ಶಿರಾ: ನೀವು ನೀಡುವ ಅಂಕಿ ಅಂಶಗಳ ಪರಿಶೀಲನೆ ಮಾಡಲು ನಾನು ಇಲ್ಲಿಗೆ ಬಂದಿಲ್ಲ. ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಸರ್ಕಾರದ ಯೋಜನೆಗಳನ್ನು ಸರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಅಧಿಕಾರಿಗಳ ಮನೋಭಾವ ಬದಲಾಯಿಸಲು ಸಭೆ ಕರೆಯಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಭು.ಕೆ. ನುಡಿದರು.
ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಿರಾ ತಾಲ್ಲೂಕು ಪಿಡಿಓ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿ, ಪಂಚಾಯತ್ ರಾಜ್ ಇಲಾಖೆ ಸಹಯೋಗದಲ್ಲಿ ಉಳಿದ ಎಲ್ಲಾ ಇಲಾಖೆಗಳು ಪ್ರಗತಿಯ ಕ್ರಾಂತಿಯನ್ನೇ ಮಾಡಬಹುದು. ಪಂಚಾಯ್ತಿಗಳು ರಸ್ತೆ, ಬೀದಿ ದೀಪ, ಚರಂಡಿ, ಲೈಸೆನ್ಸ್ ಇವುಗಳಿಗೆ ಸೀಮಿತ ಆಗದಂತೆ ಆಸ್ಪತ್ರೆ, ರೈತ ಸಂಪರ್ಕ ಕೇಂದ್ರ, ಶಾಲೆಗಳು ಇತರೆ ಜವಾಬ್ದಾರಿ ಕೂಡಾ ಹೊರಬೇಕಿದೆ. ಈ ಬಗ್ಗೆ ನಾನು ಒಂದು ಯೋಜನೆ ರೂಪಿಸಿದ್ದು, ಅದನ್ನು ಮೊದಲು ನನ್ನ ಕಚೇರಿ ಮಟ್ಟದಲ್ಲಿ ಅನುಷ್ಠಾನಕ್ಕೆ ತರಲಿದ್ದೇನೆ, ನಂತರ ಅದನ್ನು ಉಳಿದ ಕಚೇರಿಗಳಿಗೆ ವಿಸ್ತರಿಸಲಿದ್ದೇನೆ,
ನಾನು ಕೆಲಸ, ಕ್ಷಮತೆಗೆ ಮಾತ್ರ ಗೌರವ ಕೊಡುತ್ತೇನೆ. ನಿಮ್ಮನ್ನು ಹೇಗೆ ನಡೆಸಿಕೊಳ್ಳಬೇಕು ಎನ್ನುವುದನ್ನು ನಿಮ್ಮ ತೀಮಾನಕ್ಕೆ ಬಿಡುತ್ತೇನೆ. ಯಾವುದೇ ಹಂತದಲ್ಲೂ ಅಶಿಸ್ತನ್ನು ಸಹಿಸುವುದಿಲ್ಲ, ನಾನಿಲ್ಲದಿದ್ದರೆ ಯಾವ ಕೆಲಸವೂ ಆಗುವುದಿಲ್ಲ ಎಂಬ ಅಹಂ ಅಧಿಕಾರಿಗಳಲ್ಲಿ ಬೇಡ, ನೀವು ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ಬೇರೆಯವರನ್ನು ನಿಯೋಜನೆ ಮಾಡಿ ಕೆಲಸ ಮಾಡಿಸುವುದು ನನಗೆ ಚೆನ್ನಾಗಿ ಗೊತ್ತು, ಹೀಗೆ ಮಾಡಿ ನಿಮ್ಮ ಗೌರವ ಕಳೆದುಕೊಳ್ಳಬೇಡಿ, ನಮ್ಮ ಇಲಾಖೆ ಚೆನ್ನಾಗಿ ಕಾರ್ಯ ನಿರ್ವಹಿಸುತ್ತದೆ ಎಂಬ ಮಾತು ಸಾರ್ವಜನಿಕರಿಂದ ಕೇಳಿ ಬರಬೇಕೇ ವಿನಃ ಅಂಕಿ ಅಂಶದ ಆಧಾರದ ಮೇಲೆ ಪ್ರಗತಿಯನ್ನು ನಾನು ನೋಡಲು ಇಚ್ಚಿಸುವುದಿಲ್ಲ ಎಂದು ಎಚ್ಚರಿಸಿದರು.
ನಗರ ಹಾಗೂ ಗ್ರಾಮೀಣ ಪ್ರದೇಶದ 30 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಎನ್ಸಿಡಿ ಅಡಿಯಲ್ಲಿ ಬಿಪಿ, ಶುಗರ್ ಹಾಗೂ ಕ್ಯಾನ್ಸರ್ ತಪಾಸಣೆ ಮಾಡಿ ಬಿಪಿ ಹಾಗೂ ಶುಗರ್ ಕಾಯಿಲೆ ಪತ್ತೆ ಹಚ್ಚಿ ಪ್ರಾರಂಭ ಹಂತದಲ್ಲೇ ಚಿಕಿತ್ಸೆ ನೀಡುವುದರಿಂದ ಮುಂದೆ ಬರುವ ಮಾರಣಾಂತಿಕ ಕಾಯಿಲೆ ತಡೆಗಟ್ಟಬಹುದು. ಈ ಯೋಜನೆ ಕಾರ್ಯರೂಪಕ್ಕೆ ತರಲು ನಮ್ಮಲ್ಲಿ ಅನುದಾನ ಹಾಗೂ ಸಿಬ್ಬಂದಿ ಎಲ್ಲವೂ ಇದೆ, ಜಿಲ್ಲಾದ್ಯಂತ ಈ ಯೋಜನೆಗೆ ಸಚಿವರು ಚಾಲನೆ ನೀಡಲಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಸರ್ಟಿಫಿಕೇಟ್ ಪಡೆಯುವುದು ಹೇಗೆ ನನಗೂ ಗೊತ್ತು
ಶಿರಾ ಸಾರ್ವಜನಿಕ ಆಸ್ಪತ್ರೆಯಲ್ಲಿ ನೈರ್ಮಲ್ಯತೆ ಮತ್ತು ಸೇವೆಗೆ ಹೆಚ್ಚಿನ ಒತ್ತು ಕೊಡುವಂತೆ ಸಿಇಒ ಅವರು ವೈದ್ಯಾಧಿಕಾರಿಗೆ ಸಲಹೆ ನೀಡುತ್ತಿದ್ದ ವೇಳೆ ನಮ್ಮ ಆಸ್ಪತ್ರೆ ಎರಡು ಬಾರಿ ನ್ಯಾಷನಲ್ ಕ್ವಾಲಿಟಿ ಅಸಸ್ ಮೆಂಟ್ ಸರ್ಟಿಫಿಕೇಟ್ ಪಡೆದಿದೆ ಎಂದು ವೈದ್ಯಾಧಿಕಾರಿ ಡಾ.ಶ್ರೀನಾಥ್ ನುಡಿದರು, ಇದಕ್ಕೆ ಪ್ರತಿಕ್ರಿಯಿಸಿದ ಸಿಇಓ, ಸರ್ಟಿಫಿಕೇಟ್ ಪಡೆಯುವುದು ಹೇಗೆಂದು ನನಗೂ ಗೊತ್ತು, ನಿಮ್ಮ ಸರ್ಟಿಫಿಕೇಟ್ ನನಗೆ ಬೇಡ, ನಿಮ್ಮಿಂದ ಸೇವೆ ಪಡೆದ ಎಷ್ಟು ಜನ ನಿಮ್ಮ ಬಳಿ ಬಂದು ನೀವು ನೀಡಿದ ಸೇವೆಗೆ ಧನ್ಯವಾದ ಹೇಳಿದ್ದಾರೆ? ಕಾಗದದ ಸರ್ಟಿಫಿಕೇಟ್ ಅಲ್ಲ, ಜನರು ನೀಡುವ ಸರ್ಟಿಫಿಕೇಟ್ ಪಡೆದುಕೊಳ್ಳಿ ಎಂದು ತಿಳಿಸಿದರು.
ತಹಶೀಲ್ದಾರ್ ನಾಗವೇಣಿ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಅನಂತರಾಜ್, ಯೋಜನಾಧಿಕಾರಿ ರಂಗನಾಥ್, ಸಹಾಯಕ ನಿರ್ದೇಶಕ ವೆಂಕಟೇಶ್ ಹಾಗೂ ತಾಲೂಕು ಮಟ್ಟದ ಬಹುತೇಕ ಅಧಿಕಾರಿಗಳು ಹಾಜರಿದ್ದರು.
Comments are closed.