ತುರುವೇಕೆರೆ: ಮತ ಚಲಾಯಿಸಿಲ್ಲವೆಂಬ ಕಾರಣಕ್ಕೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಸುಧಾ ಎಂಬುವರು ಚುನಾವಣಾ ಕೊಠಡಿಯಲ್ಲಿ ಚಪ್ಪಲಿಯಲ್ಲಿ ಹೊಡೆದರು ಎಂದು ತುರುವೇಕೆರೆ ತಾಲೂಕಿನ ದಬ್ಬೇಘಟ್ಟ ಗ್ರಾಪಂ ಸದಸ್ಯ ಮಂಜುನಾಥ್ ಆರೋಪಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದಬ್ಬೇಘಟ್ಟ ಗ್ರಾಪಂ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ಚುನಾವಣೆ ದಿನಾಂಕ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿ ಗೂರಲಮಠ ಕ್ಷೇತ್ರದ ಛಾಯಾ ಈಶ್ವರ್ ಹಾಗೂ ಬೆನಕನಕೆರೆ ಕ್ಷೇತ್ರದ ಸುಧಾ ಮಹೇಶ್, ಉಪಾಧ್ಯಕ್ಷ ಸ್ಥಾನಕ್ಕೆ ಗಿರಿಜಾ ಹಾಗೂ ತಾಯಮ್ಮ ಸ್ಪರ್ಧಿಸಿದ್ದರು.
ಈ ಹಿನ್ನಲೆಯಲ್ಲಿ ಚುನಾವಣಾಧಿಕಾರಿಗಳು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮತದಾನ ಪ್ರಕ್ರಿಯೆಗೆ ಚಾಲನೆ ನೀಡಿದ್ದರು. ಮತ ಎಣಿಕೆ ವೇಳೆ ಛಾಯಾ ಈಶ್ವರ್ ಗೆಲುವು ಸಾಧಿಸಿದ್ದರು, ಪರಾಭವಗೊಂಡ ಸುಧಾ ಅವರು ನನ್ನನ್ನು ಎಲ್ಲ ಸದಸ್ಯರ ಸಮ್ಮುಖದಲ್ಲಿ ಚಪ್ಪಲಿಯಿಂದ ಹೊಡೆದರು. ಈ ವೇಳೆ ಸಹ ಸದಸ್ಯ ಕುಮಾರ್ ನನ್ನನ್ನು ಬಿಡಿಸಿಕೊಂಡರು, ಚಪ್ಪಲಿಯಲ್ಲಿ ಹೊಡೆತ ತಿಂದ ನನಗೆ ಮಾನಸಿಕವಾಗಿ ತುಂಬಾ ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮತ ಚಲಾಯಿಸಿಲ್ಲ ಎಂಬ ಕಾರಣಕ್ಕೆ ಚಪ್ಪಲಿಯಿಂದ ಹೊಡೆದ ಬೆನಕನಕೆರೆ ಸದಸ್ಯೆ ಸುಧಾ ಮಹೇಶ್ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡುವುದಾಗಿ ಸದಸ್ಯ ಮಂಜುನಾಥ್ ತಿಳಿಸಿದರು. ಈ ವೇಳೆ ಸದಸ್ಯ ಕುಮಾರ್, ಬಿಜೆಪಿ ಯುವ ಮುಖಂಡ ಮಹೇಶ್ ಇದ್ದರು.
Comments are closed.