ತುಮಕೂರು: ಕೊಬ್ಬರಿ ಬೆಳೆಗಾರರು ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ಭೇಟಿ ನೀಡಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಕ್ವಿಂಟಾಲ್ ಕೊಬ್ಬರಿಗೆ 15000 ರೂ. ನೀಡುವ ಭರವಸೆ ನೀಡಿದ್ದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೇವಲ 1250 ರೂ. ಪ್ರೋತ್ಸಾಹ ಧನ ಘೋಷಿಸುವ ಮೂಲಕ ನುಡಿದಂತೆ ನಡೆಯುವಲ್ಲಿ ಕಾಂಗ್ರೆಸ್ ಪಕ್ಷ ವಿಫಲವಾಗಿದೆ ಎಂದು ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್ ಆರೋಪಿಸಿದ್ದಾರೆ.
ನಗರದ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಿಪಟೂರು ಉಪ ವಿಭಾಗಾಧಿಕಾರಿಗಳ ಕಚೇರಿ ಮುಂದೆ ಕೊಬ್ಬರಿ ಬೆಳೆಗಾರರು ತಿಂಗಳಾನುಗಟ್ಟಲೆ ಪ್ರತಿಭಟನೆ ನಡೆಸುವ ವೇಳೆ ಸ್ಥಳಕ್ಕೆ ಆಗಮಿಸಿ ಪ್ರತಿಭಟನೆಗೆ ಬೆಂಬಲ ಸೂಚಿಸಿ ಮಾತನಾಡಿದ್ದ ಡಿ.ಕೆ.ಶಿವಕುಮಾರ್ ಅವರು ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಕ್ವಿಂಟಾಲ್ ಕೊಬ್ಬರಿಯನ್ನು 15000 ಸಾವಿರ ರೂ. ಗಳಿಗೆ ಖರೀದಿಸುವ ಭರವಸೆ ನೀಡಿದ್ದರು. ಸದರಿ ಭರವಸೆ ನಂಬಿ ರಾಜ್ಯದ ಮಧ್ಯ ಕರ್ನಾಟಕ, ಹಳೆ ಮೈಸೂರು ಭಾಗದ ಸುಮಾರು 35 ವಿಧಾನಸಭಾ ಕ್ಷೇತ್ರಗಳ ಜನರು ಕಾಂಗ್ರೆಸ್ ಗೆ ಮತ ನೀಡಿ ಅಧಿಕಾರಕ್ಕೆ ತಂದಿದ್ದಾರೆ. ಹಾಗಾಗಿ ಕೊಬ್ಬರಿ ಬೆಳೆಗಾರರಿಗೆ ನೀಡಿದ ಭರವಸೆ ಈಡೇರಿಸುವುದು ಸರಕಾರದ ಕರ್ತವ್ಯವಾಗಿದೆ ಎಂದರು.
ತುಮಕೂರು ಮತ್ತು ಸುತ್ತಮುತ್ತಲ ಜಿಲ್ಲೆಗಳಲ್ಲಿ ಕೊಬ್ಬರಿ ದರ ಕುಸಿತ ಒಂದು ಜ್ವಲಂತ ಸಮಸ್ಯೆಯಾಗಿದೆ. 2019- 20ರಲ್ಲಿ ಕ್ವಿಂಟಾಲ್ ಕೊಬ್ಬರಿಗೆ 18500 ರಿಂದ 19000 ರೂ ಇತ್ತು, ತದನಂತರ ಕುಸಿತ ಕಾಣುತ್ತಾ ಬಂದಿದೆ. ಇದರ ವಿರುದ್ಧ ರೈತರು ನಿರಂತರ ಹೋರಾಟ ಮಾಡಿದ್ದರ ಫಲವಾಗಿ ನ್ಯಾಫೆಡ್ ಮೂಲಕ ಬೆಂಬಲ ಬೆಲೆಯಲ್ಲಿ ಖರೀದಿಸುವ ಕೊಬ್ಬರಿಗೆ ಕ್ವಿಂಟಾಲ್ ಒಂದಕ್ಕೆ 11,750 ರೂ. ನಿಗದಿ ಪಡಿಸಲಾಗಿತ್ತು. ಆದರೆ ಇಂದು ಕೊಬ್ಬರಿ ಬೆಲೆ ಕ್ವಿಂಟಾಲ್ ಗೆ 7600 ರಿಂದ 8000 ರೂ. ಗಳಿಗೆ ಇಳಿದಿದೆ, ನ್ಯಾಫೆಡ್ ಮೂಲಕ ಕೊಬ್ಬರಿ ಖರೀದಿಸುತ್ತಿದ್ದರೂ ಗುಣಮಟ್ಟದ ಹೆಸರಿನಲ್ಲಿ ಒಳ್ಳೆಯ ಕೊಬ್ಬರಿ ಕೊಳ್ಳದೆ ವಾಪಸ್ ಕಳುಹಿಸಲಾಗುತ್ತಿದೆ. ಒಂದು ಕೊಬ್ಬರಿ 75 ಎಂ.ಎಂ ಸುತ್ತಳತೆಗಿಂತ ಕಡಿಮೆ ಇರಬಾರದು. ತೇವಾಂಶ ಶೇ.7 ರಷ್ಟು ಇರಬೇಕು. ಹೀಗೆ ಹತ್ತು ಹಲವು ಷರತ್ತು ವಿಧಿಸುವ ಮೂಲಕ ಕೊಬ್ಬರಿ ಮಾರಾಟಕ್ಕೆ ತೊಡಕು ಉಂಟು ಮಾಡಿದೆ ಎಂದು ಆರೋಪಿಸಿದರು.
ಕೊಬ್ಬರಿ ಬೆಲೆ ಕುಸಿತದ ಬಗ್ಗೆ ಸದನದಲ್ಲಿ ತುಮಕೂರು ಜಿಲ್ಲೆಯ ಶಾಸಕರು ಸೇರಿದಂತೆ ಜೆಡಿಎಸ್ ಮುಖಂಡರಾದ ಹೆಚ್.ಡಿ.ಕುಮಾರಸ್ವಾಮಿ, ಹೆಚ್.ಡಿ.ರೇವಣ್ಣ ಮುಂತಾದವರು ಚರ್ಚೆ ನಡೆಸಿದ್ದರ ಫಲವಾಗಿ ಸರಕಾರ ಇದುವರೆಗೂ ನ್ಯಾಫೆಡ್ ನಿಂದ ಖರೀದಿಸಿರುವ ಕೊಬ್ಬರಿ ಹೊರತು ಪಡಿಸಿ ಮುಂದೆ ಖರೀದಿಸಿರುವ ಕೊಬ್ಬರಿ ಕ್ವಿಂಟಾಲ್ ಒಂದಕ್ಕೆ 1250 ರೂ. ಪ್ರೋತ್ಸಾಹ ಧನ ಘೋಷಣೆ ಮಾಡಿದೆ. ನ್ಯಾಫೆಡ್ ನ 11750 ಮತ್ತು ರಾಜ್ಯ ಸರಕಾರದ 1250 ಸೇರಿದಂತೆ ಕ್ವಿಂಟಾಲ್ ಕೊಬ್ಬರಿ ಬೆಲೆ 13000 ಆಗಲಿದೆ. ಡಿಸಿಎಂ ಘೋಷಣೆ ಮಾಡಿದ್ದು ಕ್ವಿಂಟಾಲ್ ಕೊಬ್ಬರಿಗೆ 15000 ರೂ., ಹಾಗಾಗಿ ಉಳಿದ 2000 ರೂ. ಪ್ರೋತ್ಸಾಹ ಧನವನ್ನು ಕೂಡಲೇ ಘೋಷಣೆ ಮಾಡಬೇಕು. ಈ ವರ್ಷ ಖರೀದಿ ಮಾಡಿರುವ ಎಲ್ಲಾ ಕೊಬ್ಬರಿಗೂ ಈ ಪ್ರೋತ್ಸಾಹ ಧನ ನೀಡಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದು ಶಾಂತಕುಮಾರ್ ತಿಳಿಸಿದರು.
ಪ್ರಕಾಶ ಕಮ್ಮರಡಿ ಅವರ ನೇತೃತ್ವದ ಕೃಷಿ ಉತ್ಪನ್ನಗಳ ಬೆಲೆ ನಿಗಧಿ ಆಯೋಗ ಮಾಡಿರುವ ಶಿಫಾರಸ್ಸಿನ ಪ್ರಕಾರ ಒಂದು ಕ್ವಿಂಟಾಲ್ ಕೊಬ್ಬರಿ ಬೆಳೆಯಲು ಸುಮಾರು 16000 ರೂ ಖರ್ಚಾಗುತ್ತದೆ, ನ್ಯಾಫೇಡ್ ಮತ್ತು ರಾಜ್ಯ ಸರಕಾರದ ಪ್ರೋತ್ಸಾಹ ಧನ ಸೇರಿ 13000 ರೂ. ಗಳಿಗೆ ಕೊಬ್ಬರಿ ಖರೀದಿಯಾದರೆ. ರೈತನಿಗೆ ಒಂದು ಕ್ವಿಂಟಾಲ್ 3000 ರೂ. ನಷ್ಟು ಉಂಟಾಗುತ್ತದೆ. ಹಾಗಾಗಿ ಕೇಂದ್ರ ಸರಕಾರ ಕೊಬ್ಬರಿಯ ವೈಜ್ಞಾನಿಕ ಬೆಂಬಲ ಬೆಲೆ ಘೋಷಿಸಬೇಕು. ಅಲ್ಲದೆ ಇಂತಿಷ್ಟು ಎಂದು ನಿಗದಿ ಮಾಡದೆ ರೈತರು ಬೆಳೆದಿರುವ ಎಲ್ಲಾ ಕೊಬ್ಬರಿ ಖರೀದಿಸಬೇಕೆಂದು ಆಗ್ರಹಿಸಿದರು.
ಕೊಬ್ಬರಿ ಬೆಳೆಗಾರರ ಹೋರಾಟಕ್ಕೆ ಬೆಂಬಲ ನೀಡಲಿಲ್ಲ ಎಂಬ ಕಾರಣಕ್ಕೆ ಬಿಜೆಪಿ ಸರಕಾರದ ಜೊತೆಗೆ, ನಮ್ಮ ಜಿಲ್ಲೆಯ ಸಚಿವರಾಗಿದ್ದ ಬಿ.ಸಿ.ನಾಗೇಂದ್ರ ಮತ್ತು ಜೆ.ಸಿ.ಮಾಧುಸ್ವಾಮಿ ಅವರನ್ನು ರೈತರು ಸೋಲಿಸಿ ಮನೆಗೆ ಕಳುಹಿಸಿದ್ದಾರೆ. ಕಾಂಗ್ರೆಸ್ ಸರಕಾರವೂ ಕೊಬ್ಬರಿ ಬೆಳೆಗಾರರ ವಿರೋಧ ಕಟ್ಟಿಕೊಂಡರೆ ಮುಂದೆ ಜಿಲ್ಲೆಯಲ್ಲಿ ನಷ್ಟ ಅನುಭವಿಸಲಿದೆ ಎಂದು ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್ ಎಚ್ಚರಿಕೆ ನೀಡಿದರು.
ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಆರ್.ಸಿ.ಅಂಜನಪ್ಪ, ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ಸೋಲಾರ್ ಕೃಷ್ಣಮೂರ್ತಿ, ಡಾಂಡೇಲಿ ಗಂಗಣ್ಣ, ಚಲುವರಾಜು, ಸೊಗಡು ವೆಂಕಟೇಶ್, ತಾಹೀರಾ ಭಾನು, ಲೀಲಾವತಿ ಮತ್ತಿತರರು ಇದ್ದರು.
Comments are closed.