ತುರುವೇಕೆರೆ: ತಾಲೂಕಿನ ಬಾಣಸಂದ್ರ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಲಲಿತಾ ನಾಗರಾಜ್ ಹಾಗೂ ಉಪಾಧ್ಯಕ್ಷರಾಗಿ ಕಾಂತರಾಜ್ ಅವಿರೋಧವಾಗಿ ಆಯ್ಕೆಯಾದರು. ಈ ಮೂಲಕ ಜೆಡಿಎಸ್ ಬಾಣಸಂದ್ರ ಗ್ರಾಪಂನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.
ತಾಲೂಕಿನ ಬಾಣಸಂದ್ರ ಗ್ರಾಪಂನ ಎರಡನೇ ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಗಾದಿಗೆ ಚುನಾವಣೆ ನಡೆಯಿತು. 18 ಮಂದಿ ಸದಸ್ಯ ಬಲವುಳ್ಳ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ಲಲಿತಾ ನಾಗರಾಜ್ ಹಾಗೂ ದೇವಿರಮ್ಮ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂತರಾಜ್ ಉಮೇದುವಾರಿಕೆ ಸಲ್ಲಿಸಿದರು. ಅಂತಿಮವಾಗಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ದೇವೀರಮ್ಮ ನಾಮಪತ್ರ ವಾಪಸ್ ಪಡೆದರು. ಕಣದಲ್ಲಿ ಉಳಿದ ಲಲಿತಾ ನಾಗರಾಜ್ ಅಧ್ಯಕ್ಷರಾಗಿಯೂ ಕಾಂತರಾಜ್ ಉಪಾಧ್ಯಕ್ಷರಾಗಿಯೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಎಸ್.ಕೆ.ಪದ್ಮನಾಭ ಘೋಷಣೆ ಮಾಡಿದರು.
ನೂತನ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ಘೋಷಣೆಯಾಗುತ್ತಿದ್ದಂತೆ ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಜೆಡಿಎಸ್ ವಕ್ತಾರ ಯೋಗೀಶ್ ಮಾತನಾಡಿ, ಶಾಸಕ ಎಂ.ಟಿ. ಕೃಷ್ಣಪ್ಪನವರ ಸಹಕಾರದಿಂದ ಬಾಣಸಂದ್ರ ಗ್ರಾಪಂಗೆ ಜೆಡಿಎಸ್ ಪಕ್ಷದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಆಯ್ಕೆಯಾಗಿದ್ದಾರೆ. ಪಂಚಾಯಿತಿ ಅಭಿವೃದ್ಧಿ ದೃಷ್ಟಿಯಿಂದ ನಮ್ಮೊಂದಿಗೆ ಕೈ ಜೋಡಿಸಿದ ಬಿಜೆಪಿಯ ಬುಗುಡನಹಳ್ಳಿ ರಾಜು ಹಾಗೂ ಕಾಂಗ್ರೆಸ್ ಪಕ್ಷದ ಶ್ರೀನಿವಾಸ್ ಹಾಗೂ ಮತ್ತಿತರರಿಗೆ ವಿಶೇಷ ಕೃತಜ್ಞತೆ ಸಮರ್ಪಿಸುತ್ತೇನೆ. ಪಂಚಾಯಿತಿ ಅಭಿವೃದ್ಧಿಗೆ ಪೂರಕವಾಗಿ ನೂತನ ಅಧ್ಯಕ್ಷ, ಉಪಾಧ್ಯಕರು ಶ್ರಮಿಸಲಿ ಎಂದು ಆಶಿಸಿದರು.
ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ವಕ್ತಾರ ವೆಂಕಟಾಪುರ ಯೋಗೀಶ್, ಸಹ ಸದಸ್ಯರಾದ ಲೋಕೇಶ್, ವೀಣಾ, ಶ್ರೀನಿವಾಸ್, ಬುಗುಡನಳ್ಳಿ ರಾಜು, ಭವ್ಯಾ ಸುರೇಶ್, ಮಹಾದೇವ್, ಪ್ರತಿಭಾ, ಆನಂದ್ ಮರಿಯಾ, ಸಾವಿತ್ರಮ್ಮ, ಯುವ ಮುಖಂಡ ಮಣಿಗೌಡ, ಕೃಷ್ಣಮಾದಿಗ ಮತ್ತಿತರರು ಅಭಿನಂದಿಸಿ ಶುಭ ಕೋರಿದರು.
Comments are closed.