ತುಮಕೂರು: ವೀರಶೈವ ಬೇರೆ, ಲಿಂಗಾಯಿತ ಬೇರೆ ಎಂದು ವೀರಶೈವ ಲಿಂಗಾಯಿತ ಧರ್ಮ ಒಡೆಯಲು ಯತ್ನಿಸುವವರ ವಿರುದ್ಧ ಸಮುದಾಯದ ಒಳ ಪಂಗಡಗಳನ್ನು ಒಗ್ಗೂಡಿಸುವುದು ಹಾಗೂ ಈ ಸಮುದಾಯದಲ್ಲಿರುವ ಬಡವರಿಗೆ ಸಹಾಯ ಮಾಡುವ ಉದ್ದೇಶದಿಂದ ಅಖಿಲ ಭಾರತೀಯ ವೀರಶೈವ ಲಿಂಗಾಯಿತ ಜಾಗೃತಿ ಸೇವಾ ಮಹಾ ಸಂಘ ಸ್ಥಾಪಿಸಲಾಗಿದೆ ಎಂದು ಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ.ಹಾಲೆನೂರು ಲೇಪಾಕ್ಷ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವೀರಶೈವ ಲಿಂಗಾಯಿತ ಪ್ರತ್ಯೇಕ ಧರ್ಮಕ್ಕೆ ನಮ್ಮ ಬೆಂಬಲವಿದೆ, ಆದರೆ ವೀರಶೈವ ಬೇರೆ, ಲಿಂಗಾಯಿತ ಬೇರೆ ಧರ್ಮ ಎಂಬುದಕ್ಕೆ ನಮ್ಮ ವಿರೋಧವಿದೆ, ಧರ್ಮ ಒಡೆಯುವುದಕ್ಕೆ ಅವಕಾಶ ನೀಡದಂತೆ ತಡೆಯುವ ನಿಟ್ಟಿನಲ್ಲಿ ಸುಮಾರು ಆರು ತಿಂಗಳ ಹಿಂದೆ ರಾಜ್ಯದ ಮೂವತ್ತು ಜಿಲ್ಲೆಗಳ ಸಮುದಾಯದ ಯುವಜನರು, ಹಿರಿಯರು ನಾಲ್ಕೈದು ಬಾರಿ ಸಭೆ ಸೇರಿ ಚರ್ಚಿಸಿದ ನಂತರ ಅಖಿಲ ಭಾರತೀಯ ವೀರಶೈವ ಲಿಂಗಾಯಿತ ಜಾಗೃತಿ ಸೇವಾ ಮಹಾ ಸಂಘ ಹುಟ್ಟು ಹಾಕಿದ್ದು, ಶ್ರೀಸಿದ್ದಗಂಗಾ ಶ್ರೀಗಳ ಆಶೀರ್ವಾದ, ಮಾರ್ಗದರ್ಶನ ಪಡೆಯಲಾಗಿದೆ ಎಂದರು.
ರಾಜ್ಯದಲ್ಲಿ ಕೆಲವರು ವೀರಶೈವ ಲಿಂಗಾಯಿತ ಬೇರೆ ಎಂದು ಸಮಾಜದ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ವೀರಶೈವ ಲಿಂಗಾಯಿತ ಎರಡು ಒಂದೆ, ಅನಾದಿ ಕಾಲದಿಂದಲೂ ಅವರವರ ಆಚಾರ, ವಿಚಾರಗಳನ್ನು ಮತ್ತೊಬ್ಬರಿಗೆ ತೊಂದರೆ ಯಾಗದ ರೀತಿಯಲ್ಲಿ ಆಚರಿಸಿಕೊಂಡು ಬರುತ್ತಿದ್ದೇವೆ. ನಮ್ಮಲ್ಲಿಯೂ 130ಕ್ಕೂ ಹೆಚ್ಚು ಒಳ ಪಂಗಡಗಳಿವೆ, ಅವುಗಳನ್ನು ಒಗ್ಗೂಡಿಸುವುದು, ಅವರಲ್ಲಿ ಶೇ.65 ರಷ್ಟು ಜನರು ಬಡವರಾಗಿದ್ದು, ಅವರ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಔದ್ಯೋಗಿಕವಾಗಿ ಮೇಲೆತ್ತುವ ಉದ್ದೇಶವನ್ನು ಅ.ಭಾ.ವೀ.ಲಿ.ಜಾ.ಸೇ.ಮ.ಸಂ ಹೊಂದಿದೆ ಎಂದು ಡಾ.ಹೆಚ್.ಲೇಪಾಕ್ಷ ನುಡಿದರು.
ಸಮುದಾಯದಲ್ಲಿರುವ ಬಡ ಪ್ರತಿಭಾವಂತರನ್ನು ಗುರುತಿಸಿ ಅವರ ಶೈಕ್ಷಣಿಕ ಉನ್ನತಿಗೆ ವಿದ್ಯಾರ್ಥಿ ವೇತನ ನೀಡುವುದು, ಉನ್ನತ ಶಿಕ್ಷಣ ಪಡೆದ ನಿರುದ್ಯೋಗಿಗಳಿಗೆ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ನೀಡಿ, ಉದ್ಯೋಗ ದೊರಕಿಸುವುದು ಸಂಘದ ಪ್ರಮುಖ ಉದ್ದೇಶವಾಗಿದೆ. ಈಗಾಗಲೇ 14ಕ್ಕು ಹೆಚ್ಚು ಜಿಲ್ಲೆಗಳಲ್ಲಿ ಸಂಘಕ್ಕೆ ಪದಾಧಿಕಾರಿಗಳ ನೇಮಕ ಮಾಡಿದ್ದು, ನೆರೆಯ ಆಂಧ್ರ, ತಮಿಳು ನಾಡು, ಮಹಾರಾಷ್ಟ್ರ ರಾಜ್ಯಗಳಿಂದಲೂ ನಮ್ಮ ಸಮುದಾಯದ ಜನರು ಸಂಘದೊಂದಿಗೆ ಕೈಜೋಡಿಸಿದ್ದಾರೆ. ಇದರ ಜೊತೆಗೆ ತ್ರಿವಿಧ ದಾಸೋಹಕ್ಕೆ ಹೆಸರಾದ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಸೇರಿದಂತೆ ಹಲವಾರು ಸ್ವಾಮೀಜಿಗಳು ನಮಗೆ ಆಶೀರ್ವದಿಸಿದ್ದು, ಮಾರ್ಗದರ್ಶನ ಮಾಡುವ ಭರವಸೆ ನೀಡಿದ್ದಾರೆ. ಮುಂದಿನ ಎರಡು ತಿಂಗಳಲ್ಲಿ ಸಂಘವನ್ನು ಅದ್ದೂರಿಯಾಗಿ ಉದ್ಘಾಟಿಸಲಾಗುವುದು ಎಂದು ತಿಳಿಸಿದರು.
ಅಖಿಲ ಭಾರತೀಯ ವೀರಶೈವ ಲಿಂಗಾಯಿತಿ ಜಾಗೃತಿ ಸೇವಾ ಮಹಾಸಂಘ, ಯಾವುದೇ ಸಂಘದ ವಿರುದ್ಧವಾಗಿ ಕಟ್ಟಿದಂತಹ ಸಂಘಟನೆಯಲ್ಲ, ವೀರಶೈವ ಲಿಂಗಾಯಿತ ಸಮುದಾಯದಲ್ಲಿರುವ ಬಡವರಿಗೆ ನೆರವಾಗಬೇಕು ಎಂಬ ಉದ್ದೇಶದಿಂದ ಕಟ್ಟಿದ ಸಂಘ, ಅಖಿಲ ಕರ್ನಾಟಕ ವೀರಶೈವ ಲಿಂಗಾಯಿತ ಮಹಾಸಭಾ ಉಳ್ಳವರ ಪರವಾಗಿದ್ದು, ಸಮುದಾಯದಲ್ಲಿನ ಬಡವರ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಹಾಗಾಗಿ ನಮ್ಮ ಸಮುದಾಯದಲ್ಲಿರುವ ಬಡವರಿಗೆ ಸೇವೆ ಸಲ್ಲಿಸುವುದು ನಮ್ಮ ಉದ್ದೇಶವಾಗಿದೆ ಎಂದರು.
ಅಖಿಲ ಭಾರತೀಯ ವೀರಶೈವ ಲಿಂಗಾಯಿತಿ ಜಾಗೃತಿ ಸೇವಾ ಮಹಾ ಸಂಘದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರದೀಪ್ ಕುಮಾರ್.ಎನ್.ಬಿ. ಮಾತನಾಡಿ, ನಮ್ಮ ಸಂಘಟನೆಯನ್ನು ಹಂತಹಂತವಾಗಿ ವಿಸ್ತರಿಸುತ್ತಿದ್ದು, ಈಗಾಗಲೇ 14 ಜಿಲ್ಲೆಗಳಿಂದ ಸುಮಾರು 3500 ಜನರು ಸದಸ್ಯತ್ವ ಪಡೆದಿದ್ದಾರೆ. ಸೇವೆಯೇ ನಮ್ಮ ಪರಮ ಗುರಿಯಾಗಿದೆ, ಯುವ ಜನರಿಗೆ ಆದ್ಯತೆ ನೀಡುವುದು, ಸಾಧಕರನ್ನು ಗುರುತಿಸಿ ಸಮಾಜಕ್ಕೆ ಪರಿಚಯಿಸುವುದು, ಉಪ ಪಂಗಡಗಳನ್ನು ಒಗ್ಗೂಡಿಸಿ ಒಂದು ವೇದಿಕೆ ತರುವುದು ಇದರ ಹಿಂದಿನ ಉದ್ದೇಶವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎನ್.ಪ್ರಕಾಶ್ ಮೂರ್ತಿ, ಯುವ ಘಟಕದ ರಾಷ್ಟ್ರೀಯ ಅಧ್ಯಕ್ಷ ಜಗದೀಶ್, ಡಾ.ನಾಗರಾಜು ಸೇರಿದಂತೆ ಹಲವರು ಹಾಜರಿದ್ದರು.
Comments are closed.