16730 ರೂ. ಬೆಂಬಲ ಬೆಲೆ ನೀಡದಿದ್ದರೆ ಉಗ್ರ ಹೋರಾಟ

ಕೊಬ್ಬರಿಗೆ ಬೆಂಬಲ ಬೆಲೆ ಆಗ್ರಹಿಸಿ ವಿಧಾನಸೌಧ ಚಲೋ- ರೈತ ಸಂಘದಿಂದ ರಾಜ್ಯಾದ್ಯಂತ ಪ್ರತಿಭಟನೆ

54

Get real time updates directly on you device, subscribe now.


ತುಮಕೂರು: ತೆಂಗು ಬೆಳೆಯುವ ಪ್ರದೇಶದಲ್ಲಿ ಕೊಬ್ಬರಿ ದರ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ಕೊಬ್ಬರಿ ಬೆಳೆಗಾರರ ಹಿತ ಕಾಯುವಲ್ಲಿ ವಿಫಲವಾಗಿರುವ ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಆಗಸ್ಟ್ 16 ರಿಂದ 21ರ ವರೆಗೆ ಕೊಬ್ಬರಿ ಬೆಳೆಯುವ ಎಲ್ಲಾ ತಾಲೂಕುಗಳಲ್ಲಿ ಬಂದ್ ನಡೆಸಲಾಗುವುದು ಎಂದು ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಆಗಸ್ಟ್ 01 ರಂದು ಚಿಕ್ಕನಾಯಕನಹಳ್ಳಿ ತಾಲೂಕು ಕೇಂದ್ರದಲ್ಲಿ ಬಂದ್ ಆಚರಿಸಲಾಗುವುದು. ತದ ನಂತರದಲ್ಲಿ ತೆಂಗು ಬೆಳೆಯುವ ಸುಮಾರು 33 ತಾಲೂಕು ಕೇಂದ್ರಗಳಲ್ಲಿಯೂ ಬಂದ್ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಇದಕ್ಕೆ ಸಾರ್ವಜನಿಕರು, ಕೊಬ್ಬರಿ ಮತ್ತು ತೆಂಗು ಬೆಳೆಗಾರರು ಸಹಕಾರ ನೀಡಿ ಸರಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಬೇಕೆಂದರು.

ಸುಮಾರು 40 ವರ್ಷಗಳ ಹಿಂದೆ ಮುಕ್ತ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಕೊಬ್ಬರಿ ಬೆಲೆ 9900 ರೂ. ಇತ್ತು, ನಲವತ್ತು ವರ್ಷಗಳಲ್ಲಿ ತೆಂಗು ಬೆಳೆಯಲು ಉಪಯೋಗಿಸುವ ಉಪಕರಣ, ಗೊಬ್ಬರ, ರಸಾಯನಿಕ ವಸ್ತುಗಳ ಬೆಲೆ ಎಷ್ಟು ಪ್ರಮಾಣದಲ್ಲಿ ಹೆಚ್ಚಾಗಿದೆ. ಆದರೆ ಕೊಬ್ಬರಿ ಬೆಲೆ ಮಾತ್ರ ದಿನದಿಂದ ದಿನಕ್ಕೆ ಕುಸಿತ ಕಾಣುತ್ತಾ ಪ್ರಸ್ತುತ 6500- 7500 ರೂ. ಗಳಿಗೆ ನಿಂತಿದೆ. ಇಷ್ಟಾದರೂ ಕೇಂದ್ರ ಸರಕಾರವಾಗಲಿ, ರಾಜ್ಯ ಸರಕಾರವಾಗಲಿ ಕೊಬ್ಬರಿಗೆ ಬೆಳೆಗಾರರ ನೆರವಿಗೆ ಬಂದಿಲ್ಲ. ದೇಶದಲ್ಲಿ ಸರಕಾರಗಳು ಜೀವಂತ ಇವೆ ಎಂಬ ಪ್ರಶ್ನೆ ಮೂಡುತ್ತಿದೆ. ಸದನದಲ್ಲಿ ಈ ವಿಚಾರ ಚರ್ಚೆಯಾದ ನಂತರ ರಾಜ್ಯ ಸರಕಾರ ಕ್ವಿಂಟಾಲ್ ಗೆ 1250 ರೂ. ಪ್ರೋತ್ಸಾಹ ನೀಡಿ ಕೈತೊಳೆದುಕೊಂಡಿದೆ. ಕೃಷಿ ಅವರ್ತ ನಿಧಿಯಿಂದಲಾದರೂ ಹೆಚ್ಚಿನ ಹಣವನ್ನು ಸರಕಾರ ಬಿಡುಗಡೆ ಮಾಡಬೇಕೆಂದು ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದರು.

ಒಂದೆಡೆ ಕೊಬ್ಬರಿ ಸೇರಿದಂತೆ ರೈತರು ತಮ್ಮ ಉತ್ಪನ್ನಗಳಿಗೆ ಬೆಲೆ ಇಲ್ಲದೆ ಪರದಾಡುತ್ತಿದ್ದರೆ, ಯುಪಿಎ ಮತ್ತು ಎನ್ ಡಿಎ ಮಿತ್ರ ಪಕ್ಷಗಳು ಮುಂಬರುವ ಲೋಕಸಭಾ ಚುನಾವಣೆ ಗೆಲ್ಲಲು ತಂತ್ರ, ಪ್ರತಿತಂತ್ರ ರೂಪಿಸುತ್ತಿವೆ. ಕೃಷಿ ಉತ್ಪನ್ನಗಳಿಗೆ ನ್ಯಾಯೋಚಿತ ಬೆಲೆ ನೀಡಬೇಕೆಂಬುದು ನಿಮ್ಮ ಅಜೆಂಡಾದದಲ್ಲಿ ಇಲ್ಲವೆ ಎಂದು ಪ್ರಶ್ನಿಸಿದ ಕೋಡಿಹಳ್ಳಿ ಸರಕಾರ ಆಗಸ್ಟ್ 15 ರೊಳಗೆ ಕೊಬ್ಬರಿಗೆ ತೋಟಗಾರಿಕಾ ಇಲಾಖೆ ಶಿಫಾರಸ್ಸು ಮಾಡಿರುವ 16730 ರೂ. ಬೆಂಬಲ ಬೆಲೆ ಘೋಷಣೆ ಮಾಡದಿದ್ದರೆ ಆಗಸ್ಟ್ 16 ರಿಂದ ವಿಧಾನಸೌಧ ಚಲೋ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದರು.

ರಾಜ್ಯದ ಸುಮಾರು 10 ಜಿಲ್ಲೆಗಳಲ್ಲಿ ಸಾಧಾರಣೆ ಮಳೆಯಾಗಿದೆ. ಆದರೆ 20 ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಕುಂಠಿತವಾಗಿದೆ. ಕೂಡಲೇ ಸರಕಾರ ಮಳೆ ಕೊರತೆ ಇರುವ ಜಿಲ್ಲೆಗಳನ್ನು ಬರಗಾಲ ಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಿ ಪರಿಹಾರ ಕಾರ್ಯಕ್ರಮ ರೂಪಿಸಬೇಕೆಂದು ಸರಕಾರವನ್ನು ಒತ್ತಾಯಿಸಿದರು.

ಕೋವಿಡ್ ಆರಂಭದಲ್ಲಿ ಕೆಎಸ್ಆರ್ ಟಿಸಿ ನೌಕರರ ಹೋರಾಟದ ನೇತೃತ್ವ ವಹಿಸಿಕೊಂಡ ಪರಿಣಾಮ ನೌಕರರಿಗೆ 6ನೇ ವೇತನ ಆಯೋಗದ ಪ್ರಕಾರ ವೇತನ ದೊರೆಯುವಂತಾಗಿದೆಯಲ್ಲದೆ ಅವರ 10 ಬೇಡಿಕೆಗಳಲ್ಲಿ 9 ನ್ನು ಸರಕಾರ ಈಡೇರಿಸುವ ಲಿಖಿತ ಭರವಸೆ ನೀಡಿತ್ತು, ಆದರೆ ಅದು ಕಾರ್ಯರೂಪಕ್ಕೆ ಬರದ ಹಿನ್ನೆಲೆಯಲ್ಲಿ 2021ರ ಏಪ್ರಿಲ್ ನಲ್ಲಿ ಮುಷ್ಕರ ಆರಂಭಿಸಿದ ಸಂದರ್ಭದಲ್ಲಿ ಚಳವಳಿ ಹತ್ತಿಕ್ಕುವ ನಿಟ್ಟಿನಲ್ಲಿ ಸರಕಾರ ರೂಪಿಸಿದ ಹಲವಾರು ತಂತ್ರಗಳ ಭಾಗವಾಗಿ ಪವರ್ ಟಿವಿಯಲ್ಲಿ ನನ್ನ ವಿರುದ್ಧ ಕೆಲವು ಮಾನಹಾನಿ ವರದಿಗಳು ಪ್ರಕಟವಾದವು. ಇದನ್ನು ಪ್ರಶ್ನಿಸಿ ಬೆಂಗಳೂರಿನ ಹೆಚ್ಚುವರಿ ಮೆಟ್ರೋ ಪಾಲಿಟಿನ್ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದೆ, ಅದರ ಅನ್ವಯ ಖಾಸಗಿ ಟಿವಿಯೊಂದಕ್ಕೆ ಐಪಿಸಿ ಕಲಂ 499, 500 ಅಡಿಯಲ್ಲಿ ಕೇಸು ದಾಖಲಿಸಿ 2023ರ ಜುಲೈ 07 ರಂದು ಸಮನ್ಸ್ ನೀಡಿದ್ದಾರೆ. ಸದರಿ ವಾಹಿನಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿರುವುದಾಗಿ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರುವ ಸೇನೆಯ ಉಪಾಧ್ಯಕ್ಷ ಭಕ್ತರಹಳ್ಳಿ ಭೈರೇಗೌಡ, ಕೆಂಕೆರೆ ಸತೀಶ್, ಜಿಲ್ಲಾಧ್ಯಕ್ಷ ಆನಂದ ಪಟೇಲ್, ಗೌರವಾಧ್ಯಕ್ಷ ಧನಂಜಯ ಆರಾಧ್ಯ, ವಿವಿಧ ತಾಲೂಕುಗಳ ಅಧ್ಯಕ್ಷರಾದ ಕೊಡ್ಲಹಳ್ಳಿ ಸಿದ್ದರಾಜು, ಅನಿಲ್ಕುಮಾರ್, ಮಲ್ಲಿಕಾರ್ಜುನ್, ರಾಜಣ್ಣ, ಸಣ್ಣ ದ್ಯಾಮೇಗೌಡ, ಲೊಕೇಶ್, ರುದ್ರೇಶಗೌಡ, ಸತೀಶ್ ಮತ್ತಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!