ಕುಣಿಗಲ್: ತಾಲೂಕಿನ 36 ಗ್ರಾಮ ಪಂಚಾಯಿತಿಗಳ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ದಿನಾಂಕ ಘೋಷಣೆಯಾಗಿರುವ ನಡುವೆಯೆ ಮೊದಲ ಅವಧಿಯ ಅಧಿಕಾರಾವಧಿ ಕೆಲವೆ ದಿನಗಳು ಬಾಕಿ ಇದ್ದು ಹುತ್ರಿದುರ್ಗ ಹೋಬಳಿಯ ಹುತ್ರಿ ಗ್ರಾಪಂಗೆ ಮುರುಗೇಶಗೌಡ ಅಲಿಯಾಸ್ ಸ್ವಾಮಿ ಗೌಡ ಕೆಲವೆ ದಿನದ ಮಟ್ಟಿಗೆ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು.
ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಎರಡನೆ ಅವಧಿಯ ಮೀಸಲಾತಿ ಪ್ರಕ್ರಿಯೆ ನಡೆಸಿ ಘೊಷಣೆ ಮಾಡಲಾಗಿತ್ತು. ಈ ಮಧ್ಯೆಯೆ ಹುತ್ರಿ ಗ್ರಾಪಂ ಅಧ್ಯಕ್ಷರಾಗಿದ್ದ ಹನುಮಂತ ಎಂಬುವರ ರಾಜಿನಾಮೆ ನೀಡಿದ್ದು ಅಧ್ಯಕ್ಷ ಸ್ಥಾನ ತೆರವಾಗಿತ್ತು. ಈ ಸ್ಥಾನಕ್ಕೆ ಸೋಮವಾರ ಚುನಾವಣೆ ಪ್ರಕ್ರಿಯೆ ನಡೆದಿದ್ದು ಕಾಂಗ್ರೆಸ್ ಬೆಂಬಲಿತ ಮುರುಗೇಶ ಗೌಡ ಅ.ಸ್ವಾಮಿಗೌಡ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ತಹಶೀಲ್ದಾರ್ ಮಹಾಬಲೇಶ್ವರ್ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಇದೆ ಗ್ರಾಮ ಪಂಚಾಯಿತಿಯ ಎರಡನೆ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯು ಇದೇ 20ರಂದು ನಿಗದಿಯಾಗಿದೆ.
ಸೋಮವಾರ ತಾಲೂಕಿನ ಮೂರು ಗ್ರಾಮ ಪಂಚಾಯಿತಿಗೆ ಎರಡನೆ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ತಾವರೆಕೆರೆ ಗ್ರಾಮ ಪಂಚಾಯಿತಿ 15 ಮಂದಿ ಸದಸ್ಯರನ್ನು ಹೊಂದಿದ್ದು, ಅಧ್ಯಕ್ಷ ಸ್ಥಾನ ಬಿಸಿಎಂ(ಎ)ಗೆ ಮೀಸಲಾಗಿದ್ದು ಈ ವರ್ಗದ ಯಾವುದೇ ಅಭ್ಯರ್ಥಿ ಉಮೇದುವಾರಿಕೆ ಸಲ್ಲಿಸದ ಕಾರಣ ಬಿಸಿಎಂ(ಬಿ) ವರ್ಗದ ರುದ್ರೇಗೌಡ ಉಮೇದುವಾರಿಕೆ ಸಲ್ಲಿಸಿ ಅವಿರೋಧವಾಗಿ ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಸಾಮಾನ್ಯ ವರ್ಗದಿಂದ ಗೌರಮ್ಮ ಅವಿರೋಧವಾಗಿ ಆಯ್ಕೆಯಾದರು. ಕೊತ್ತಗೆರೆ ಗ್ರಾಮ ಪಂಚಾಯಿತಿಗೂ ಅವಿರೋಧ ಆಯ್ಕೆಯಾಗಿದ್ದು ಸಾಮಾನ್ಯ ವರ್ಗದ ಮೀಸಲು ಇದ್ದ ಅಧ್ಯಕ್ಷ ಸ್ಥಾನಕ್ಕೆ ಗೌತಮಿ, ಬಿಸಿಎಂ(ಎ) ಮೀಸಲು ಇದ್ದ ಉಪಾಧ್ಯಕ್ಷ ಸ್ಥಾನಕ್ಕೆ ಸರೋಜಮ್ಮ ಅವಿರೋಧ ಆಯ್ಕೆಯಾದರು. ಭಕ್ತರಹಳ್ಳಿ ಗ್ರಾಮ ಪಂಚಾಯಿತಿಗೆ 15 ಸದಸ್ಯರ ಸಂಖ್ಯಾ ಬಲವಿದ್ದು ಎರಡನೆ ಅವಧಿಗೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು ಮಂಜುಳಾ ಏಳು ಮತ ಪಡೆದರೆ, ಲೀಲಾವತಿ ಎಂಟು ಮತ ಪಡೆದು ಅಧ್ಯಕ್ಷರಾದರು. ಉಪಾಧ್ಯಕ್ಷ ಸ್ಥಾನ ಬಿಸಿಎಂ(ಎ) ಮೀಸಲು ಇದ್ದು ನಾಗರಾಜು ಏಳು ಮತ ಪಡೆದರೆ, ಅಲಿಮಾಬಿ ಎಂಟು ಮತ ಪಡೆದು ಉಪಾಧ್ಯಕ್ಷರಾಗಿ ಅಯ್ಕೆಯಾದರು.
ಕೆ.ಹೊನ್ನ ಮಾಚನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆ ಜಿದ್ದಾಜಿದ್ದಿನಿಂದ ಕೂಡಿದ್ದು ಕಾಂಗ್ರೆಸ್- ಜೆಡಿಎಸ್ ನಡುವೆ ತೀವ್ರ ಹಣಾಹಣಿ ಏರ್ಪಟ್ಟು ಕೆಲ ಸದಸ್ಯರನ್ನು ಚುನಾವಣೆಗೆ ಮುನ್ನವೆ ಪ್ರವಾಸದ ನೆಪದಲ್ಲಿ ಕರೆದೊಯ್ದಿದ್ದು ಗ್ರಾಪಂ ಕಚೇರಿ ಮುಂದೆ ಎರಡೂ ಬಣದವರು ಜಮಾವಣೆಗೊಂಡ ಕಾರಣ ಪೊಲೀಸರ ಬಿಗಿ ಬಂದೋಬಸ್ತ್ ನಲ್ಲಿ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು ಗೌರಮ್ಮ ನಾಲ್ಕು ಮತ, ರಕ್ಷಿತಾ ರಾಮ್ ಎಂಟು ಮತ ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರೆ, ಉಪಾಧ್ಯಕ್ಷ ಸ್ಥಾನಕ್ಕೆ ಶಶಿಕಲಾ ನಾಲ್ಕು ಮತ ಪಡೆದರೆ, ರೇಣುಕಾ ಮಹೇಶ್ ಎಂಟು ಮತ ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾದರು. ಭಕ್ತರಹಳ್ಳಿ ಗ್ರಾಪಂ ಜೆಡಿಎಸ್ ಬೆಂಬಲಿತರ ಪಾಲಾದರೆ, ಕೆ.ಹೆಚ್.ಹಳ್ಳಿ, ತಾವರೆಕೆರೆ, ಕೊತ್ತಗೆರೆ, ಗ್ರಾಪಂ ಕಾಂಗ್ರೆಸ್ ಬೆಂಬಲಿತರ ಪಾಲಾಗಿದೆ.
Comments are closed.