ಎನ್ಎಸ್ಎಸ್ ವಿದ್ಯಾರ್ಥಿನಿಯರಿಂದ ಶಾಸನ ರಕ್ಷಣೆ

539

Get real time updates directly on you device, subscribe now.


ತುಮಕೂರು: ಶ್ರೀಸಿದ್ಧಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಿಳಾ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿನಿಯರು ತುಮಕೂರು ಬಳಿಯ ಹೊನ್ನುಡಿಕೆಯಿಂದ ಜಲಗಾರ ದಿಬ್ಬದ ವರೆಗೆ ಹೆರಿಟೇಜ್ ವಾಕ್ ಮೂಲಕ ಮೆರವಣಿಗೆಯಲ್ಲಿ ಸಾಗಿ ಮಣ್ಣಿನಲ್ಲಿ ಹೂತು ಹೋಗಿದ್ದ ತುಮಕೂರು ಜಿಲ್ಲೆಯ ಮೊಟ್ಟಮೊದಲ ಶಿಲಾ ಶಾಸನ ಮೇಲಕ್ಕೆತ್ತಿ ಸ್ವಚ್ಛಗೊಳಿಸಿ ಅದೇ ಸ್ಥಳದಲ್ಲಿ ಪುನರ್ ಸ್ಥಾಪಿಸಿದರು.

ಈ ಸಂದರ್ಭದಲ್ಲಿ ಮಾರ್ಗದರ್ಶನ ನೀಡಿದ ಇತಿಹಾಸ ಸಂಶೋಧಕ ಡಾ.ಡಿ.ಎನ್.ಯೋಗೀಶ್ವರಪ್ಪ ಅವರು ಈ ಶಾಸನವು ಕ್ರಿ.ಶ. 749ರ ಕಾಲಕ್ಕೆ ಸೇರಿದ್ದು, ತಲಕಾಡು ಗಂಗರ ದೊರೆ ಶ್ರೀಪುರುಷ ತನ್ನ ಚಿಕ್ಕಪ್ಪ ಶಿವಮಾರ ಎರೆಯಪ್ಪ ಹೊನ್ನುಡಿಕೆಯನ್ನು ಆಳ್ವಿಕೆ ಮಾಡುತ್ತಿದ್ದನು, ದೊರೆ ಶ್ರೀಪುರುಷ ಮಹಾರಾಜ ಸುಗ್ಗಿಯ ಕಾಲದಲ್ಲಿ ಹೊನ್ನುಡಿಕೆಯಲ್ಲಿ ಸಂಗ್ರಹವಾಗುತ್ತಿದ್ದ ಬಂಗಾರದ ರೂಪದ ಸುಂಕವನ್ನು ಅಲ್ಲಿನ ದೇವಿ ಭಟಾರರಿಗೆ (ಹೊನ್ನಾದೇವಿ) ಜಮಾ ಮಾಡಬೇಕೆಂದು ಆದೇಶಿಸಿದ್ದಾನೆ ಎಂದು ತಿಳಿಸಿದರು.

ಈ ಶಾಸನವನ್ನು ಗ್ರಾನೈಟ್ ಶಿಲೆಯಲ್ಲಿ 4 ಅಡಿ ಅಗಲ 2 ಅಡಿ ಎತ್ತರದಲ್ಲಿ ಎಂಟು ಸಾಲಿನಲ್ಲಿ ಬರೆಯಲಾಗಿದೆ, ಇದೇ ಜಾಗದಲ್ಲಿ ಇನ್ನೊಂದು ಶಾಸನವೂ ಇತ್ತು, ಅದೂ ಕೂಡಾ ತಲಕಾಡು ಗಂಗರ ಕಾಲಕ್ಕೆ ಸೇರಿತ್ತು, ಆ ಶಾಸನವೂ ಎಂಟು ಸಾಲುಗಳನ್ನೊಳಗೊಂಡಿದ್ದು ಹೊನ್ನುಡಿಕೆಯ ಕಮರುಗ ಎಂಬ ವೀರ ಹೋರಾಟದಲ್ಲಿ ಸತ್ತು ಹೋಗಿದ್ದುದರಿಂದ ಗಂಗದೊರೆ ಶ್ರೀವಿಕ್ರಮನು ಆತನ ಕುಟುಂಬ ನಿರ್ವಹಣೆಗೆ ಭೂದಾನ ನೀಡಿ ಆ ಶಾಸನವನ್ನು ಬರೆಯಿಸಿದ್ದಾನೆ, ಆದರೆ ಆ ಶಾಸನವನ್ನು ಮುಳುಕುಂಟೆಗೆ ಸಾಗಿಸಿ ಅಲ್ಲಿನ ಆಶ್ರಮದ ಪಕ್ಕದಲ್ಲಿ ನಿಲ್ಲಿಸಿದ್ದಾರೆ ಎಂಬ ಮಾಹಿತಿ ನೀಡಿದರು.

ಹೊನ್ನುಡಿಕೆ ಬಳಿಯ ಜಲಗಾರ ದಿಬ್ಬದ ಬಳಿ ಎಂಟನೇ ಶತಮಾನದಲ್ಲಿ ಚಿಕ್ಕ ತೊರೆಯೊಂದು ಹರಿಯುತ್ತಿದ್ದು ಅದರ ಬಳಿ ವಿಶ್ವಕರ್ಮಿಗಳು ಆ ನೀರಿನಲ್ಲಿ ಬರುತ್ತಿದ್ದ ಮಣ್ಣನ್ನು ಪರಿಶೋಧಿಸಿ ಬಂಗಾರ ಸಂಗ್ರಹಿಸುತ್ತಿದ್ದರೆಂದು ಹೇಳಲಾಗುತ್ತದೆ, ಆದರೆ ಇಂದು ಆ ತೊರೆ ಪೂರ್ಣವಾಗಿ ನಾಶವಾಗಿದ್ದು, ಆ ಪ್ರದೇಶದಲ್ಲಿ ಜಮೀನುಗಳಾಗಿವೆ, ಆ ಜಾಗದಲ್ಲಿ ಇಂದಿಗೂ ದೇವಾಲಯದ ಅವಶೇಷಗಳಾದ ದೇವರ ಪಾಣಿಪೀಠ, ಇಟ್ಟಿಗೆ ಚೂರು ಮುಂತಾದ ಪ್ರಾಚೀನ ಪಳೆಯುಳಿಕೆಗಳನ್ನು ವಿದ್ಯಾರ್ಥಿನಿಯರು ಸಂಗ್ರಹಿಸಿ ಅವುಗಳನ್ನು ಅಲ್ಲಿಯೇ ಒಂದೆಡೆ ಸಂಗ್ರಹಿಸಿ ಇಟ್ಟಿದ್ದಾರೆ.

ಹೊನ್ನುಡಿಕೆಯ ಅತ್ಯಂತ ಪ್ರಾಚೀನ ದೇವಾಲಯವಾದ ಚೊಕ್ಕಪೆರುಮಾಳ ದೇವಾಲಯದ ಸುತ್ತ ಬೆಳೆದಿದ್ದ ಮುಳ್ಳಿನ ಗಿಡ ಗೆಂಟೆಗಳನ್ನು ಕಿತ್ತುಹಾಕಿ ಆ ದೇಗುಲದ ಆವರಣ ಸ್ವಚ್ಛಗೊಳಿಸಿ ಅಲ್ಲಿನ ಜನರಲ್ಲಿ ಸ್ಮಾರಕಗಳ ಸಂರಕ್ಷಣೆಯ ಅರಿವಿನ ಜಾಗೃತಿ ಮೂಡಿಸಿದರು.
ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿಗಳಾದ ಡಾ.ನಳಿನ, ಹರ್ಷಶ್ರೀ, ಪ್ರಭುಸ್ವಾಮಿ, ಸ್ಮಾರಕಗಳ ಸಂರಕ್ಷಣೆಗೆ ಮಾರ್ಗದರ್ಶನ ನೀಡಿದ ಡಾ.ಡಿ.ಎನ್.ಯೋಗೀಶ್ವರಪ್ಪ, ಹೊನ್ನುಡಿಕೆಯ ಉದಯ್, ಜಲಗಾರ ದಿಬ್ಬ ಸ್ಥಳವಿರುವ ಜಮೀನಿನ ಮಾಲಿಕರಾದ ಜಗದೀಶ್ ಈ ವೇಳೆ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!