ಹುಳಿಯಾರು: ಗ್ರಾಪಂ ಅಧ್ಯಕ್ಷರ ಚುನಾವಣೆಯ ದಿನವೇ ಗ್ರಾಪಂ ಅಧ್ಯಕ್ಷೆ ನಿಧನರಾಗಿರುವ ಆಘಾತಕಾರಿ ಸುದ್ದಿ ಹಂದನಕೆರೆ ಹೋಬಳಿಯ ದೊಡ್ಡ ಎಣ್ಣೇಗೆರೆ ಗ್ರಾಮದಲ್ಲಿ ಬುಧವಾರ ನಡೆದಿದೆ.
ದೊಡ್ಡಎಣ್ಣೇಗೆರೆ ಗ್ರಾಪಂ ಅಧ್ಯಕ್ಷೆ ರಮ್ಯಮಂಜುನಾಥ್ (30) ನಿಧನರಾದ ದುರ್ದೈವಿಯಾಗಿದ್ದಾರೆ. ಇದೇ ಪಂಚಾಯ್ತಿಯ ಎರಡನೇ ಅವಧಿಯ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯನ್ನು ಬುಧವಾರ ಏರ್ಪಡಿಸಲಾಗಿತ್ತು. ಅಧ್ಯಕ್ಷಾಕಾಂಕ್ಷಿಗಳು ನಾಮಪತ್ರ ಸಲ್ಲಿಸಿದ್ದರು. ಇನ್ನೇನು ಚುನಾವಣೆ ನಡೆಯಬೇಕೆನ್ನುವಷ್ಟರಲ್ಲಿ ಅಧ್ಯಕ್ಷೆ ರಮ್ಯ ಅವರು ಎದೆ ನೋವು ಎಂದು ಕುಸಿದು ಬಿದ್ದರು.
ತಕ್ಷಣ ದೊಡ್ಡಎಣ್ಣೇಗೆರೆ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಯಿತು. ಅಲ್ಲಿ ಚಿಕಿತ್ಸೆ ಸಾಧ್ಯವಾಗದಿದ್ದಾಗ ಚಿಕ್ಕನಾಯಕನ ಹಳ್ಳಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಕೊನೆಯುಸಿರು ಎಳೆದಿದ್ದಾರೆ. ಬೊಮ್ಮೇನಹಳ್ಳಿಯಲ್ಲಿ ಅಂತ್ಯ ಕ್ರಿಯೆ ನೆರವೇರಲಿದೆ.
ನೂತನ ಅಧ್ಯಕ್ಷರಾಗಿ ತಾಯಮ್ಮ ಆಯ್ಕೆ
ದೊಡ್ಡಎಣ್ಣೇಗೆರೆ ಗ್ರಾಮ ಪಂಚಾಯ್ತಿಯ ನೂತನ ಅಧ್ಯಕ್ಷರಾಗಿ ಚಿಕ್ಕಎಣ್ಣೇಗೆರೆಯ ತಾಯಮ್ಮ ಆಯ್ಕೆಯಾಗಿದ್ದಾರೆ. 21 ಸದಸ್ಯರಿರುವ ಈ ಪಂಚಾಯ್ತಿಯಲ್ಲಿ ಅಧ್ಯಕ್ಷೆ ರಮ್ಯ ಅವರು ನಿಧನರಾಗಿದ್ದರಿಂದ 20 ಮಂದಿ ಮತದಾನ ಮಾಡಿದರು. ತಮ್ಮ ಪ್ರತಿಸ್ಪರ್ಧಿ ರತ್ನಮ್ಮ ಅವರಿಗಿಂದ 2 ಮತ ಹೆಚ್ಚು ಪಡೆಯುವ ಮೂಲಕ ತಾಯಮ್ಮ 2 ನೇ ಅವಧಿಯ ಅಧ್ಯಕ್ಷೆ ಸ್ಥಾನ ಅಲಂಕರಿಸಿದ್ದಾರೆ, ಉಪಾಧ್ಯಕ್ಷ ಸ್ಥಾನಕ್ಕೆ ನಡುವನಹಳ್ಳಿ ಲಿಂಗರಾಜು ಒಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ಇವರನ್ನೇ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಚುನಾವಣಾಧಿಕಾರಿ ಬಿಇಒ ಮನಮೋಹನ್, ಪಿಡಿಓ ವಿಠಲ್ ಭಾಯಿ ಬಂಡಾರಿ ಇದ್ದರು
Comments are closed.