ತುಮಕೂರು: ವಿದ್ಯಾರ್ಥಿಗಳು ಕಾಣುವ ಕನಸಿಗೂ ನಡೆಯುತ್ತಿರುವ ದಾರಿಗೂ ಸಂಬಂಧವಿದ್ದರಷ್ಟೇ ಸ್ಪರ್ಧಾತ್ಮಕ ಯುಗದಲ್ಲಿ ಗೆಲುವು ಸಾಧ್ಯ ಎಂದು ನವೋದಯ ಐಎಎಸ್ ಅಕಾಡೆಮಿ ನಿರ್ದೇಶಕ ಎಂ.ಉದಯ್ ಸಾಗರ್ ಹೇಳಿದರು.
ತುಮಕೂರು ವಿಶ್ವವಿದ್ಯಾಲಯ ಕಲಾ ಕಾಲೇಜಿನ ಸಮಾಜ ಶಾಸ್ತ್ರ ವಿಭಾಗವು ವಿಶ್ವಯುವ ಕೌಶಲ್ಯ ದಿನದ ಅಂಗವಾಗಿ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ತರಬೇತಿಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಪೋಷಕರು ತಮ್ಮ ಮಕ್ಕಳು ಒಳ್ಳೆಯ ಸ್ಥಾನ ತಲುಪಬೇಕೆಂಬ ನಿರೀಕ್ಷೆಯಲ್ಲಿರುತ್ತಾರೆ. ಅಂತಹ ನಿರೀಕ್ಷೆಯನ್ನು ವಿದ್ಯಾರ್ಥಿಯಾಗಿ ನೀವು ನನಸು ಮಾಡಬೇಕು ಎಂದರು.
ವಿದ್ಯಾರ್ಥಿ ಜೀವನದ ಪ್ರತಿಕ್ಷಣವೂ ಅಮೂಲ್ಯವಾದ ಸಮಯವಾಗಿರುತ್ತದೆ. ಈ ಸಮಯವನ್ನು ವ್ಯರ್ಥ ಮಾಡದೆ ಉಪಯೋಗಿಸಿಕೊಳ್ಳಿ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿಶ್ವ ವಿದ್ಯಾಲಯ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಕರಿಯಣ್ಣ, ಕೇವಲ ಪದವಿ ಪಡೆದರೆ ಉನ್ನತ ಸ್ಥಾನಕ್ಕೆ ಏರುತ್ತೇವೆ ಎಂಬುದು ತಪ್ಪು ಗ್ರಹಿಕೆ, ಆದ್ದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಒಳ್ಳೆಯ ತಯಾರಿ ನಡೆಸಿ ಯಶಸ್ವಿಯಾಗಬೇಕು ಎಂದರು.
ತುಮಕೂರು ವಿಶ್ವ ವಿದ್ಯಾಲಯ ಕಲಾ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಸುನೀತಾ ವಿ.ಗಾಣಿಗೇರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಕೇಳಿಸಿಕೊಳ್ಳುವ ಕೌಶಲ್ಯ ಕಡಿಮೆಯಾಗುತ್ತಿದೆ, ಪದವಿ ಮುಗಿದ ನಂತರ ಯಾವ ರೀತಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಬೇಕು ಎಂಬುದರ ಕುರಿತು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ತುಮಕೂರು ವಿಶ್ವ ವಿದ್ಯಾಲಯ ಕಲಾ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಮಾದಪ್ಪ.ಡಿ, ಗೋವಿಂದರಾಜು.ಜಿ. ಭಾಗವಹಿಸಿದ್ದರು.
Comments are closed.