ಬಗರ್ ಹುಕುಂ ಅರ್ಜಿ ವಿಲೇವಾರಿಗೆ ಒತ್ತಾಯಿಸಿ ಪ್ರತಿಭಟನೆ

51

Get real time updates directly on you device, subscribe now.


ತುಮಕೂರು: ತುಮಕೂರು ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಈಗಲೂ ನಮಗೆ ಸೂರು ಕಟ್ಟಿಕೊಳ್ಳಲು ಜಾಗವಿಲ್ಲದೆ ಬೆಳೆದು ತಿನ್ನಲು ಭೂಮಿ ಇಲ್ಲದೆ ಪರಿತಪಿಸುತ್ತಿದ್ದು ನಮ್ಮ ತಾತ ಮುತ್ತಾತಂದಿರು ಅಂಗೈಯಗಲ ಭೂಮಿಗಾಗಿ ಸರ್ಕಾರಕ್ಕೆ ನಮೂನೆ 50, 53, 57 ಅರ್ಜಿ ಹಾಕಿ ಮನವಿ ಮಾಡಿದ್ದರು ಈವರೆಗೂ ನಮಗೆ ಯಾವುದೇ ಸರ್ಕಾರಗಳು, ಅಧಿಕಾರಿಗಳು ಮನೆ ಕಟ್ಟಿಕೊಳ್ಳಲು ನಿವೇಶನ, ಬೆಳೆದು ತಿನ್ನಲು ಭೂಮಿಯನ್ನ ನೀಡಿಲ್ಲವೆಂದು ತುಮಕೂರು ಜಿಲ್ಲೆಯ ಭೂಮಿ ಮತ್ತು ವಸತಿ ವಂಚಿತರ ಹಕ್ಕು ಹೋರಾಟ ಸಮಿತಿ ಹಾಗೂ ತುಮಕೂರು ಜಿಲ್ಲಾ ಬೀದಿಬದಿ ವ್ಯಾಪಾರಿಗಳ ವಸತಿ ಹಕ್ಕು ಸಂಘದ ವತಿಯಿಂದ ತುಮಕೂರಿನಲ್ಲಿ ಟೌನ್ ಹಾಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಜಿಲ್ಲೆಯ ವಿವಿಧ ತಾಲೂಕಿನಿಂದ ಆಗಮಿಸಿದ್ದ ನೂರಾರು ಭೂಮಿ ಮತ್ತು ವಸತಿ ವಂಚಿತ ಫಲಾನುಭವಿಗಳು ಪ್ರತಿಭಟನೆಯಲ್ಲಿ ಹೆಜ್ಜೆ ಹಾಕಿ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು, ಜಿಲ್ಲಾಧಿಕಾರಿಗಳ ಕಚೇರಿ ಬಳಿಗೆ ಬಂದ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬೃಹತ್ ಧರಣಿ ನಡೆಸಿ ಕೂಡಲೇ ನಮೂನೆ 50 53 57ಕ್ಕೆ ವಸತಿ ಮತ್ತು ಭೂಮಿಗಾಗಿ ಅರ್ಜಿ ಸಲ್ಲಿಸಿರುವ ಫಲಾನುಭವಿಗಳಿಗೆ ವಿಲೆವಾರಿ ಮಾಡುವಂತೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ ಅವರಿಗೆ ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಭೂಮಿ ಮತ್ತು ವಸತಿ ವಂಚಿತ ಹೋರಾಟ ಹಕ್ಕು ಸಮಿತಿಯ ರಾಜ್ಯಾಧ್ಯಕ್ಷ ಕುಮಾರ್ ಸಮತಳ ಮಾತನಾಡಿ, ನಮ್ಮ ನಾಡಿನ ದೀನ ದಲಿತರು, ಶೋಷಿತರು ತಲೆತಲಾಂತರದಿಂದ ವಸತಿ ಭೂಮಿಗಾಗಿ ಅರ್ಜಿ ಸಲ್ಲಿಸಿ ಕಚೇರಿಗೆ ತಿರುಗಿ ಚಪ್ಪಲಿ ಸವೆಸುತ್ತಿದ್ದಾರೆ. ಉಳ್ಳವರು ಭೂಮಿ ಮತ್ತು ವಸತಿ ವಂಚಿತರ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದ್ದು ಹಲವು ಸರ್ಕಾರಗಳು ಬಂದು ಆಡಳಿತ ನಡೆಸಿದರು ಈವರೆಗೂ ಸಮನಾದ ನ್ಯಾಯ ಸಿಕ್ಕಿಲ್ಲ. ಹೀಗಾಗಿ ಸಮಾಜವಾದಿ ಹಿನ್ನೆಲೆಯಿಂದ ಬಂದ ಸಮಾಜದ ಬಗ್ಗೆ ಕಳಕಳಿ ಇರುವ ಅಹಿಂದ ಅಸ್ಮಿತೆ ಎನಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭೂಮಿ ಮತ್ತು ವಸತಿ ಹೋರಾಟಗಾರರ ಮನವಿ ಆಲಿಸಿ ಶೀಘ್ರವಾಗಿ ಭೂಮಿ ಮತ್ತು ವಸತಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಬಳಿ ನಡೆಯುತ್ತಿದ್ದ ಪ್ರತಿಭಟನಾ ಧರಣಿ ನಿರತ ಸ್ಥಳಕ್ಕೆ ಆಗಮಿಸಿದ ಪ್ರಗತಿಪರ ಹೋರಾಟಗಾರ ಸಿ.ಯತಿರಾಜ್ ಮಾತನಾಡಿ ಭೂಮಿ ಇಂದು ಮಾರಾಟದ ವಸ್ತುವಾಗಿದ್ದು ಯಾರಿಗೂ ಕೂಡಾ ದಕ್ಕುತ್ತಿಲ್ಲ. ತುಮಕೂರು ಜಿಲ್ಲೆಯ ಚಿಕ್ಕನಾಯಕನ ಹಳ್ಳಿ ತಾಲೂಕಿನ ಹುಳಿಯಾರ್ ನಲ್ಲಿ ಸತ್ತವರನ್ನ ಊಳಲು ಕೂಡ ಭೂಮಿ ಇಲ್ಲ, ಈಗಲೂ ಆ ಭಾಗದ ಜನರು ಹೋರಾಟ ಮಾಡುತ್ತಲೆ ಇದ್ದಾರೆ, ಇಂದಿನ ಸರ್ಕಾರಗಳು ಮತ್ತು ಆಡಳಿತಗಳು ನಿರಂತರವಾಗಿ ಹೋರಾಟ ಮಾಡುತ್ತಿರುವ ಭೂಮಿ ಮತ್ತು ವಸತಿ ಹೋರಾಟಗಾರರಿಗೆ ಕೇವಲ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿವೆ. ಬಂಡವಾಳಗಾರರು ಭೂಮಿಯನ್ನು ಲೂಟಿ ಹೊಡೆಯುತ್ತಿದ್ದರು ಯಾವುದೇ ಕ್ರಮ ಕೈಗೊಳ್ಳದೆ ಲಾಭಕ್ಕಾಗಿ ಇಣುಕುತ್ತಿವೆ ಎಂದು ಟೀಕಿಸಿದರು.

ತುಮಕೂರು ಜಿಲ್ಲಾ ಭೂಮಿ ಮತ್ತು ವಸತಿ ಹೋರಾಟ ಹಕ್ಕು ಸಮಿತಿಯ ಜಿಲ್ಲಾಧ್ಯಕ್ಷ ಹಾಗೂ ಸಾಮಾಜಿಕ ಕಾರ್ಯಕರ್ತ ಅಂದ್ರಾಳು ನಾಗಭೂಷಣ್ ಮಾತನಾಡಿ ಭೂಮಿ ಮತ್ತು ವಸತಿ ವಂಚಿತರಿಂದ ಮತ ಪಡೆದ ಅಯೋಗ್ಯರಿಗೆ ಅವರ ಕಣ್ಮುಂದೆ ತಿರುಗುತ್ತಿದ್ದರೂ ಅವರಿಗೆ ಕಣ್ಣು ಕಾಣುತ್ತಿಲ್ಲ. ಭೂಮಿ ಮತ್ತು ವಸತಿ ವಂಚಿತರು ಅವರ ಬಂಗಲೆಗಳನ್ನು ಕೇಳುತ್ತಿಲ್ಲ. ಅವರ ಆಸ್ತಿಗಳನ್ನ ಕೇಳುತ್ತಿಲ್ಲ. ಸರ್ಕಾರದ ಅಡಿಯಲ್ಲಿ ಬರುವ ಯೋಜನೆಗಳ ಅಡಿ ಭೂಮಿ ಮತ್ತು ವಸತಿಯನ್ನು ನಿಯಮಾನುಸಾರ ಕೇಳುತ್ತಿದ್ದೇವೆ. ಇದನ್ನ ನೀಡಲು ಅಯೋಗ್ಯರಿಗೆ ಯೋಗ್ಯತೆ ಇಲ್ಲ ಎಂದು ಕಿಡಿಕಾರಿದರು.

ಪ್ರತಿಭಟನಾ ಧರಣಿ ಸಮಯದಲ್ಲಿ ಹೈಕೋರ್ಟ್ ವಕೀಲ ಉಮಾಪತಿ, ಹಿರಿಯ ವಕೀಲ ಹಾಗೂ ಹೋರಾಟಗಾರ ನರಸಿಂಹಮೂರ್ತಿ, ಮರಿಯಪ್ಪ, ಮಾರನಹಳ್ಳಿ ಗಣೇಶ್, ಶಿವಕುಮಾರ್, ಪದ್ಮನಾಭ, ಮೋಹನ್, ಶಿವಕುಮಾರ್, ಶೇಖರ್, ಚಿನ್ಮಯ್, ಜೆಸಿಬಿ ವೆಂಕಟೇಶ್, ಮಳೆಕಲ್ಲಹಳ್ಳಿ ಯೋಗೇಶ್, ನೇಗಲಾಲ ಸಿದ್ದೇಶ್ ಇತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!