ತುಮಕೂರು: ಪ್ರಾಥಮಿಕ ಶಾಲೆಗಳ ವೇಳಾಪಟ್ಟಿ ಬದಲಾಯಿಸಿ ಬೆಳಗ್ಗೆ 9.30 ರಿಂದ ಸಂಜೆ 4.30ರ ವರೆಗೆ ಶಾಲೆ ಅವಧಿ ಮಾಡುವುದರಿಂದ ಹಲವಾರು ತೊಂದರೆ ಕಾಣಿಸಿಕೊಳ್ಳುತ್ತಿದ್ದು, ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಈ ಹಿಂದಿನ ವರ್ಷಗಳಂತೆಯೇ ಶಾಲಾ ವೇಳಾಪಟ್ಟಿ ನಿಗಧಿ ಪಡಿಸಲು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತುಮಕೂರು ಜಿಲ್ಲಾಧ್ಯಕ್ಷ ಆರ್.ಪರಶಿವಮೂರ್ತಿ, ಪ್ರಧಾನ ಕಾರ್ಯದರ್ಶಿ ಚಿಕ್ಕಣ್ಣ.ಟಿ.ಎಸ್. ಒತ್ತಾಯಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಸಿಇಓ ಪ್ರಭು.ಜಿ. ಅವರಿಗೆ ಮನವಿ ಸಲ್ಲಿಸಿರುವ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ನಿಯೋಗ ಗ್ರಾಮೀಣ ಭಾಗದಲ್ಲಿ ಮಕ್ಕಳು ಬೆಳಗ್ಗೆ 9.30 ಗಂಟೆಗೆ ಉಪಹಾರ ಸೇವಿಸಿ ಶಾಲೆಗೆ ಬರುವುದು ಕಷ್ಟವಾಗುತ್ತಿದೆ. ಇದರಿಂದ ಶಾಲೆಯ ಪ್ರಾರ್ಥನೆಯ ವೇಳೆ ಮಕ್ಕಳ ಹಾಜರಾತಿ ಕಡಿಮೆಯಾಗುವುದರ ಜೊತೆಗೆ ಸರಕಾರದ ಕ್ಷೀರಭಾಗ್ಯ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರುವುದು ಕಷ್ಟವಾಗುತ್ತಿದೆ. ಹಾಗಾಗಿ ಈ ಹಿಂದಿನ ವರ್ಷಗಳ ರೀತಿಯೇ ಬೆಳಗ್ಗೆ 10.20 ರಿಂದ ಸಂಜೆ 4.30 ರ ವರೆಗೆ ಶಾಲಾ ಶೈಕ್ಷಣಿಕ ಅವಧಿ ನಿಗಜಿ ಪಡಿಸುವಂತೆ ಸರಕಾರವನ್ನು ಒತ್ತಾಯಿಸಿದ್ದಾರೆ.
ಸರಕಾರದ ಉದ್ದೇಶ ಗುಣಾತ್ಮಕ ಶಿಕ್ಷಣ ನೀಡುವುದೇ ಆಗಿದ್ದರೂ ಸಹ ಬೆಳಗ್ಗೆ 9.30ಕ್ಕೆ ಮಕ್ಕಳು ಶಾಲೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ರೈತರು, ಕೂಲಿ ಕಾರ್ಮಿಕರು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸರಕಾರಿ ಶಾಲೆಗೆ ಹಾಜರಾಗುತ್ತಿದ್ದು, ವೇಳಾ ಪಟ್ಟಿ ಬದಲಾವಣೆಯಿಂದ ಇವರಿಗೆ ಸಾಕಷ್ಟು ತೊಂದರೆಯಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಕಳೆದ ಶೈಕ್ಷಣಿಕ ವರ್ಷದಲ್ಲಿ ಸರಕಾರ ಪ್ರಾಯೋಗಿಕವಾಗಿ ಶಾಲಾ ಶೈಕ್ಷಣಿಕ ವೇಳಾಪಟ್ಟಿಯನ್ನು ಬೆಳಗ್ಗೆ 9.30 ರಿಂದ 10 ಗಂಟೆಯವರೆಗೆ ಸ್ವಚ್ಛತೆ ಮತ್ತು ಪ್ರಾರ್ಥನೆ, 10 ಗಂಟೆಯಿಂದ ಸಂಜೆ 4.30ರ ವರೆಗೆ ಕಲಿಕಾ ಸಮಯದ ನಿಗದಿ ಪಡಿಸಿತ್ತು. ಆದರೆ ಬೆಳಗಿನ ಸಮಯದ ಉಪಹಾರವಿಲ್ಲದೆ ಮಕ್ಕಳು ಶಾಲೆಗೆ ಆಗಮಿಸುವುದರಿಂದ ಹಲವಾರು ಆರೋಗ್ಯ ತೊಂದರೆ ಕಾಣಿಸಿಕೊಂಡಿದೆ, ಇದು ಶಾಲಾ ಶೈಕ್ಷಣಿಕ ಚಟುವಟಿಕೆಗೆ ಅಡಚಣೆ ಉಂಟು ಮಾಡಿದೆ. ಕೆಲವು ಜಿಲ್ಲೆಗಳ ಪ್ರಾದೇಶಿಕ ಮತ್ತು ಭೌಗೋಳಿಕ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಶಾಲಾ ವೇಳಾ ಪಟ್ಟಿ ಬದಲಾಯಿಸಲಾಗಿದೆ. ಹಾಗಾಗಿ ಈ ಹಿಂದಿನ ರೀತಿಯಲ್ಲಿಯೇ ಶಾಲಾ ವೇಳಾ ಪಟ್ಟಿ ಮುಂದುವರೆಸುವಂತೆ ಸಿಇಓ ಅವರಲ್ಲಿ ಸಂಘ ಮನವಿ ಮಾಡಿದೆ.
ಅಕ್ಷರ ದಾಸೋಹ ಯೋಜನೆಯನ್ನು ಸುಗಮವಾಗಿ ನಡೆಸುವ ಉದ್ದೇಶದಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮುಖ್ಯ ಶಿಕ್ಷಕರು ಮತ್ತು ಮುಖ್ಯ ಅಡುಗೆಯವರ ಜಂಟಿ ಖಾತೆಯನ್ನು ತಾಂತ್ರಿಕ ಕಾರಣಗಳಿಂದ ಮುಂದೂಡಲು ಅನುಮತಿ ನೀಡುವಂತೆ ಸಹ ಮನವಿಯಲ್ಲಿ ಕೋರಿದ್ದಾರೆ.
ಮನವಿ ಸ್ವೀಕರಿಸಿದ ಸಿಇಓ ಪ್ರಭು ಜಿ.ಅವರು ಮೂರು ತಿಂಗಳ ಕಾಲಾವಕಾಶ ನೀಡುವಂತೆ ಕೋರಿದ್ದು, ಅಲ್ಲಿಯ ವರೆಗೆ ಶಿಕ್ಷಕರು ಗಾಬರಿ ಪಡುವ ಅಗತ್ಯವಿಲ್ಲ ಎಂದು ಸಂಘದ ಜಿಲ್ಲಾಧ್ಯಕ್ಷ ಆರ್.ಪರಶಿವಮೂರ್ತಿ ತಿಳಿಸಿದ್ದಾರೆ.
ನಿಯೋಗದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಪರಶಿವಮೂರ್ತಿ, ಪ್ರಧಾನ ಕಾರ್ಯದರ್ಶಿ ಚಿಕ್ಕಣ್ಣ.ಟಿ.ಎಸ್, ತಿಪಟೂರು ಅಧ್ಯಕ್ಷ ಜಿ.ಆರ್.ಜಯರಾಮ್, ವಿಭಾಗೀಯ ಉಪಾಧ್ಯಕ್ಷೆ ಮಂಜುಳ.ಕೆ.ಎ., ತುಮಕೂರು ತಾಲೂಕು ಅಧ್ಯಕ್ಷ ಪಿ.ಜಿ.ತಿಮ್ಮೇಗೌಡ, ಕಾರ್ಯದರ್ಶಿ ಮಹಾದೇವಯ್ಯ, ತುರುವೇಕೆರೆ ಅಧ್ಯಕ್ಷ ಬಸವರಾಜು.ಎಂ, ಕಾರ್ಯದರ್ಶಿ ಬಸವರಾಜು ಪಲ್ಲಕ್ಕಿ, ಸಂಘಟನಾ ಕಾರ್ಯದರ್ಶಿ ಮಂಜಣ್ಣ.ಆರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆಂಪೇಗೌಡ.ಜಿ. ಮತ್ತಿತರರು ಜೊತೆಗಿದ್ದರು.
Comments are closed.