ಮಧುಗಿರಿ: ಸವಿತಾ ಸಮಾಜದವರು ರಾಜಕೀಯ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿದ್ದು ಸಮಾಜದ ಮುಖ್ಯವಾಹಿನಿಗೆ ಸೇರಲು ಎಲ್ಲಾ ರೀತಿಯ ಶಕ್ತಿ ತುಂಬುವ ಕೆಲಸ ಮಾಡುತ್ತೇನೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.
ಪಟ್ಟಣದ ಪುರಸಭೆ ವ್ಯಾಪ್ತಿಯ 14 ನೇ ವಾರ್ಡ್‌ನಲ್ಲಿರುವ 5 ಲಕ್ಷ ರೂ. ವೆಚ್ಚದಲ್ಲಿ ಸವಿತಾ ಸಮಾಜದ ಭವನದ ನೂತನ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನಡೆಸಿ ನಂತರ ಸರ್ಕಾರಿ ನೌಕರರ ಸಂಘದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಸಮುದಾಯದ ಹಾಸ್ಟೆಲ್ ನಿರ್ಮಾಣಕ್ಕೆ 1ಎಕರೆ ಜಾಗ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ, ಅದೇ ರೀತಿ ಸಮುದಾಯ ಭವನ ನಿರ್ಮಿಸಲು ಎಲ್ಲಾ ರೀತಿಯ ಆರ್ಥಿಕ ನೆರವು ನೀಡಲಾಗುವುದು ಎಂದರು.
ವೃತ್ತಿಯಲ್ಲಿ ಕೌಶಲ್ಯ ಮತ್ತು ಶ್ರಮದಾನ ಮಾಡುವ ಕ್ಷೌರಿಕ ವೃತ್ತಿಯನ್ನು ಅಳವಡಿಸಿಕೊಂಡು ಜನರ ಸೇವೆ ಮಾಡುತ್ತಿದ್ದು, ರಾಜಕೀಯ ಬದಲಾವಣೆ ಮಾಡುವ ಶಕ್ತಿ ಈ ವೃತ್ತಿಗಿದೆ, ಸವಿತಾ ಸಮಾಜದವರು ಸಮಾಜದ ಎಲ್ಲಾ ವರ್ಗದ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ ಎಂದರು.
ಸಮುದಾಯದವರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ, ರಾಜಕೀಯ ಶೈಕ್ಷಣಿಕವಾಗಿ ಮುಂದೆ ಬರಬೇಕು, ಜನಾಂಗದವರು ಒಗ್ಗಟ್ಟಾಗಿ ಸಮಾಜದ ಅಭಿವೃದ್ಧಿಗೆ ಚಿಂತಿಸಬೇಕಾಗಿದೆ, ಪ್ರತಿ ಮಂಗಳವಾರ ತಮ್ಮ ವೃತ್ತಿಗೆ ರಜಾ ದಿನ ಇರುವುದರಿಂದ ಜನಾಂಗದ ಪ್ರಮುಖರು ಪಕ್ಷಭೇದ ಮರೆತು ಒಟ್ಟಿಗೆ ಸೇರಿ ಸಮಾಜದ ಏಳಿಗೆಗೆ ಶ್ರಮಿಸಬೇಕಾಗಿದೆ, ಚುನಾವಣೆ ಬಂದಾಗ ರಾಜಕಾರಣ ಮಾಡಿ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೇಡ ಎಂದ ಅವರು ಬೇರೆ ರಾಜ್ಯದಿಂದ ಬೆಂಗಳೂರಿಗೆ ಬಂದು ಜಾರ್ಖಂಡ್ ನಿಂದ ಬಂದು ನೆಲೆಸಿರುವ ಸವಿತಾ ಸಮಾಜದ ಯುವಕನೊಬ್ಬನಿಗೆ 2 ಲಕ್ಷ ರೂ. ನಗದು ರೂಪದಲ್ಲಿ ಸಹಾಯ ಮಾಡಿ ಕ್ಷೌರಿಕನ ಅಂಗಡಿಯನ್ನು ಮಾಡಿಕೊಟ್ಟಿರುವುದರ ಬಗ್ಗೆ ಸ್ಮರಿಸಿದರು.
ಇದೇ ವೇಳೆ ಸವಿತಾ ಸಮಾಜದ ರಾಜ್ಯಾಧ್ಯಕ್ಷ ಸಂಪತ್ ಕುಮಾರ್ ಮಾತನಾಡಿ, ಸವಿತಾ ಸಮಾಜ ಒಗ್ಗಟ್ಟಾಗಿರಬೇಕು, ಸವಿತಾ ಸಮಾಜದ ವಿದ್ಯಾರ್ಥಿ ನಿಲಯವನ್ನು ಸಮಾಜದ ಬಡ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು, ಕಟ್ಟಡ ನಿರ್ಮಾಣಕ್ಕೆ ಅನುದಾನ ಕೊಟ್ಟಿರುವ ಶಾಸಕರಿಗೆ ಅಭಿನಂದನೆ ಎಂದರು.
ಕಾರ್ಯಕ್ರಮದಲ್ಲಿ ಸವಿತಾ ಸಾಂಸ್ಕೃತಿಕ ವೇದಿಕೆಯ ರಾಜ್ಯಾಧ್ಯಕ್ಷ ಸುಪ್ರೀಂ ಸುಬ್ರಹ್ಮಣ್ಯ ಮಾತನಾಡಿ, ಎಷ್ಟೋ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕಟ್ಟಡ ನಿರ್ಮಾಣಕ್ಕೆ ಧನಸಹಾಯ ನೀಡಿದ್ದು ಖುಷಿಯ ವಿಚಾರ, ಶಾಸಕರಿಗೆ ಸವಿತಾ ಸಮಾಜ ಋಣಿಯಾಗಿರುತ್ತದೆ ಎಂದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ನರಸಿಂಹಯ್ಯ, ಪುರಸಭೆ ಅಧ್ಯಕ್ಷ ತಿಮ್ಮರಾಯಪ್ಪ , ಸದಸ್ಯರಾದ ನರಸಿಂಹಮೂರ್ತಿ, ಎಂ.ಆರ್.ಜಗನ್ನಾಥ, ಎಂ.ಎಲ್.ಗಂಗರಾಜು, ಕೆ.ನಾರಾಯಣ್, ಗಿರಿಜಾ ಮಂಜುನಾಥ್, ಚಂದ್ರಶೇಖರಬಾಬು, ಮುಖ್ಯಾಧಿಕಾರಿ ಅಮರ್‌ನಾರಾಯಣ್, ಜೆಡಿಎಸ್ ಮುಖಂಡ ತುಂಗೋಟಿ ರಾಮಣ್ಣ, ಸಮಾಜದ ಮುಖಂಡರಾದ ಹೆಚ್.ಡಿ.ರಾಮು, ಮುರಳೀಧರ್, ಮಹಾಲಕ್ಷ್ಮೀ ಲೇಔಟ್ ರವಿಕುಮಾರ್, ಸವಿತಾ ಸಮಾಜದ ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್, ತ್ಯಾಗರಾಜ್, ನರಸಿಂಹಪ್ಪ, ವೆಂಕಟೇಶಪ್ಪ, ಟಿ.ಆರ್.ಶಿವಕುಮಾರ್, ಚನ್ನಕೇಶವ ಮೂರ್ತಿ, ಡಿ.ಕೈಮರ ಮಾರುತಿ, ಭಾಸ್ಕರ್ ನಾಗೇಂದ್ರ ಇನ್ನಿತರರು ಹಾಜರಿದ್ದರು.
Comments are closed.