ಗೃಹಲಕ್ಷ್ಮಿ ಯೋಜನೆ ಅನುಷ್ಠಾನಕ್ಕೆ ಕ್ರಮ ವಹಿಸಿ: ಡೀಸಿ

ಇಂದಿನಿಂದ ಯೋಜನೆ ಫಲ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ

135

Get real time updates directly on you device, subscribe now.


ತುಮಕೂರು: ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ರೂ.2000 ನೀಡುವ ಗೃಹಲಕ್ಷ್ಮಿ ಯೋಜನೆಯಡಿ ಜುಲೈ 20ರಿಂದ ಯೋಜನೆಯ ಸೌಲಭ್ಯಕ್ಕಾಗಿ ಸಾರ್ವಜನಿಕರು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದ್ದಾರೆ.

ಸಾರ್ವಜನಿಕರು ಅರ್ಜಿ ಸಲ್ಲಿಸಲು ಗ್ರಾಮ ಒನ್ ಕೇಂದ್ರ, ಬಾಪೂಜಿ ಸೇವಾ ಕೇಂದ್ರ, ಕರ್ನಾಟಕ ಒನ್ ಕೇಂದ್ರಗಳಲ್ಲಿ ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ನಗರ ಪ್ರದೇಶಗಳಲ್ಲಿ ವಾರ್ಡ್ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡುವ ಸಂಬಂಧ ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ.

ಗುರುತಿಸಲಾದ ನೋಂದಣಿ ಕೇಂದ್ರಗಳಲ್ಲಿ ಪ್ರಜಾ ಪ್ರತಿನಿಧಿಗಳನ್ನು ನೇಮಿಸಲಾಗುತ್ತಿದೆ. (ಒಬ್ಬ ಮಹಿಳೆ ಕಡ್ಡಾಯ) ಮತ್ತು ಸಾವಿರ ಜನಸಂಖ್ಯೆ ಮೀರಿದ ಗ್ರಾಮಗಳಲ್ಲಿ, ವಾರ್ಡ್ ಗಳಲ್ಲಿ ಪ್ರತಿ 500 ಹೆಚ್ಚುವರಿ ಜನಸಂಖ್ಯೆಗೆ ಒಬ್ಬರಂತೆ ಹೆಚ್ಚುವರಿ ಪ್ರಜಾ ಪ್ರತಿನಿಧಿಗಳನ್ನು ನೇಮಕ ಮಾಡಲಾಗುತ್ತದೆ. ಪ್ರಜಾ ಪ್ರತಿನಿಧಿಗಳ ನೇಮಕವನ್ನು ಜಿಲ್ಲಾ ಉಸ್ತುವಾರಿ ಸಚಿವರ ಅನುಮೋದನೆಯಂತೆ ಮಾಡಲಾಗುತ್ತಿದೆ ಹಾಗೂ ನೇಮಕವಾದ ಪ್ರಜಾ ಪ್ರತಿನಿಧಿಗಳು ತಮ್ಮ ವ್ಯಾಪ್ತಿಯ ಗ್ರಾಮ, ವಾರ್ಡ್ ಗಳಲ್ಲಿ ಮನೆ ಮನೆಗೆ ತೆರಳಿ ಫಲಾನುಭವಿಗಳ ಅರ್ಜಿ ನೋಂದಾಯಿಸುವ ಕೆಲಸ ಮಾಡುತ್ತಾರೆ. ಪ್ರಜಾಪ್ರತಿನಿಧಿಗಳು ಈ ಸೇವೆಯನ್ನು ಸ್ವಯಂ ಪ್ರೇರಣೆಯಿಂದ ಮಾಡಬೇಕಿದ್ದು, ಅವರಿಗೆ ಯಾವುದೇ ಶುಲ್ಕ ಪಾವತಿ ಮಾಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಪ್ರಜಾ ಪ್ರತಿನಿಧಿಗಳನ್ನು ನೇಮಕ ಸಂಬಂಧ ಪಟ್ಟಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಿಂದ ಅನುಮೋದನೆ ಪಡೆದು ಅವರ ಮಾಹಿತಿಯನ್ನು ಜಿಲ್ಲಾಧಿಕಾರಿಗಳ ಕಚೇರಿಯಿಂದ ನೋಂದಣಿ ಮಾಡಿ ಲಾಗಿನ್ ಐಡಿ ಪಡೆಯಲು ತಿಳಿಸಿರುತ್ತಾರೆ. ಹಾಗೆಯೇ ನೇಮಕಗೊಂಡ ಪ್ರಜಾ ಪ್ರತಿನಿಧಿಗಳಿಗೆ ಗುರುತಿನ ಚೀಟಿ ಮತ್ತು ಅವರಿಗೆ ತರಬೇತಿ ನೀಡುವ ಸಂಬಂಧ ಅಗತ್ಯ ಕ್ರಮವನ್ನು ತಹಶೀಲ್ದಾರರು, ಕಾರ್ಯ ನಿರ್ವಾಹಕ ಅಧಿಕಾರಿಗಳು, ತಾಪಂ, ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ವಹಿಸುವರು.

ಗುರುತಿಸಲಾದ ನೋಂದಣಿ ಕೇಂದ್ರಗಳಲ್ಲಿ ಪ್ರತಿ ದಿನ 60 ಅರ್ಜಿಗಳನ್ನು ಸಲ್ಲಿಸಲು ಅವಕಾಶವಿರುತ್ತದೆ. (ಬೆಳಗಿನ ಅವಧಿಗೆ 30 ಅರ್ಜಿ ಮತ್ತು ಮಧ್ಯಾಹ್ನ ಅವಧಿಗೆ 30 ಅರ್ಜಿ) ಹಾಗೂ ಸಾರ್ವಜನಿಕರು ತಾವು ಯಾವ ನೋಂದಣಿ ಕೇಂದ್ರದಲ್ಲಿ ಮತ್ತು ಯಾವ ದಿನಾಂಕದಂದು ಅರ್ಜಿ ಸಲ್ಲಿಸಬೇಕು ಎಂಬುದರ ಬಗ್ಗೆ ಆಧಾರ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಮುಂಚಿತವಾಗಿ ಎಸ್ಎಂಎಸ್ ಸಂದೇಶದ ಮೂಲಕ ಮಾಹಿತಿ ನೀಡಲಾಗುವುದು. ಉಚಿತ ಸಹಾಯವಾಣಿ ಸಂಖ್ಯೆ 1902 ಮೂಲಕವು ತಮ್ಮ ಸಮಸ್ಯೆ ಪರಿಹಾರ ಮಾಡಿಕೊಳ್ಳಬಹುದಾಗಿದೆ. 8147500500ಗೆ ಎಸ್ಎಂಎಸ್ ಮಾಡುವ ಮೂಲಕ ಪಡಿತರ ಚೀಟಿ ಸಂಖ್ಯೆ ನಮೂದಿಸಿ ನೋಂದಣಿ ದಿನಾಂಕವನ್ನು ಹಾಗೂ ನೋಂದಣಿ ಕೇಂದ್ರದ ಮಾಹಿತಿ ಪಡೆಯಬಹುದು ಹಾಗೂ ಎಲ್ಲಾ ತಾಲ್ಲೂಕುಗಳಲ್ಲಿ ಶಿಶು ಅಭಿವೃದ್ಧಿ ಯೋಜನಾ ಕಚೇರಿಗಳಲ್ಲಿ ಮತ್ತು ಉಪ ನಿರ್ದೇಶಕರ ಕಚೇರಿಯಲ್ಲಿ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದೆ.

ಅರ್ಜಿ ಸಲ್ಲಿಕೆ ಪ್ರಾರಂಭದ ದಿನಗಳು ನೋಂದಣಿ ಕೇಂದ್ರಗಳಲ್ಲಿ ಹೆಚ್ಚು ಜನಸಂದಣಿ ಉಂಟಾಗುವ ಸಾಧ್ಯತೆ ಇರುವ ಪ್ರಯುಕ್ತ ಸದರಿ ಕೇಂದ್ರಗಳಲ್ಲಿ ಪೊಲೀಸ್ ಇಲಾಖೆಯಿಂದ ಅಗತ್ಯ ಪೊಲೀಸ್ ಸಿಬ್ಬಂದಿಯನ್ನು ಕಡ್ಡಾಯವಾಗಿ ನಿಯೋಜಿಸಲಾಗುವುದು. ನೋಂದಣಿ ಕೇಂದ್ರಗಳಲ್ಲಿ ನೋಂದಣಿ ಪ್ರಕ್ರಿಯೆ ಭಾನುವಾರದ ರಜೆ ಹೊರತುಪಡಿಸಿ ಉಳಿದ ಎಲ್ಲಾ ದಿನಗಳಲ್ಲಿಯೂ ನಡೆಯುವುದರಿಂದ ನೋಂದಣಿ ಕೇಂದ್ರಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪವರ್ ಬ್ಯಾಕ್ ಅಪ್, ಇಂಟರ್ ನೆಟ್ ವ್ಯವಸ್ಥೆ, ಕಂಪ್ಯೂಟರ್ ಪ್ರಿಂಟರ್ಗಳ ವ್ಯವಸ್ಥೆ ಮಾಡಿಕೊಳ್ಳುವುದು ಹಾಗೂ ವಿದ್ಯುತ್ ಶಕ್ತಿ ವಿತರಣೆಯಲ್ಲಿ ಯಾವುದೇ ರೀತಿಯ ವ್ಯತ್ಯಯ ಉಂಟಾಗದಂತೆ ಕ್ರಮ ವಹಿಸಲಾಗುವುದು.

ನೋಂದಣಿ ಪ್ರಕ್ರಿಯೆಯ ಮೇಲು ಉಸ್ತುವಾರಿಯನ್ನು ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲ್ಲೂಕು ಮೇಲು ಉಸ್ತುವಾರಿಯನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಕರ್ನಾಟಕ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಒನ್ ಕೇಂದ್ರಗಳ ಮೇಲು ಉಸ್ತುವಾರಿಯನ್ನು ಆಯುಕ್ತರು, ನಗರಸಭೆ, ಪುರಸಭೆ ಹಾಗೂ ಬಾಪೂಜಿ ಸೇವಾ ಕೇಂದ್ರಗಳಿಗೆ ಸಂಬಂಧಪಟ್ಟ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮ ಒನ್ ಕೇಂದ್ರಗಳಿಗೆ ಗ್ರಾಮ ಆಡಳಿತಾಧಿಕಾರಿಗಳು ಹಾಗೂ ಸಂಬಂಧಪಟ್ಟ ಕಂದಾಯ ನಿರೀಕ್ಷಕರು ಉಸ್ತುವಾರಿ ವಹಿಸಿ ಗೃಹಲಕ್ಷ್ಮಿ ಯೋಜನೆ ಯಶಸ್ವಿಗೊಳಿಸುವುದು, ಸದರಿ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ಹಾಗೂ ಅವರಲ್ಲಿ ಉಂಟಾಗುವ ಗೊಂದಲ ನಿವಾರಿಸುವ ಸಂಬಂಧ ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳು ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಲು ಹಾಗೂ ಸದರಿ ಕಾರ್ಯದಲ್ಲಿ ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಮಹಿಳಾ ಮೇಲ್ವಿಚಾರಕಿಯರು ಭಾಗವಹಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!