ತುಮಕೂರು: ಇತಿಹಾಸ ಪ್ರಸಿದ್ದ ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಯವರಿಗೆ 61ನೇ ಜನ್ಮದಿನದ ಸಂಭ್ರಮ, ಶ್ರೀಗಳ ಜನ್ಮವರ್ಧಂತಿ ಹಿನ್ನೆಲೆಯಲ್ಲಿ ಶ್ರೀಮಠದಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜಾ ಕೈಂಕರ್ಯ ನೆರವೇರಿದ್ದು, ಕಿರಿಯ ಶ್ರೀಗಳಾದ ಶಿವಸಿದ್ದೇಶ್ವರ ಸ್ವಾಮೀಜಿ ಸಿದ್ದಲಿಂಗ ಸ್ವಾಮೀಜಿ ಪಾದಪೂಜೆ ನೆರವೇರಿಸಿ ಭಕ್ತಿ ಸಮರ್ಪಿಸಿದರು.
ಎಂದಿನಂತೆ ಶ್ರೀಗಳು ಮುಂಜಾನೆಯೇ ಇಷ್ಟಲಿಂಗ ಪೂಜೆ ನೆರವೇರಿಸಿದರು, ನಂತರ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಯವರ ಗದ್ದುಗೆಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ಬೆಳಗ್ಗೆ 6 ಗಂಟೆಗೆ ಹಳೇ ಮಠದಲ್ಲಿ ಶಿವಸಿದ್ದೇಶ್ವರ ಸ್ವಾಮೀಜಿಯವರು ಶ್ರೀಗಳ ಪಾದಪೂಜೆ ನೆರವೇರಿಸಿ ಆಶೀರ್ವಾದ ಪಡೆದರು.
ಶ್ರೀಗಳ ಜನ್ಮವರ್ಧಂತಿ ಹಿನ್ನೆಲೆಯಲ್ಲಿ ವಿವಿಧ ಮಠಾಧೀಶರು ಸಹ ಶ್ರೀಗಳ ಪಾದಪೂಜೆ ನೆರವೇರಿಸಿ ಪುಷ್ಪವೃಷ್ಟಿ ಸುರಿಸಿ ಆಶೀರ್ವಾದ ಪಡೆದು ಭಕ್ತಿ ಸಮರ್ಪಿಸಿದರು.
ಸಂಸದರಾದ ಜಿ.ಎಸ್. ಬಸವರಾಜು, ಅಣ್ಣಾ ಸಾಹೇಬ್ ಜೊಲ್ಲೆ, ಶಿವಪ್ರಸಾದ್, ರಾಜಶೇಖರ್ ಸೇರಿದಂತೆ ಅನೇಕ ಗಣ್ಯರು, ಭಕ್ತಾದಿಗಳು ಶ್ರೀಮಠಕ್ಕೆ ತೆರಳಿ ಶ್ರೀಗಳ ಭೇಟಿಯಾಗಿ ಹುಟ್ಟುಹಬ್ಬದ ಶುಭ ಕೋರಿ ಆಶೀರ್ವಾದ ಪಡೆದರು.
ಶ್ರೀಮಠದಲ್ಲಿ ಯಾವುದೇ ರೀತಿಯ ಆಡಂಬರದ ಆಚರಣೆ ನಡೆಸದೆ ಧಾರ್ಮಿಕ ವಿಧಿ ವಿಧಾನಗಳಿಂದಷ್ಟೇ ಶ್ರೀಗಳ ಜನ್ಮವರ್ಧಂತಿ ಆಚರಿಸಿದ್ದು ವಿಶೇಷವಾಗಿತ್ತು. ಶ್ರೀಮಠದ ಮಕ್ಕಳು ಶ್ರೀಗಳ ಜನ್ಮವರ್ಧಂತಿ ಪ್ರಯುಕ್ತ ಸರದಿಯ ಸಾಲಿನಲ್ಲಿ ನಿಂತು ಆಶೀರ್ವಾದ ಪಡೆದರು.
ಶನಿವಾರ ಬೆಳಗ್ಗೆಯಿಂದಲೇ ಮಠಕ್ಕೆ ಭಕ್ತಾದಿಗಳು ಆಗಮಿಸಿ ಹಿರಿಯ ಶ್ರೀಗಳ ಗದ್ದುಗೆ ದರ್ಶನ ಪಡೆದು, ನಂತರ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿದ್ದವು.
Comments are closed.