ಕುಣಿಗಲ್ ಪುರಸಭೆಗೆ 36.90 ಲಕ್ಷ ಉಳಿತಾಯ ಬಜೆಟ್

ಹಲವು ವಲಯಗಳಿಗೆ ಸಿಗದ ಆದ್ಯತೆ : ಸದಸ್ಯರ ಕಿಡಿ

343

Get real time updates directly on you device, subscribe now.

ಕುಣಿಗಲ್: ಕುಣಿಗಲ್ ಪುರಸಭೆಗೆ 2021- 22ನೇ ಸಾಲಿಗೆ ಹಲವು ಆಕ್ಷೇಪಗಳ ನಡುವೆ ಸ್ಥಾಯಿ ಸಮಿತಿ ಅಧ್ಯಕ್ಷ ಸಮೀವುಲ್ಲಾ 36.90 ಲಕ್ಷರೂ. ಉಳಿತಾಯ ಬಜೆಟ್ ಮಂಡಿಸಿದರು.

ಮಂಗಳವಾರ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷ ನಾಗೇಂದ್ರ ಅಧ್ಯಕ್ಷತೆಯಲ್ಲಿ 2021- 22ನೇಸಾಲಿನ ಬಜೆಟ್ ಮಂಡನೆ ಸಭೆ ನಡೆಯಿತು. ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಸಮೀವುಲ್ಲಾ ಒಟ್ಟಾರೆ 31,40,85,138 ರೂ. ನಿರೀಕ್ಷಿತ ಆದಾಯ ಇದ್ದು ಈ ಪೈಕಿ 31,03,95,000 ರೂ.ನಿರೀಕ್ಷಿತ ವೆಚ್ಚ ಕಳೆದು 36,90,138ರೂ.ಉಳಿತಾಯ ಬಜೆಟ್ ಮಂಡಿಸಿದರು.

ಬಜೆಟ್‌ಮೇಲೆ ನಡೆದ ಚರ್ಚೆಯಲ್ಲಿ ಸದಸ್ಯರಂಗಸ್ವಾಮಿ, ಹಿಂದಿನ ಸಾಲಿನ ಬಜೆಟ್‌ನಲ್ಲಿ ಬಯಲು ರಂಗಮಂದಿರ, ಶವಸಾಗಾಣೆ ವಾಹನ ಸೇರಿದಂತೆ ವಿವಿಧ ಅನುದಾನ ವೆಚ್ಚ ಮಾಡಿಲ್ಲ, ಈ ಬಾರಿಯ ಬಜೆಟ್‌ನಲ್ಲಿ ಹಿಂಬಾಕಿಯಲ್ಲಿ ಅವನ್ನು ಸ್ಪಷ್ಟವಾಗಿ ನಮೂದು ಮಾಡಿಲ್ಲ, ಬರಬೇಕಾದ ಸಂಪನ್ಮೂಲ ಕ್ರೂಡೀಕರಣಕ್ಕೆ ಹೆಚ್ಚು ಒತ್ತು ನೀಡಿಲ್ಲ, ಡೆ ನಲ್‌ಮ್‌ ಯೋಜನೆಯಲ್ಲಿ, ವಸತಿ ಯೋಜನೆಯಲ್ಲಿ ಫಲಾನುಭವಿಗಳು ಹೆಚ್ಚಿದ್ದು ಅವರಿಗೆ ನೀಡಬೇಕಾದ ಮೊತ್ತ ಕಡಿಮೆ ಮೀಸಲು ಇಡುವ ಮೂಲಕ ಅಸಮತೋಲನದಿಂದ ಕೂಡಿದೆ ಎಂದರೆ, ಸದಸ್ಯ ಕೃಷ್ಣ ಆಸ್ತಿ ತೆರಿಗೆ ಪದ್ಧತಿಯಿಂದ 180 ಲಕ್ಷ ರೂ ಆದಾಯ ತೋರಿಸಿದ್ದಾರೆ. ಆದರೆ ಕುದುರೆಫಾರಂ ಸುಮಾರು 180 ಲಕ್ಷ ರೂ. ತೆರಿಗೆ ಬಾಕಿ ಉಳಿಸಿಕೊಂಡಿದೆ, ಕುಡಿಯುವ ನೀರಿನ ತೆರಿಗೆ 80 ಲಕ್ಷ ಬಾಕಿ ಇದೆ. ಇದನ್ನು ಸೇರಿಸಿಲ್ಲ, ಹೀಗಾದರೆ ಇದು ಕಾಟಾಚಾರಕ್ಕೆ ಬಜೆಟ್ ಮಂಡನೆಯೆ ಎಂದು ಪ್ರಶ್ನಿಸಿದರು.

ಸದಸ್ಯ ಕೋಟೆನಾಗಣ್ಣ, 14, 15ನೇ ವಾರ್ಡ್‌ನಲ್ಲಿ ಬಹುತೇಕ ಮನೆಗಳು ಈಗ ವಾಣಿಜ್ಯ ಉದ್ದೇಶಕ್ಕೆಂದು ಅಂಗಡಿಗಳಾಗಿವೆ,  ಪುರಸಭೆ ದಾಖಲೆಯಲ್ಲಿ ವಸತಿ ಎಂದು ನಮೂದಾಗಿದೆ, ಇದರಿಂದ ಪುರಸಭೆ ಆದಾಯಕ್ಕೆ ಖೊತಾ ಆಗುತ್ತದೆ,  ಕಂದಾಯಾಧಿಕಾರಿಗಳು ಏನು ಮಾಡುತ್ತಿದ್ದಾರೆ, ಪುರಸಭೆಗೆ ಆದಾಯ ಕ್ರೂಡೀಕರಣ ಹೇಗೆ, ಇವೆಲ್ಲ ಸರಿಪಡಿಸದೆ, ಪೂರ್ವ ಭಾವಿಯಾಗಿ ಚರ್ಚಿಸದೆ ಬಜೆಟ್ ಮಂಡನೆ ಮಾಡಿದರೆ ಹೇಗೆ ಎಂದರು.

ಸದಸ್ಯ ಅರುಣಕುಮಾರ್ ಮಾತನಾಡಿ, ಕುದುರೆ ಫಾರಂನ ಗುತ್ತಿಗೆ ಅವಧಿ ಮುಗಿಯುತ್ತಾ ಬಂದಿದೆ, ಆದರೆ ಪುರಸಭೆಗೆ ಬರಬೇಕಾದ ಸುಮಾರು 1.60 ಕೋಟಿ ತೆರಿಗೆ ಕಟ್ಟಿಸಿಕೊಂಡಿಲ್ಲ, ಬಡಜನತೆ ಯಾರಾದರೂ ಕಟ್ಟಿಲ್ಲ ಎಂದರೆ ಅವರ ಮನೆ ಮುಂದೆ ತಮಟೆ ಹೊಡಿತೀರಾ, ಕರೆಂಟ್, ನೀರು ಕಟ್ ಮಾಡ್ತೀರಾ, ಅವರಿಗೆ ಏನು ಮಾಡ್ತೀರಾ, ವಸೂಲಿ ನೆಪದಲ್ಲಿ ಫಾರಂನೊಳಗೆ ಹೋಗಿ ಫೋಟೋ ಸೆಶನ್ ಮಾಡಿಕೊಂಡು ಬಂದಿದ್ದು ಸಾಕು, ಪ್ರವೇಶ ದ್ವಾರಕ್ಕೆ ಟ್ರಂಚ್ ಹಾಕುವುದು, ಕಸ ಸುರಿಯುವುದಾದರೂ ಮಾಡಿ ಬರಬೇಕಾದ ತೆರಿಗೆ ವಸೂಲಿಗೆ ಕ್ರಮಕೈಗೊಳ್ಳಿ ಎಂದರು. ತುರ್ತು ಕಾರ್ಯ ನಿಮಿತ್ತ ಅಧ್ಯಕ್ಷ ಸಭೆಯಿಂದ ಹೊರನಡೆದು ಉಪಾಧ್ಯಕ್ಷೆ ಮಂಜುಳಾ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯಾಧಿಕಾರಿ ರವಿಕುಮಾರ್, ಬಜೆಟ್‌ನಲ್ಲಿನ ಹೊಸ ಸೇರ್ಪಡೆಗಳನ್ನು ಹೊಂದಾಣಿಕೆ ಮಾಡಿಕೊಂಡು ಸೇರಿಸಿಕೊಳ್ಳಲಾಗುವುದು, ಪುರಸಭೆಗೆ ಬಾಕಿ ಇರುವ ತೆರಿಗೆ ವಸೂಲಿಗೆ ಕ್ರಮಕೈಗೊಳ್ಳಲಾಗುವುದು, ತಹಶೀಲ್ದಾರ್ ಕಚೇರಿ ಆವರಣದಲ್ಲಿನ ಶೌಚಾಲಯ, ವಿದ್ಯುತ್ ಚಿತಾಗಾರ ಪ್ರಾರಂಭ ಮಾಡುವುದರ ಜೊತೆಯಲ್ಲಿ ಶವಸಾಗಾಣೆ ವಾಹನ ಇನ್ನೆರಡು ತಿಂಗಳಲ್ಲೆ ಜಾರಿಗೊಳಿಸಲಾಗುವುದು ಎಂದರು. ವ್ಯವಸ್ಥಾಪಕ ಜಯಣ್ಣ, ಅಕೌಂಟೆಂಟ್ ರೂಪಾ ಇತರರು ಇದ್ದರು. ಹೊಸದಾಗಿ ನಾಮನಿರ್ದೇಶನಗೊಂಡ ನಾಮಿನಿ ಸದಸ್ಯರಾದ ಗೋಪಿ, ವೆಂಕಟೇಶ್, ಶಿವಕುಮಾರ, ನಾಗೇಶ್, ಗೌರಮ್ಮ ಇವರನ್ನು ಸನ್ಮಾನಿಸುವ ಮೂಲಕ ಅಧ್ಯಕ್ಷರು ಸ್ವಾಗತ ಕೋರಿದರು.

Get real time updates directly on you device, subscribe now.

Comments are closed.

error: Content is protected !!