ಎಪಿಎಂಸಿ ತಿದ್ದುಪಡಿ ಕಾಯ್ದೆ ರದ್ದು- ಬಿಜೆಪಿ ಕಿಡಿ

98

Get real time updates directly on you device, subscribe now.


ತುಮಕೂರು: ಕೃಷಿಕರು ಮತ್ತು ವ್ಯಾಪಾರಿಗಳಿಗೆ ಅನುಕೂಲವಾಗಿದ್ದ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಸರಕಾರ ರದ್ದು ಮಾಡುವ ಮೂಲಕ ಕೃಷಿ ಕ್ಷೇತ್ರಕ್ಕೆ ದೊಡ್ಡ ಆಘಾತ ನೀಡಿದೆ ಎಂದು ಬಿಜೆಪಿ ಕೃಷಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದಿದ್ದ ಎಪಿಎಂಸಿ ತಿದ್ದುಪಡಿ ಕಾಯ್ದೆಯಿಂದ ರೈತ ತನ್ನ ಉತ್ಪನ್ನವನ್ನು ದೇಶದ ಯಾವುದೇ ಭಾಗದಲ್ಲಿಯಾದರೂ ಮಾರಾಟ ಮಾಡುವ ಮುಕ್ತ ಅವಕಾಶವಿತ್ತು. ಇದರಿಂದ ರೈತರಿಗೆ ಮತ್ತು ವ್ಯಾಪಾರಸ್ಥರು ಇಬ್ಬರಿಗೂ ಲಾಭಗಳಿದ್ದವು. ಆದರೆ ಸಿದ್ದರಾಮಯ್ಯ ನೇತೃತ್ವದ ಸರಕಾರ ಕಾಯ್ದೆ ರದ್ದು ಪಡಿಸುವ ಮೂಲಕ ರೈತರಿಗೆ ತೊಂದರೆ ನೀಡಿರುವುದಲ್ಲದೆ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.

ರಾಜ್ಯ ಸರಕಾರದ ಈ ನಿರ್ಧಾರದ ವಿರುದ್ಧ ಪ್ರತಿಭಟಿಸಲು ಬಿಜೆಪಿ ರೈತ ಮೋರ್ಚಾ ಪದಾಧಿಕಾರಿಗಳ ಸಭೆಯಲ್ಲಿ 8-10 ನಿರ್ಣಯ ಕೈಗೊಳ್ಳಲಾಗಿದೆ. ಮುಂದಿನ 15 ದಿನಗಳಲ್ಲಿ ಬಿಜೆಪಿ ಪಕ್ಷದ ರೈತ ಮೋರ್ಚಾ ವತಿಯಿಂದ ವರ್ತಕರು, ರೈತರ ಸಭೆ ನಡೆಸಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಗುವುದು, ನಂತರ ಸಂಬಂಧಪಟ್ಟ ಸಚಿವರಿಗೆ ಹಾಗೂ ಮುಖ್ಯಮಂತ್ರಿಗಳ ಬಳಿ ನಿಯೋಗ ಹೋಗಿ ಮನವಿ ಸಲ್ಲಿಸಲಾಗುವುದು. ತದ ನಂತರ ಬೃಹತ್ ಹೋರಾಟ ರೂಪಿಸಲಿದೆ ಎಂದು ಶಿವಪ್ರಸಾದ್ ತಿಳಿಸಿದರು.

ಕೇಂದ್ರ ಸರಕಾರ ನೀಡುವ ಕಿಸಾನ್ ಸನ್ಮಾನ ಯೋಜನೆಗೆ ಪೂರಕವಾಗಿ ರಾಜ್ಯ ಸರಕಾರ ವರ್ಷಕ್ಕೆ ನಾಲ್ಕು ಸಾವಿರ ರೂ. ರೈತರ ಖಾತೆಗೆ ಜಮಾ ಮಾಡುತ್ತಿದ್ದು, ಈ ಯೋಜನೆ ರದ್ದು ಮಾಡಲಾಗಿದೆ. ಇದರಿಂದ ಕೃಷಿ ಕಾಲದಲ್ಲಿ ಸಣ್ಣ ಮತ್ತು ಅತಿಸಣ್ಣ ರೈತರಿಗೆ ನೆರೆವಾಗುತ್ತಿದ್ದ ಯೋಜನೆ ಸ್ಥಗಿತಗೊಂಡಂತಾಗಿದೆ. ಅಲ್ಲದೆ ಈ ಹಿಂದಿನ ಸರಕಾರ ಜಾರಿಗೆ ತಂದಿದ್ದ ಭೂ ಸಿರಿ, ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ, ರೈತ ಶಕ್ತಿ ಯೋಜನೆ ಹಾಗೂ ರೈತರ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವ ರೈತ ವಿದ್ಯಾನಿಧಿ ಯೋಜನೆಯನ್ನು ಸರಕಾರ ಹಾಲಿ ಸರಕಾರ ರದ್ದುಗೊಳಿಸಿದೆ, ವಿದ್ಯುತ್ ಬಿಲ್ ಹೆಚ್ಚಳ ಮಾಡಿದೆ. ಬಡವರು, ರೈತರ ಪರ ಎಂದು ಹೇಳುವ ಕಾಂಗ್ರೆಸ್ ಪಕ್ಷದ ಸರಕಾರ ತನ್ನ ರೈತ ವಿರೋಧಿ ನೀತಿ ಮುಂದುವರೆಸಿದೆ ಎಂದು ಆರೋಪಿಸಿದರು.

ರಾಜ್ಯ ಸರಕಾರ ನಾವು ಅನ್ನಭಾಗ್ಯ ಯೋಜನೆ ಜಾರಿಗೆ ತಂದೆವು ಎಂದು ಬೊಬ್ಬೆ ಹೊಡೆಯುತ್ತಿದೆ. ಆದರೆ ಅನ್ನ ಬೆಳೆದು ಕೊಡುವ ರೈತನ ಪರವಾಗಿದ್ದ ಎಪಿಎಂಸಿ ಕಾಯ್ದೆ ಹಾಗೂ ಇನ್ನಿತರ ಯೋಜನೆ ರದ್ದು ಮಾಡುವ ಮೂಲಕ ರೈತ ವಿರೋಧಿ ಧೋರಣೆ ಮುಂದುವರೆಸಿದೆ. ಇದೇ ರೀತಿ ಮುಂದುವರೆದರೆ ರೈತರೇ ಸರಕಾರದ ವಿರುದ್ಧ ಬೀದಿಗಿಳಿಯುವ ಕಾಲ ದೂರವಿಲ್ಲ ಎಂದು ಎಚ್ಚರಿಸಿದರು.

ದ್ವೇಷ ರಾಜಕಾರಣದ ಫಲವಾಗಿ ರೈತರಿಗೆ ಅನುಕೂಲವಾಗುತ್ತಿದ್ದ ಬಿಜೆಪಿ ಸರಕಾರದ ಹಲವಾರು ಯೋಜನೆ ರದ್ದು ಮಾಡಿರುವ ಸಿದ್ದರಾಮಯ್ಯ ನೇತೃತ್ವದ ಸರಕಾರ ವಿದ್ಯುತ್ ದರ ಹೆಚ್ಚಳದ ಬಗ್ಗೆ ಜಾಣ ಕಿವುಡು ಪ್ರದರ್ಶಿಸುತ್ತಿದೆ. ಸರಕಾರದ ಈ ಧೋರಣೆ ವಿರುದ್ಧ ರೈತರಲ್ಲಿ ಜಾಗೃತಿ ಮೂಡಿಸಿ ಬೃಹತ್ ಹೋರಾಟವನ್ನು ಸದ್ಯದಲ್ಲಿಯೇ ರೂಪಿಸಲಾಗುವುದು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸತ್ಯಮಂಗಲ ಜಗದೀಶ್, ಮಾಧ್ಯಮ ಪ್ರಮುಖರಾದ ಟಿ.ಆರ್.ಸದಾಶಿವಯ್ಯ, ಸಹ ಪ್ರಮುಖ ಜೆ.ಜಗದೀಶ್ ಮತ್ತಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!