ತುಮಕೂರು: ನಗರದ 20ನೇ ವಾರ್ಡಿನ ಎನ್.ಆರ್.ಕಾಲೋನಿ ಹಾಗೂ ಜಿಲ್ಲೆಯ ಸಮಸ್ತ ಮಾದಿಗರ ಆರಾಧ್ಯ ದೇವತೆ ಶ್ರೀದುರ್ಗಮ್ಮ ದೇವಿಯ ಮುಖ್ಯದ್ವಾರವನ್ನು ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಬೆಳಗುಂಬ ರಸ್ತೆ ಅಗಲೀಕರಣದ ಉದ್ದೇಶಕ್ಕೆ ನಗರಪಾಲಿಕೆ ಆಯುಕ್ತರು ಮತ್ತು ಪೊಲೀಸ್ ಅಧಿಕಾರಿಗಳು ಯಾವುದೇ ಮಾಹಿತಿ ನೀಡಿದೆ ಏಕಾಏಕಿ ಶ್ರೀದುರ್ಗಮ್ಮ ದೇವಿಯ ಸುಂದರ ಮೂರ್ತಿಯ ವಿಗ್ರಹಗಳ ಸಾಲಂಕೃತ ಶಿಲೆಗಳುಳ್ಳ ಸ್ವಾಗತ ಕಮಾನನ್ನು ಜೆಸಿಬಿ ಯಂತ್ರದಿಂದ ಮಕಾಡೆ ಬೀಳಿಸಿ ಧ್ವಂಸಗೊಳಿಸಿದ್ದರಿಂದ ಎನ್.ಆರ್.ಕಾಲೋನಿಯ ಬಹುಸಂಖ್ಯಾತ ಮಾದಿಗ ಜನಾಂಗದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿ ಭಾವನಾತ್ಮಕವಾಗಿ ಉದ್ರೇಕಗೊಂಡು ನಗರಪಾಲಿಕೆ ಆಯುಕ್ತರು ಮತ್ತು ಅಧಿಕಾರಿಗಳ ವಿರುದ್ಧ ಹೋರಾಟಕ್ಕೆ ಭಾನುವಾರ ನಡೆದ ಸಭೆಯಲ್ಲಿ ಚರ್ಚಿಸಿ ಹಲವಾರು ತೀರ್ಮಾನ ಕೈಗೊಳ್ಳಲಾಗಿತ್ತು.
ಪರಿಸ್ಥಿತಿಯ ಗಂಭೀರತೆ ಮತ್ತು ಸೂಕ್ಷ್ಮತೆಯನ್ನು ಶಾಸಕ ಜ್ಯೋತಿ ಗಣೇಶ್ ಜಿಲ್ಲಾಡಳಿತದ ಗಮನಕ್ಕೆ ತಂದು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಸಭೆ ಕರೆದು ದಲಿತರ ಧಾರ್ಮಿಕ ಭಾವನೆಗಳಿಗೆ ಮತ್ತು ಸ್ವಾಭಿಮಾನಕ್ಕೆ ಧಕ್ಕೆಯಾಗುವಂತೆ ಮಾಡುವ ಉದ್ದೇಶ ಜಿಲ್ಲಾಡಳಿತಕ್ಕೆ ಇರಲಿಲ್ಲ, ರಸ್ತೆ ಅಭಿವೃದ್ಧಿಗಾಗಿ ತೆರವುಗೊಳಿಸಲಾಗಿದೆ ಹೊರತು ಬೇರಾವುದೇ ಉದ್ದೇಶವಿಲ್ಲ, ಆದಷ್ಟು ಬೇಗ ನಗರಪಾಲಿಕೆ ಅನುದಾನದಲ್ಲಿ ಹೊಸ ವಿನ್ಯಾಸದೊಂದಿಗೆ ಶ್ರೀದುರ್ಗಮ್ಮ ದೇವಿಯ ಮುಖ್ಯದ್ವಾರವನ್ನು ಪುನರ್ ನಿರ್ಮಿಸಿಕೊಡುವುದಾಗಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಘೋಷಿಸಿದ್ದರು.
ಇದಕ್ಕೆ ಧ್ವನಿಗುಡಿಸಿದ ಶಾಸಕ ಜ್ಯೋತಿ ಗಣೇಶ್ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯ ಹಣದಲ್ಲಿ ಮತ್ತಷ್ಟು ಹಣ ನೀಡಿ ನಮ್ಮ ಮೇಲುಸ್ತುವಾರಿಯಲ್ಲಿ ತುರ್ತಾಗಿ ಸ್ವಾಗತ ಕಮಾನನ್ನು ನಿರ್ಮಿಸುವುದರ ಜೊತೆಗೆ 4 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಸಮುದಾಯ ಭವನವನ್ನು ಎನ್.ಆರ್.ಕಾಲೋನಿಯ ನಾಗರಿಕರಿಗೆ ನಿರ್ಮಿಸಿಕೊಡಲಾಗುವುದು ಎಂದರು.
ಹಿರಿಯ ಚಿಂತಕ ಕೆ.ದೊರೈರಾಜ್ ಮಾತನಾಡಿ ಎನ್.ಆರ್.ಕಾಲೋನಿಯ ಜನರು ತುಮಕೂರು ನಗರಕ್ಕೆ ನೀಡುತ್ತಿರುವ ಕೊಡುಗೆ ಮತ್ತು ಇತಿಹಾಸದ ಬಗ್ಗೆ ಹಾಗೂ ದುರ್ಗಮ್ಮ ದೇವಿಯೊಂದಿಗಿನ ಭಾವನಾತ್ಮಕವಾದ ಜನರ ಸಂಬಂಧದ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತಂದರು.
ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ಉಪಸ್ಥಿತರಿದ್ದರು. ದುರ್ಗಮ್ಮ ದೇವಸ್ಥಾನ ಜೀರ್ಣೋದ್ಧಾರ ಸಂಘದ ಕಾರ್ಯದರ್ಶಿ ಎ.ನರಸಿಂಹಮೂರ್ತಿ, ಪದಾಧಿಕಾರಿಗಳಾದ ಟಿ.ಕೆ.ನರಸಿಂಹಮೂರ್ತಿ, ಮಲ್ಲಿಕಾರ್ಜುನ್, ಮಾಜಿ ನಗರ ಪಾಲಿಕೆ ಸದಸ್ಯ ಬಿ.ಅಂಜಿನ್‌ಮೂರ್ತಿ, ಅಂಬೇಡ್ಕರ್ ಬಾಬು ಜಗಜೀವನ್ ರಾಂ ಸಂಘದ ಕಿರಣ್‌ಕುಮಾರ್, ಕೊಳಗೇರಿ ಸಮಿತಿಯ ಅರುಣ್, ಮೋಹನ್‌ಟಿ.ಆರ್, ದಲಿತ ಭೂಮಿ ರಕ್ಷಣಾ ವೇದಿಕೆಯ ಟಿ.ಸಿ.ರಾಮಯ್ಯ, ಎನ್.ಆರ್.ಕಾಲೋನಿಯ ಮುಖಂಡರಾದ ಎನ್.ರಾಜಣ್ಣ, ಲೋಕೇಶ್, ಗಂಗಾಧರ್, ರಂಜನ್, ಹರೀಶ್, ಮಾರುತಿ ಪಾಲ್ಗೊಂಡಿದ್ದರು.
Comments are closed.