೋಕಿಸಿದರೆ ನಿಜಕ್ಕೂ ಆತಂಕಕಾರಿಯಾಗಿದೆ. ಒಬ್ಬರು ಬದುಕಲು ಇನ್ನೊಬ್ಬರ ಕೊಲ್ಲುವುದು ಮಹಾಪರಾಧ, ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ವಿಚಾರವಾಗಿದೆ. ಸಮಾಜವನ್ನು ತಿದ್ದುವ ಕೆಲಸ ಆಗಬೇಕು ಎಂದರು.

ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಸ್ಪೂರ್ತಿ ಚಿದಾನಂದ ಮಾತನಾಡಿ, ಜೈನಮುನಿ ಕಾಮಕುಮಾರ ನಂದಿ ಸ್ವಾಮೀಜಿಗಳ ಹತ್ಯೆ ಖಂಡನೀಯ, ಸಮುದಾಯದ ಎಲ್ಲಾ ರೀತಿಯ ಹೋರಾಟಕ್ಕೂ ನಮ್ಮ ಬೆಂಬಲವಿದೆ. ನ್ಯಾಯ ಸಿಗುವವರೆಗೂ ಅವರೊಂದಿಗೆ ಹೊರಾಟದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದರು.

ಈ ಸಂಬಂಧ ಮನವಿಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ ಅವರಿಗೆ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಜೈನ ಸಮುದಾಯದ ಬಾಹುಬಲಿ ಬಾಬು, ಜಿನೇಶ್, ಬಾಹುಬಲಿ.ಎಂ.ಎ, ಚಂದ್ರಕೀರ್ತಿ, ನಾಗೇಂದ್ರ, ಆರ್.ಎ.ಸುರೇಶ್ ಕುಮಾರ್, ನಾಗರಾಜು.ಟಿ.ಜೆ, ಸುಭೋದ್ ಕುಮಾರ್, ಪದ್ಮಪ್ರಸಾದ್, ಜೈನ್ ಮಿಲನ್, ಜೈನ ಸಮುದಾಯದ ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!