ಗುಬ್ಬಿ: ಶಿಕ್ಷಣ, ಆರೋಗ್ಯ ಮತ್ತು ಸಮಾಜ ಕಲ್ಯಾಣ ಇಲಾಖೆ ಎನ್ಆರ್ಇಜಿ ಯೋಜನೆಗಳ ಮೇಲೆ ಅಧಿಕಾರಿಗಳು ಹೆಚ್ಚು ಹೆಚ್ಚಿನ ಪ್ರಾಧಾನ್ಯತೆ ನೀಡಿ ಕೆಲಸ ಮಾಡಬೇಕು ಎಂದು ಸಿಇಒ ಪ್ರಭು ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು, ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಬಹಳ ಮುಖ್ಯವಾಗಿ ಶಿಕ್ಷಣ, ಆರೋಗ್ಯ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಂಗನವಾಡಿಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿ ಕೆಲಸ ಮಾಡಬೇಕು, ಇದರಿಂದ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆ ಮಾಡಲು ಸಾಧ್ಯವಾಗುತ್ತದೆ,
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಕಷ್ಟು ಯೋಜನೆಗಳನ್ನ ಜನರಿಗಾಗಿ ತಂದಿದ್ದು ಅದರ ಸದುಪಯೋಗ ಅವರಿಗೆ ತಲುಪಬೇಕು ಎಂದರೆ ಅಧಿಕಾರಿಗಳ ಪಾತ್ರ ಬಹಳ ಮುಖ್ಯವಾಗಿದೆ ಎಂದರು.
ತಾಲೂಕಿನ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಸಮಯಕ್ಕೂ ಮುಂಚೆಯೇ ತೆರಳುತ್ತಾರೆ ಎಂಬ ಮಾಹಿತಿ ಇದ್ದು ಅದನ್ನ ತಾಲೂಕು ಆರೋಗ್ಯ ಅಧಿಕಾರಿಗಳು ಸರಿಪಡಿಸಬೇಕು, ಇಲ್ಲದೆ ಹೋದರೆ ಕಾನೂನು ಬದ್ಧ ಕ್ರಮ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಾಕಷ್ಟು ಯೋಜನೆಗಳಿದ್ದರೂ ಅದನ್ನು ಸಾರ್ವಜನಿಕರಿಗೆ ತಿಳಿಸದೆ ಇರುವುದು ಒಳಿತಲ್ಲ, ಸರಿಯಾದ ರೀತಿಯಲ್ಲಿ ರೈತರಿಗೆ ಮನವಿ ಮಾಡಿ ಎನ್ಆರ್ಇಜಿ ಮೂಲಕ ಅತ್ಯಂತ ಹೆಚ್ಚು ಕೆಲಸ ಕಾರ್ಯಗಳನ್ನು ವೈಯಕ್ತಿಕ ಮತ್ತು ಸಮುದಾಯದ ಕೆಲಸ ಮಾಡಬೇಕು, ಒಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕನಿಷ್ಠ 500 ರೈತರಿಗಾದರೂ ಎನ್ಆರ್ಇ ಜಿ ಮೂಲಕ ಕೆಲಸ ಮಾಡಿಕೊಟ್ಟರೆ ಒಂದು ವರ್ಷದಲ್ಲಿ ನಾಲ್ಕು ಕೋಟಿಗಿಂತ ಹೆಚ್ಚು ಕೆಲಸ ನಿಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತದೆ, ಇದರಿಂದ ರೈತರ ಅಭಿವೃದ್ಧಿ, ಗ್ರಾಮದ ಅಭಿವೃದ್ಧಿ ಸಹ ಆಗುವುದು ಎಂಬುದನ್ನು ತಾವೆಲ್ಲರೂ ಅರಿಯಬೇಕು, ಮುಂದಿನ ಮೂರು ತಿಂಗಳ ಅವಧಿಯಲ್ಲಿ ಪ್ರತಿ ಗ್ರಾಮ ಪಂಚಾಯಿತಿಗಳು ಸಮುದಾಯ ಹಾಗೂ ವೈಯಕ್ತಿಕ ಕೆಲಸ ಕಾರ್ಯಗಳಿಗೆ ಹೆಚ್ಚು ಮನ್ನಣೆ ನೀಡಿ ಕೆಲಸ ಮಾಡಲೇಬೇಕು, ನಾನು ಖಂಡಿತವಾಗಿ ಕಚೇರಿಯಲ್ಲಿ ಕುಳಿತುಕೊಳ್ಳದೆ ಆಯಾಯ ಗ್ರಾಮ ಪಂಚಾಯಿತಿಗಳಿಗೆ ಬಂದು ವೀಕ್ಷಣೆ ಮಾಡುತ್ತೇನೆ, ಸರ್ಕಾರ ನೀಡಿರುವಂತಹ ನಮ್ಮ ಕೆಲಸಕ್ಕೆ ನಾವು ಬದ್ಧರಾಗಿ ಕೆಲಸ ಮಾಡಿದಾಗ ಖಂಡಿತವಾಗಿಯೂ ನಮಗೆ ಹೆಚ್ಚಿನ ಗೌರವ ಸಿಗುತ್ತದೆ ಎಂದರು.
ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಎಲ್ಲಾ ಶಾಸಕರ ಜೊತೆಯಲ್ಲಿ ಕುಳಿತು ಗ್ರಾಮಗಳ ಅಭಿವೃದ್ಧಿಗೆ ಏನೆಲ್ಲ ಮಾಡಬಹುದು ಎಂಬ ಚರ್ಚೆಯು ಸಹ ನಡೆದಿದ್ದು, ಮುಂದಿನ ಹಂತದಲ್ಲಿ ಹೆಚ್ಚಿನ ರೀತಿಯಲ್ಲಿ ನಾವೆಲ್ಲರೂ ಕೂಡ ಸೇರಿ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು.
ಇನ್ನು ಮೂರು ತಿಂಗಳಿನಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಮಾಡಬೇಕು ಎಂಬ ಯೋಜನೆ ಇಟ್ಟುಕೊಂಡು ಕೆಲಸ ಮಾಡಲು ನಾನು ಬದ್ಧವಾಗಿದ್ದೇನೆ, ನಿಮ್ಮ ಜೊತೆಯಲ್ಲೇ ಇರುತ್ತೇನೆ, ನೀವು ಹೆಚ್ಚಿನ ಸಹಕಾರ ಮಾಡಿದಾಗ ಖಂಡಿತವಾಗಿಯೂ ಹೊಸ ಬದಲಾವಣೆ ತರಬಹುದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಪರಮೇಶ್, ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು, ತಾಲೂಕಿನ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.
Comments are closed.