ಕಲುಷಿತ ನೀರು ಸೇವಿಸಿ 15 ಜನ ಅಸ್ವಸ್ಥ

ಗಡಿನಾಡು ವೈ.ಎನ್.ಹೊಸಕೋಟೆಯಲ್ಲಿ ಘಟನೆ

168

Get real time updates directly on you device, subscribe now.


ವೈ.ಎನ್.ಹೊಸಕೋಟೆ: ವೈ.ಎನ್.ಹೊಸಕೋಟೆ ಗ್ರಾಮದ ಬೆಸ್ತರಹಳ್ಳಿ ರಸ್ತೆಗೆ ಹೊಂದಿಕೊಂಡಿರುವ ತಾತಯ್ಯನ ಗುಡಿ ಹಿಂಭಾಗದ ಹಾಗೂ ಡಿ. ವಿಭಾಗದ ಕೆಲವು ನಿವಾಸಿಗಳು ಶನಿವಾರ ಕಲುಷಿತ ನೀರು ಸೇವಿಸಿ ಅಸ್ವಸ್ಥರಾಗಿ ಆಸ್ಪತ್ರೆ ಸೇರುವಂತಾಗಿದೆ.
ಈ ಸಂಬಂಧ 13 ಜನ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಒಬ್ಬ ವ್ಯಕ್ತಿಯನ್ನು ಹೆಚ್ಚಿನ ಚಿಕಿತ್ಸೆಗೆ ಪಾವಗಡ ತಾಲ್ಲೂಕು ಆಸ್ಪತ್ರೆಗೆ ರವಾನಿಸಿದ್ದಾರೆ.

ಈ ಪ್ರದೇಶದಲ್ಲಿ ಕೂಲಿ ಕಾರ್ಮಿಕರು ಹಾಗೂ ಬಡ ವರ್ಗದ ಕುಟುಂಬದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ, ಈ ಭಾಗದ ಬಗ್ಗೆ ಸ್ಥಳೀಯ ಆಡಳಿತ ಸೇರಿದಂತೆ ಅಧಿಕಾರಿ ವರ್ಗ ನಿರ್ಲಕ್ಷತೆ ವಹಿಸಿರುವುದು ಕಾಣುತ್ತದೆ.
ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಹಲವು ಘಟಕಗಳಿದ್ದು, ಕೇವಲ ಎರಡು ಮಾತ್ರ ನಿಗದಿತ ಸಮಯದಲ್ಲಿ ಚಾಲ್ತಿಯಲ್ಲಿರುತ್ತವೆ, ಉಳಿದ ಘಟಕಗಳು ಹಲವು ತಿಂಗಳಿಂದ ನಿರ್ವಹಣೆ ವೈಫಲ್ಯ ಕಾಡುತ್ತಾ ಕೆಟ್ಟು ನಿಂತಿವೆ.
ಗ್ರಾಮದಲ್ಲಿ ಸಾರ್ವಜನಿಕ ನಲ್ಲಿಗಳಿಗೆ ಪೂರೈಕೆಯಾಗುವ ನೀರು ಸರಬರಾಜು ಸಂಪರ್ಕದ ಗೇಟ್ವಾಲ್ಗಳಲ್ಲಿ ನೀರು ಸೋರಿಕೆಯಾಗುತ್ತಿದ್ದು, ಅದರಲ್ಲಿ ಕಸಕಡ್ಡಿ, ಕ್ರಿಮಿಕೀಟಗಳು ಸೇರಿಕೊಂಡಿವೆ, ಇಂತಹ ಸುಮಾರು 30 ಗೇಟ್ ವಾಲ್ಗಳಿದ್ದು, ಬಹುಪಾಲು ಈ ಗುಂಡಿಗಳಲ್ಲಿ ಶೇಖರಣೆಗೊಂಡು ನೀರು ಕೊಳೆತು ಮತ್ತೆ ನಳಗಳಲ್ಲಿ ಸೇರಿ ಸಾರ್ವಜನಿಕರಿಗೆ ಪೂರೈಕೆಯಾಗುತ್ತಿವೆ. ಇಂತಹ ನೀರನ್ನು ಗ್ರಾಮದ ಬಹುಪಾಲು ಜನತೆ ಕುಡಿಯಲು ಬಳಸುವುದರಿಂದ ಇಂತಹ ಅನಾರೋಗ್ಯ ಪದೇ ಪದೆ ಗ್ರಾಮದಲ್ಲಿ ಕಾಡುತ್ತಿದೆ.
ಗ್ರಾಮಕ್ಕೆ ಸರಬರಾಜು ಅಗುವ ನೀರು ಶೇಖರಣೆ ಕೇಂದ್ರದಲ್ಲಿ ತಾಂತ್ರಿಕ ದೋಷ ಕಂಡುಬಂದಾಗ ಸ್ಥಳೀಯ ಆಡಳಿತದ ನಿರ್ಲಕ್ಷ ದೋರಣೆಯ ಫಲವಾಗಿ ಹಲವಾರು ದಿನಗಳ ಕಾಲ ಶೇಖರಣೆಗೊಂಡ ನೀರು ಹಾಗೆಯೇ ಪೂರೈಕೆಯಾಗುತ್ತದೆ.
ಸ್ಥಳೀಯ ಪಂಚಾಯಿತಿಯ ಅಧಿಕಾರಿ ವಾರಕ್ಕೆ ಕೇವಲ 1-2 ಬಾರಿ ಮಾತ್ರ ಕಚೇರಿಗೆ ಭೇಟಿ ನೀಡಿ ಹೋಗುತ್ತಿದ್ದಾರೆ, ಗ್ರಾಮದಲ್ಲಿ ಸಮಸ್ಯೆ ಪರೀಕ್ಷಿಸಿ ಸರಿಪಡಿಸುವಲ್ಲಿ ವಿಫಲರಾಗಿದ್ದಾರೆ, ಅಧಿಕಾರಿಯ ಬದಲು ಕಚೇರಿಯ ಸಿಬ್ಬಂದಿ ಗ್ರಾಮಾಡಳಿತದಲ್ಲಿ ಹೆಚ್ಚು ನಿಯಂತ್ರಣ ಮಾಡುವ ವ್ಯವಸ್ಥೆ ಇರುವುದರಿಂದ ಸ್ಥಳೀಯ ಆಡಳಿತ ಹೆಚ್ಚು ವಿಫಲತೆಯಾಗಿದ್ದು, ಇಂತಹ ಸಮಸ್ಯೆಗಳಿಗೆ ಕಾರಣವಾಗಿವೆ.

ಜೋಡಿ ಅಚ್ಚಮ್ಮನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದ ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ಮತ್ತು ಸ್ಥಳೀಯ ಅಧಿಕಾರಿಗಳ ತಂಡದ ಮುಂದೆ ಕುಡಿಯುವ ನೀರಿನ ಘಟಕಗಳ ವೈಫಲ್ಯದ ಬಗ್ಗೆ ಮಾಹಿತಿ ನೀಡಲಾಗಿತ್ತು, ಅವರು ಸಹ ಯಾವುದೇ ಕ್ರಮ ಕೈಗೊಂಡಿಲ್ಲ, ಇದೀಗ ಜನರು ನೀರು ಕುಡಿದು ಅಸ್ವಸ್ಥತಾಗಿದ್ದಾರೆ ಎಂಬುದು ಸ್ಥಳಿಯರ ಆರೋಪ.

ವೈ.ಎನ್.ಹೊಸಕೋಟೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಸುಮಾರು 15 ಸಾವಿರ ಜನಸಂಖ್ಯೆ ವಾಸಿಸುತ್ತಿದ್ದರೂ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುವ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಕೊರತೆ ಕಾಡುತ್ತಿದೆ.
ಗ್ರಾಮ ಪಂಚಾಯಿತಿ ಸದಸ್ಯರು ಕೇವಲ ಮೀಟಿಂಗ್, ದಿನನಿತ್ಯ ಪಂಚಾಯಿತಿ ಆವರಣದಲ್ಲಿ ಹರಟೆ ಹೊಡೆಯುವ ಪುಡಿ ರಾಜಕೀಯ ಮಾಡಿಕೊಂಡು ಕಾಲಹರಣ ಮಾಡುತ್ತಿರುವುದು ಬಿಟ್ಟರೆ ವಾರ್ಡ್ಗಳಲ್ಲಿ ಯಾವುದೇ ಆಸಕ್ತಿ ತೋರಿಸುತ್ತಿಲ್ಲ, ಬೇಜವಾಬ್ದಾರಿಯುತ ಸದಸ್ಯರಾಗಿದ್ದಾರೆ ಎಂದು ಜನತೆ ಅವರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಈ ಸಂಬಂಧ ಜಿಲ್ಲಾ ಮತ್ತು ತಾಲ್ಲೂಕು ಆಡಳಿತ ಗ್ರಾಮದ ಬಗ್ಗೆ ಹೆಚ್ಚು ಗಮನ ನೀಡಿ ಮುಂದೆ ಆಗಬಹುದಾದ ಅನಾಹುತಗಳಿಂದ ಪಾರು ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!