ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳು ವಶ

135

Get real time updates directly on you device, subscribe now.


ಕುಣಿಗಲ್: ಬೀದಿಬದಿ ವ್ಯಾಪಾರಿಗಳು, ಮಳಿಗೆ ವ್ಯಾಪಾರಿಗಳ ತೀವ್ರ ಅಸಮಾಧಾನದ ನಡುವೆ ಪುರಸಭೆ ಪರಿಸರ ಅಭಿಯಂತರ ಚಂದ್ರಶೇಖರ್ ನೇತೃತ್ವದಲ್ಲಿ ಪುರಸಭೆ ಸಿಬ್ಬಂದಿ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ವಶಕ್ಕೆ ಪಡೆದು ಕೆಲವರಿಗೆ ದಂಡ ವಿಧಿಸಿದರು.

ಪಟ್ಟಣದಲ್ಲಿ ವ್ಯಾಪಕವಾಗಿ ನಿಷೇಧಿತ ಪ್ಲಾಸ್ಟಿಕ್ ಬಳಕೆಯಾಗುತ್ತಿರುವ ಬಗ್ಗೆ ನಾಗರಿಕರ ದೂರಿನ ಹಿನ್ನೆಲೆಯಲ್ಲಿ ಎಚ್ಚೆತ್ತ ಪುರಸಭೆ ಪರಿಸರ ಅಭಿಯಂತರ ಚಂದ್ರಶೇಖರ್, ಮುಖ್ಯಾಧಿಕಾರಿ ಶಿವಪ್ರಸಾದ್ ಮಾರ್ಗದರ್ಶನದಲ್ಲಿ ಶುಕ್ರವಾರ ಪಟ್ಟಣದ ಪ್ರಮುಖ ವ್ಯಾಪಾರ ಕೇಂದ್ರವಾದ ಕೋಟೆ ಪ್ರದೇಶದ ಸಂತೇಬೀದಿ ರಸ್ತೆಯ ಮಳಿಗೆಗಳ ಮೇಲೆ ದಾಳಿ ನಡೆಸಿದರು.

ಮೊದಲು ಬೀದಿಬದಿ ವ್ಯಾಪಾರಿಗಳ ಮೇಲೆ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್ ಕವರ್ ವಶಕ್ಕೆ ಪಡೆದು, ಮೊದಲ ಹಂತದಲ್ಲಿ ನೂರು ರೂ. ದಂಡ ವಿಧಿಸಿದರು, ಪುರಸಭೆ ಅಧಿಕಾರಿಗಳ ದಾಳಿ ಸುದ್ದಿ ವ್ಯಾಪಕವಾಗಿ ಹರಡಿದ್ದರ ಹಿನ್ನೆಲೆಯಲ್ಲಿ ಇತರೆ ಬೀದಿಯಲ್ಲಿದ್ದ ಮಳಿಗೆ ಮಾಲೀಕರು, ಬೀದಿ ಬದಿ ವ್ಯಾಪಾರಿಗಳು ತಮ್ಮಲ್ಲಿದ್ದ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಮರೆ ಮಾಡಿದರು.

ಈ ಬಗ್ಗೆ ಮಾಹಿತಿ ನೀಡಿದ ಪುರಸಭೆ ಪರಿಸರ ಅಭಿಯಂತರ ಚಂದ್ರಶೇಖರ್, ಪ್ಲಾಸ್ಟಿಕ್ ಮುಕ್ತ ನಗರ ನಿರ್ಮಾಣಕ್ಕೆ ನಾಗರಿಕರು ಸಹಕಾರ ನೀಡಬೇಕು, ಮಳಿಗೆ ಮಾಲೀಕರು ಸೇರಿದಂತೆ ಬೀದಿ ಬದಿ ವ್ಯಾಪಾರಿಗಳಿಗೆ ಹಲವು ಬಾರಿ ಸಭೆ ನಡೆಸಿ ಸೂಕ್ತ ತಿಳುವಳಿಕೆ ನೀಡಲಾಗಿದೆ, ಒಮ್ಮೆ ಬಳಸಿ ಬಿಸಾಡುವ ಪ್ಲಾಸ್ಟಿಕ್ ಕವರ್ ಸೇರಿದಂತೆ ವಸ್ತುಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ, ಈ ಬಗ್ಗೆ ಹಲವಾರು ಬಾರಿ ಮಾಹಿತಿ ನೀಡಿದ್ದರೂ ಕೆಲವರು ಬಳಕೆ ಮಾಡುತ್ತಿದ್ದಾರೆ, ಪುರಸಭೆಯಿಂದ ಕರಪತ್ರ ಹಂಚಿ ಅರಿವು ಮೂಡಿಸಿದ್ದು ಜುಲೈ ಮಾಹೆಯ 28ರವರೆಗೂ ದಾಳಿ ಮುಂದುವರೆಯುತ್ತದೆ, ಮಾರಾಟ ಮಾಡುವುದು ಕಂಡು ಬಂದಲ್ಲಿ, ಮೊದಲ ಪ್ರಕರಣಕ್ಕೆ 500ರೂ., ಎರಡನೇ ಪ್ರಕರಣಕ್ಕೆ 1000 ರೂ, ಮೂರನೆ ಪ್ರಕರಣಕ್ಕೆ ಉದ್ದಿಮೆ ಪರವಾನಗಿ ರದ್ದು ಮಾಡಲಾಗುವುದು, ಸಂಗ್ರಹಗಾರರ ಮೊದಲ ಅಪರಾಧ 1 ಕೆಜಿಗೆ 500 ರೂ.ದಂಡ, 1 ಕೆಜಿಯಿಂದ 10 ಕೆಜಿ ವರೆಗೂ 2000 ರೂ. ದಂಡ, 10 ಕೆಜಿಯಿಂದ 50 ಕೆಜಿಗೆ 5000 ರೂ. ದಂಡ, 50 ಕೆಜಿಯಿಂದ 100 ಕೆಜಿ ಸಂಗ್ರಹಕ್ಕೆ 10,000 ರೂ. ದಂಡ, ನೂರು ಕೆಜಿಗೂ ಮೆಲ್ಪಟ್ಟು ಸಂಗ್ರಹ ಮಾಡಿದ್ದಲ್ಲಿ ದಂಡ ವಿಧಿಸಿ, ಮೊಕದಮ್ಮೆ ದಾಖಲು ಮಾಡಲಾಗುವುದು ಎಂದ ಅವರು ಶುಕ್ರವಾರ 1200 ರೂ. ದಂಡ ವಿಧಿಸಿದ್ದು ಮುಂದಿನ ದಿನಗಳಲ್ಲಿ ಅನಿರೀಕ್ಷಿತ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಲಾಗುವುದು ಎಂದರು.

Get real time updates directly on you device, subscribe now.

Comments are closed.

error: Content is protected !!