ತುಮಕೂರು: ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಜಿಲ್ಲಾ ಪಂಚಾಯತ್ ಮತ್ತು ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ವತಿಯಿಂದ ಪಾಲಿಕೆಯ ಅನಕ್ಷರಸ್ಥ ಪೌರ ಕಾರ್ಮಿಕರಿಗೆ ಅಕ್ಷರ ಕಲಿಸುವ ಕಾರ್ಯಕ್ರಮ ಪ್ರತಿನಿತ್ಯ ನಡೆಸಲಾಗುತ್ತಿದ್ದು, ಕಲಿಕಾರ್ಥಿ ಪೌರ ಕಾರ್ಮಿಕರಿಗೆ ಲೇಖನ, ಕಲಿಕಾ ಸಾಮಗ್ರಿ ಹಾಗೂ ಪುಸ್ತಕಗಳನ್ನು ವಿತರಿಸಲಾಯಿತು.
ಅನಕ್ಷರಸ್ಥ ಪೌರ ಕಾರ್ಮಿಕರಿಗೆ ಲೇಖನ ಸಾಮಗ್ರಿ ಹಾಗೂ ಪುಸ್ತಕಗಳನ್ನು ವಿತರಿಸಿದ ಮೇಯರ್ ಪ್ರಭಾವತಿ ಸುಧೀಶ್ವರ್ ಮಾತನಾಡಿ, ರಾಜ್ಯ ಸರ್ಕಾರ ಅನಕ್ಷರಸ್ಥ ಪೌರ ಕಾರ್ಮಿಕರಿಗೆ ಅಕ್ಷರ ಕಲಿಸುವ ಉತ್ತಮ ಕಾರ್ಯಕ್ರಮ ಜಾರಿಗೊಳಿಸಿದೆ. ಪೌರ ಕಾರ್ಮಿಕರು ಈ ಕಾರ್ಯಕ್ರಮ ಸದುಪಯೋಗಪಡಿಸಿಕೊಂಡು ಅಕ್ಷರ ಕಲಿಯಬೇಕು. ಅಕ್ಷರ ಕಲಿತು ತಮಗೆ ಸಂಬಂಧಿಸಿದ ದಾಖಲಾತಿಗಳಲ್ಲಿ ಹೆಬ್ಬೆಟ್ಟು ಬದಲಿಗೆ ಅದನ್ನು ಓದಿ ಸಹಿ ಮಾಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಪಾಲಿಕೆ ಸದಸ್ಯ ಹಾಗೂ ವಿರೋಧ ಪಕ್ಷದ ಮಾಜಿ ನಾಯಕ ಜೆ. ಕುಮಾರ್ ಮಾತನಾಡಿ, ಶಿಕ್ಷಣ ಅತ್ಯವಶ್ಯ, ಬಾಬಾ ದಲಿತರಿಗೆ ಶಿಕ್ಷಣ ಬೇಕಾಗಿರುವುದು ಸಾಮಾಜಿಯ ನ್ಯಾಯ, ರಾಜಕೀಯ ನ್ಯಾಯ ಹಾಗೂ ಸಮಾಜದಲ್ಲಿ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲು ಶಿಕ್ಷಣ ಬೇಕು ಎಂದು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ್ದಾರೆ. ಬಾಬಾ ಸಾಹೇಬರ ಮಾತನ್ನು ಅರ್ಥೈಸಿಕೊಂಡು ಎಲ್ಲರೂ ಶಿಕ್ಷಣವಂತರಾಗಬೇಕು. ಇದರೊಂದಿಗೆ ಪೌರ ಕಾರ್ಮಿಕರು ತಮ್ಮ ಮಕ್ಕಳಿಗೂ ಶಿಕ್ಷಣ ಕೊಡಿಸಿ ಸಂವಿಧಾನದ ಆಶಯಗಳ ಬಗ್ಗೆಯೂ ತಿಳಿಸಬೇಕು ಎಂದು ಹೇಳಿದರು.
ಪಾಲಿಕೆ ವ್ಯಾಪ್ತಿಯಲ್ಲಿ ನಾಲ್ಕೈದು ವಾರ್ಡ್ ಗಳಲ್ಲಿ ಒಂದು ಕಲಿಕಾ ಕೇಂದ್ರ ಸ್ಥಾಪಿಸಿ ಪೌರ ಕಾರ್ಮಿಕರಿಗೆ ಅಕ್ಷರಾಭ್ಯಾಸ ತರಗತಿ ನಡೆಸಲಾಗುವುದು ಎಂದು ಹೇಳಿದರು.
ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಹೆಚ್.ಡಿ. ಲಕ್ಷ್ಮಿಜನಾರ್ಧನ ಮಾತನಾಡಿ, ಇದು ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಕಾರ್ಯಕ್ರಮಗಳಲ್ಲಿ ಒಂದಾಗಿರುವ ಸಾಕ್ಷರತಾ ಕಾರ್ಯಕ್ರಮ, ಜಿಲ್ಲಾ ಪಂಚಾಯತ್ ಆಶ್ರಯದಲ್ಲಿ ಲಿಂಕ್ ಡಾಕ್ಯುಮೆಂಟ್ ನಲ್ಲಿ 3 ಸಾವಿರ ಅನರಕ್ಷರಸ್ಥರನ್ನು ಗುರುತಿಸಿ ಅಕ್ಷರ ಕಲಿಸುವ ಯೋಜನೆ ಕೈಗೊಳ್ಳಲಾಗಿದೆ. ಮಹಾನಗರ ಪಾಲಿಕೆಯಲ್ಲಿ 104 ಮಂದಿ ಅನರಕ್ಷಸ್ಥ ಪೌರ ಕಾರ್ಮಿಕರಿದ್ದು, ಇವರಿಗೆ ಇಲಾಖೆ ವತಿಯಿಂದ ನೀಡಲಾಗಿರುವ ಲೇಖನ ಸಾಮಗ್ರಿ, ಕಲಿಕಾ ಸಾಮಗ್ರಿ, ಕೈ ಬರಹ ಪುಸ್ತಕಗಳನ್ನು ವಿತರಿಸಲಾಗಿದೆ ಎಂದರು.
ಮಹಾನಗರ ಪಾಲಿಕೆ ಆವರಣದಲ್ಲಿ ಪ್ರತಿನಿತ್ಯವೂ ಸಾಕ್ಷರತಾ ತರಗತಿಗಳು ನಡೆಯುತ್ತಿರುತ್ತವೆ. ಈ ಎಲ್ಲಾ ಕಲಿಕಾರ್ಥಿಗಳಿಗೆ ವಿದ್ಯಾರ್ಥಿಗಳು ಬಳಸಬಹುದಾದ ಕಲಿಕಾ ಸಾಮಗ್ರಿಗಳನ್ನು ನೀಡಿ ಅಕ್ಷರಾಭ್ಯಾಸ ಮಾಡಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ವಿರೋಧ ಪಕ್ಷದ ನಾಯಕ ವಿಷ್ಣುವರ್ಧನ್, ಪಾಲಿಕೆ ಸದಸ್ಯರಾದ ಇನಾಯತ್ ಉಲ್ಲಾಖಾನ್, ಪಾಲಿಕೆ ಅಭಿಯಂತರರಾದ ಪೂರ್ಣಿಮಾ, ಆರೋಗ್ಯಾಧಿಕಾರಿ ಡಾ. ಮದಕರಿನಾಯಕ, ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯ ಕಾರ್ಯಕ್ರಮ ಸಹಾಯಕರಾದ ಲಕ್ಷ್ಮಿ, ಪಾಲಿಕೆ ನೌಕರ ಕದಿರಪ್ಪ ಮತ್ತಿತರರು ಹಾಜರಿದ್ದರು.
Comments are closed.