ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕೊರೊನ ಲಸಿಕೆ

ಏಪ್ರಿಲ್ 07 ರಿಂದ 30ರ ವರೆಗೆ ಉಚಿತವಾಗಿ ಕೊರೊನ ಲಸಿಕೆ

538

Get real time updates directly on you device, subscribe now.

ತುಮಕೂರು: ನಗರದ 15ನೇ ವಾರ್ಡ್‌ಗೆ ಸಂಬಂಧಪಟ್ಟಂತೆ 45 ವರ್ಷ ಮೀರಿದ ನಾಗರಿಕರಿಗೆ ಏಪ್ರಿಲ್ 07 ರಿಂದ 30ರ ವರೆಗೆ ಉಚಿತವಾಗಿ ಕೊರೊನ ಲಸಿಕೆ ಹಾಕುವ ಕಾರ್ಯಕ್ರಮವನ್ನು ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಾರ್ಡ್‌ನ ಕಾರ್ಪೋರೇಟರ್ ಗಿರಿಜಾ ಧನಿಯಕುಮಾರ್ ತಿಳಿಸಿದ್ದಾರೆ.

ಮಂಗಳವಾರ ಕಾಲೇಜಿಗೆ ಭೇಟಿ ನೀಡಿ ಪ್ರಾಂಶುಪಾಲರು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಮಹತ್ವಾಕಾಂಕ್ಷೆಯ ಎರಡನೇ ಹಂತದ ಲಸಿಕೆ ನೀಡುವ ಅಭಿಯಾನ ಏಪ್ರಿಲ್ ಒಂದರಿಂದ ರಾಜ್ಯಾದ್ಯಂತ ಆರಂಭವಾಗಿದ್ದು, ಇದರ ಅಂಗವಾಗಿ ನಗರಪಾಲಿಕೆ, ಪ್ರಾಥಮಿಕ ಆರೋಗ್ಯ ಕೇಂದ್ರ ಶಾಂತಿನಗರ ಇವರ ಸಹಯೋಗದಲ್ಲಿ ಉಚಿತ ಲಸಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ವಾರ್ಡಿನಲ್ಲಿ ವಾಸವಿರುವ 45 ವರ್ಷ ಮೇಲ್ಪಟ್ಟ ಸಾರ್ವಜನಿಕರು ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ, ಉಚಿತವಾಗಿ ಲಸಿಕೆ ಪಡೆದುಕೊಳ್ಳುವ ಮೂಲಕ ಕೊರೊನಾ ಮುಕ್ತ ಭಾರತ ಸಂಕಲ್ಪಕ್ಕೆ ಸಹಕರಿಸುವಂತೆ ಮನವಿ ಮಾಡಿದರು.

ತುಮಕೂರು ನಗರದ 15ನೇ ವಾರ್ಡ್‌ಗೆ ಸಂಬಂಧಿಸಿದ ಗಾಂಧಿನಗರ, ಸಿಎಸ್‌ಐ ಲೇಔಟ್, ಎಸ್.ಎಸ್.ಪುರಂ ಈ ಸ್ಥಳಗಳಿಗೆ ಮಧ್ಯಭಾಗದಲ್ಲಿರುವ ಸರಕಾರಿ ಕಾಲೇಜು ಆವರಣದಲ್ಲಿ ಲಸಿಕೆ ನೀಡಲು ವ್ಯವಸ್ಥೆ ಮಾಡಲಾಗಿದೆ. ದಿನಕ್ಕೆ 150- 200 ಲಸಿಕೆ ನೀಡುವ ಗುರಿ ಹೊಂದಲಾಗಿದ್ದು, ಸಾರ್ವಜನಿಕರು ಲಸಿಕಾ ಕೇಂದ್ರಕ್ಕೆ ಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ಅಲ್ಲದೆ ಲಸಿಕೆ ಪಡೆಯಲು ಆಧಾರ್ ಕಾರ್ಡ್, ಇಲ್ಲವೇ ಪಾನ್ ಕಾರ್ಡ್ ಕಡ್ಡಾಯವಾಗಿದ್ದು, ಜೊತೆಯಲ್ಲಿಯೇ ತರಬೇಕು, ಇಲ್ಲದಿದ್ದಲ್ಲಿ ಲಸಿಕೆ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ವಾರ್ಡ್‌ನಲ್ಲಿ ಇರುವ ವಯೋವೃದ್ಧರು, ಅಶಕ್ತರಿಗೆ ಮಾತ್ರ ಉಚಿತ ವಾಹನದ ವ್ಯವಸ್ಥೆ ಮಾಡಿದ್ದು, ಅಗತ್ಯವಿರುವವರು ದೂರವಾಣಿ ಸಂಖ್ಯೆ 9449774409ಕ್ಕೆ ಕರೆ ಮಾಡಿ ಉಚಿತ ವಾಹನದ ಸೌಲಭ್ಯ ಪಡೆಯಬಹುದಾಗಿದೆ, ಲಸಿಕೆ ನೀಡುವ ಸಂಬಂಧ ಪಾಲಿಕೆಯ ಕಸದ ಆಟೋಗಳು, ಸಾಮಾಜಿಕ ಜಾಲತಾಣಗಳ ಮೂಲಕ ನಾಗರಿಕರ ಹಿತರಕ್ಷಣಾ ಸಮಿತಿಗಳಿಗೆ ಹಾಗೂ ಪೌರಕಾರ್ಮಿಕರ ಮೂಲಕ ವಾರ್ಡ್‌ನ ಪ್ರತಿ ಮನೆ ಮನೆಗೂ ವಿಷಯ ಮುಟ್ಟಿಸುವ ಕೆಲಸ ಮಾಡಲಾಗುತ್ತಿದೆ, ಅರ್ಹರೆಲ್ಲರಿಗೂ ಲಸಿಕೆ ಸಿಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ, ಹೆಚ್ಚಿನ ಮಾಹಿತಿಗೆ ದೂ. 9964185355ಗೆ ಕರೆ ಪಡೆಯಬಹುದು ಎಂದು ಗಿರಿಜಾ ಧನಿಯಕುಮಾರ್ ತಿಳಿಸಿದರು.

ಶಾಂತಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಶೂಶ್ರುಷಕಿ ಅಂಜುಮ್ ಮಾತನಾಡಿ, ಪ್ರತಿದಿನ 150- 200 ಜನರಿಗೆ ಲಸಿಕೆ ನೀಡುವ ಗುರಿ ಇದೆ. ವಾರ್ಡ್ ದೊಡ್ಡದಾಗಿರುವ ಹಿನ್ನೆಲೆಯಲ್ಲಿ ಏಪ್ರಿಲ್ 07 ರಿಂದ ಆರಂಭಗೊಂಡ ಲಸಿಕೆ ಹಾಕುವ ಕಾರ್ಯ, ಏಪ್ರಿಲ್ 09, 10, 12, 19, 22, 23, 26, 27, 28, 29 ಮತ್ತು 30 ರಂದು ನಡೆಯಲಿದೆ. ವಾರದ ಪ್ರತಿ ಗುರುವಾರ ಮತ್ತು ಭಾನುವಾರ ಲಸಿಕೆ ನೀಡುವುದಿಲ್ಲ, ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.

ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಜಗದೀಶ್ ಮಾತನಾಡಿ, ಸಾರ್ವಜನಿಕರ ಹಿತದೃಷ್ಟಿಯಿಂದ ಮಹಾಮಾರಿ ಕೊರೊನ ಮುಕ್ತ ಭಾರತಕ್ಕೆ ನಡೆದಿರುವ ಲಸಿಕೆ ಅಭಿಯಾನಕ್ಕೆ ನಮ್ಮ ಕಾಲೇಜಿನ 3 ಕೊಠಡಿಗಳನ್ನು ಅವರು ಲಸಿಕೆ ನೀಡುವ ದಿನಾಂಕಗಳಂದು ಬಳಸಿಕೊಳ್ಳಲು ಅವಕಾಶ ನೀಡಲಾಗಿದೆ. ಪದವಿ ಪರೀಕ್ಷೆಗಳು ನಡೆಯುತ್ತಿದ್ದರೂ ವಿದ್ಯಾರ್ಥಿಗಳಿಗೆ ತೊಂದರೆಯಾಗದ ರೀತಿ ಲಸಿಕೆ ಕಾರ್ಯಕ್ರಮ ಸುಸೂತ್ರವಾಗಿ ನಡೆಯಲು ಎಲ್ಲಾ ವ್ಯವಸ್ಥೆ ಮಾಡಲಾಗಿದೆ ಎಂದರು.

Get real time updates directly on you device, subscribe now.

Comments are closed.

error: Content is protected !!