ತುರುವೇಕೆರೆ: ತುಮಕೂರು ಹಾಲು ಒಕ್ಕೂಟದ ನಾನಾ ಹುದ್ದೆಗಳನ್ನು ತುಂಬುವ ಸಲುವಾಗಿ ನಡೆಸಿದ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಪೀಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಟಿ.ಎಸ್.ಬೋರೇಗೌಡ ಹಾಗೂ ಟಿ.ಎ.ಪಿ.ಸಿ.ಎಂ.ಎಸ್. ಮಾಜಿ ಅಧ್ಯಕ್ಷ ಡಿ.ಪಿ.ರಾಜು ಗಂಭಿರ ಆರೋಪ ಮಾಡಿದ್ದಾರೆ.
ಪಟ್ಟಣದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತುಮುಲ್ ತಮ್ಮಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬಲು ನೇಮಕಾತಿಗಾಗಿ ಪರೀಕ್ಷೆ ನಡೆಸಿತ್ತು. ಆದರೆ ಪರೀಕ್ಷೆಗೂ ಮುನ್ನ ಕೆಲವರಿಂದ ಹುದ್ದೆ ನೀಡುವ ಸಲುವಾಗಿ ಹಣ ವಸೂಲಿ ಮಾಡಲಾಗಿದೆ ಎಂಬ ವಿಚಾರ ಹಾಗೂ ಪರೀಕ್ಷೆಗೆ ಹಾಜರಾದ ಕೆಲವರಿಂದ ಖಾಲಿ ಉತ್ತರ ಪತ್ರಿಕೆ ಪಡೆದುಕೊಂಡು ನಂತರ ಪರೀಕ್ಷೆ ಬರೆಸಲಾಗಿದೆ ಎಂಬ ಸುದ್ದಿ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ. ತುಮುಲ್ ಹುದ್ದೆಗಳ ನೇಮಕಾತಿ ಮಾಡಲು ನಾಮಕಾವಸ್ಥೆಗೆ ಪರೀಕ್ಷೆ ನಡೆಸಿದೆ. ಇನ್ನು ಕೆಲವೇ ದಿನಗಳಲ್ಲಿ ಆಡಳಿತ ಮಂಡಳಿ ಕೊನೆಯಾಗಲಿದ್ದು ಇದಕ್ಕೆ ಮುನ್ನಾ ಹಣ ಮಾಡಲು ನೇಮಕಾತಿ ಪರೀಕ್ಷೆ ನಡೆಸಿದೆ ಎಂದು ದೂರಿದರು.
ಈ ಹಿಂದೆ 2017 ರಲ್ಲಿ ತುಮುಲ್ ಖಾಲಿ ಹುದ್ದೆಗಳನ್ನು ತುಂಬಲು ಅರ್ಜಿ ಆಹ್ವಾನಿಸಿತ್ತು. ಆ ವೇಳೆ ಟಿ.ಬಿ.ವೇಣುಗೋಪಾಲ್ ಎಂಬ ಅಭ್ಯರ್ಥಿ ಅರ್ಜಿ ಸಲ್ಲಿಸಿದ್ದರು, ಅಂಕಗಳನ್ನು ಹೆಚ್ಚು ಪಡೆದಿದ್ದರೂ ಸಹ ಟಿ.ಬಿ.ವೇಣುಗೋಪಾಲ್ ಅವರಿಗೆ ತುಮುಲ್ ಹುದ್ದೆ ನೀಡಲಿಲ್ಲ. ಬದಲಿಗೆ ಕಡಿಮೆ ಅಂಕ ಪಡೆದ ಅಭ್ಯರ್ಥಿಗೆ ತುಮುಲ್ ಹುದ್ದೆ ನೀಡಿತ್ತು. ಇದನ್ನು ಪ್ರಶ್ನಿಸಿ ಟಿ.ಬಿ.ವೇಣುಗೋಪಾಲ್ ನ್ಯಾಯಾಲಯದ ಮೆಟ್ಟಿಲೇರಿದ್ದರು, ಅಂತಿಮವಾಗಿ ನ್ಯಾಯಾಲಯ ಅರ್ಹ ಅಭ್ಯರ್ಥಿಯಾದ ಟಿ.ಬಿ.ವೇಣುಗೋಪಾಲ್ ಅವರನ್ನು 12 ವಾರದ ಗಡುವಿನೊಳಗೆ ನೇಮಕ ಮಾಡಿಕೊಳ್ಳುವಂತೆ ತುಮುಲ್ಗೆ ಸೂಚನೆ ನೀಡಿತ್ತು. ಆದರೆ ತುಮುಲ್ ಇದುವರೆವಿಗೂ ನೇಮಕ ಮಾಡಿಕೊಂಡಿಲ್ಲ. ಇದು ಕೇವಲ ಒಂದು ಉದಾಹರಣೆ, ಅರ್ಹತೆ ಇದ್ದರೂ ನೇಮಕವಾಗದ ಅನೇಕ ಅಭ್ಯರ್ಥಿಗಳು ಇದ್ದಾರೆ, ಈ ಬಾರಿಯೂ ಖಾಲಿ ಹುದ್ದೆಗಳನ್ನು ತುಂಬಲು ನಡೆಸಿದ ನೇಮಕಾತಿ ಪರೀಕ್ಷೆ ವೇಳೆ ಅಕ್ರಮ ನಡೆದಿದೆ ಈ ಬಗ್ಗೆ ತನಿಖೆಯಾಗಬೇಕೆಂದು ಸರಕಾರ ಒತ್ತಾಯಿಸಿದರು.
ಸಹಕಾರ ಸಚಿವರ ತವರು ಜಿಲ್ಲೆಯ ತುಮುಲ್ ಹುದ್ದೆಗಳ ನೇಮಕಾತಿ ವೇಳೆ ಅಕ್ರಮ ನಡೆಸಿರುವ ಬಗ್ಗೆ ಚರ್ಚೆಯಾಗುತ್ತಿದೆ. ಆದುದರಿಂದ ಸಚಿವ ಕೆ.ಎನ್.ರಾಜಣ್ಣವನರು ತುಮುಲ್ ನೇಮಕಾತಿ ಸಂಬಂಧವಾಗಿ ತನಿಖೆ ನಡೆಸಬೇಕು, ಅರ್ಹ ಅಭ್ಯರ್ಥಿಗಳಿಗೆ ಹುದ್ದೆಗಳು ಲಭ್ಯವಾಗುವಂತೆ ಕ್ರಮ ವಹಿಸಿ ಜಿಲ್ಲೆಯ ಘನತೆ ಎತ್ತಿ ಹಿಡಿಯಬೇಕಿದೆ. ಈ ಸಂಬಂಧ ಸಚಿವರನ್ನು ಖುದ್ದು ಭೇಟಿಯಾಗಿ ಮನವಿ ಪತ್ರ ಸಲ್ಲಿಸುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಆನೇಕೆರೆ ಗ್ರಾಪಂ ಮಾಜಿ ಸದಸ್ಯ ಹುಚ್ಚೇಗೌಡ ಮತ್ತಿತರಿದ್ದರು.
Comments are closed.