ಮಣಿಪುರದಲ್ಲಿನ ಪೈಶಾಚಿಕ ಕೃತ್ಯ ಖಂಡಿಸಿ ಪ್ರತಿಭಟನೆ

121

Get real time updates directly on you device, subscribe now.


ತುಮಕೂರು: ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆದಿರುವ ಪೈಶಾಚಿಕ ಕೃತ್ಯ ಖಂಡಿಸಿ ತುಮಕೂರು ನಗರದಲ್ಲಿ ವಿವಿಧ ಮಹಿಳಾ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ವಿವಿಧ ಸಂಘಟನೆಗಳ ಪ್ರತಿನಿಧಿಗಳು ನಗರದ ಟೌನ್ ಹಾಲ್ ಬಳಿ ಸಮಾವೇಶಗೊಂಡು ಮಹಿಳೆಯರನ್ನು ಅನಾಗರೀಕವಾಗಿ ನಡೆಸಿಕೊಂಡಿರುವ ಕೃತ್ಯದ ವಿರುದ್ಧ ಘೋಷಣೆ ಕೂಗಿ ಆರೋಪಿಗಳ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳದೇ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಅಪಾರ ಸಂಖ್ಯೆಯಲ್ಲಿದ್ದ ಜನರ ಗುಂಪು ಮಹಿಳೆಯರನ್ನು ಬೆತ್ತಲೆಗೊಳಿಸಿ ರಸ್ತೆಯಲ್ಲಿ ಕರೆದುಕೊಂಡು ಹೋಗಿರುವುದು, ಅವರ ಮೇಲೆ ಹಲ್ಲೆ ಮಾಡಿರುವುದು, ಕೆಲವರ ಮೇಲೆ ಅತ್ಯಾಚಾರಗೈದು ಕೊಲೆ ಮಾಡಿರುವ ಘಟನೆ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ವಿಷಯ. ಇದನ್ನು ಪ್ರತಿಯೊಬ್ಬರೂ ಖಂಡಿಸಲೇಬೇಕು, ದುರಂತವೆಂದರೆ ಘಟನೆ ನಡೆದು ಬಹಳ ದಿನಗಳಾದರೂ ಕ್ರಮ ಕೈಗೊಳ್ಳದೆ ಸಮಾಜಿಕ ಜಾಲತಾಣದಲ್ಲಿ ವಿಷಯ ಹೊರ ಬಂದಾಗ ಮಾತ್ರವೇ ಕ್ರಮಕ್ಕೆ ಮುಂದಾಗಿರುವ ಘಟನೆ ಅತ್ಯಂತ ನಾಚಿಕೆಗೇಡಿನ ವಿಷಯ. ಇಡೀ ವಿಶ್ವದ ಮುಂದೆ ಭಾರತದ ಗೌರವ ಹರಾಜಾಗುವಂತಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಘಟನೆ ನಡೆದು ತಿಂಗಳು ಉರುಳುತ್ತಿದ್ದರೂ ಅಲ್ಲಿನ ಸರ್ಕಾರವಾಗಲಿ, ಕೇಂದ್ರ ಸರ್ಕಾರವಾಗಲಿ ಕ್ರಮ ಕೈಗೊಳ್ಳದೇ ಇರುವುದು ಇಂತಹ ದೌರ್ಜನ್ಯ ಪ್ರಕರಣ ಉಲ್ಬಣಗೊಳ್ಳಲು ಕಾರಣವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪೈಶಾಚಿಕ ಕೃತ್ಯ ಬಹಿರಂಗವಾದ ಕೂಡಲೇ ಸುಪ್ರೀಂಕೋರ್ಟ್ ತನ್ನ ಸ್ವಯಂ ಅಧಿಕಾರ ಬಳಸಿ ಸರ್ಕಾರಕ್ಕೆ ಚಾಟಿ ಬೀಸಿದೆ, ಬಹುಶಃ ಸುಪ್ರೀಂಕೋರ್ಟ್ ಮಧ್ಯ ಪ್ರವೇಶ ಮಾಡದೆ ಹೋಗಿದ್ದರೆ ಈಗ ನಡೆದಿರುವ ಕ್ರಮಗಳು ಜರುಗುವ ಅನುಮಾನ ವ್ಯಕ್ತವಾಗುತ್ತಿದೆ. ಇಂತಹ ಪ್ರಕರಣ ಎಲ್ಲಿಯೇ ನಡೆಯಲಿ ಕೂಡಲೇ ಕ್ರಮ ಕೈಗೊಂಡರೆ ಮುಂದೆ ಆಗುವ ಅನಾಹುತ ತಪ್ಪಿಸಬಹುದು. ಇಂದು ಮಣಿಪುರದಲ್ಲಿ ನಡೆದಿರುವ ಘಟನೆ ನಾಳೆ ನಮ್ಮ ಊರಿನಲ್ಲಿಯೂ ನಡೆಯಬಹುದು, ಆದ ಕಾರಣ ಸರ್ಕಾರಗಳು ಇಂತಹ ಘಟನೆಗಳು ಮರುಕಳಿಸದಂತೆ ಮುಂಜಾಗ್ರತೆ ವಹಿಸಬೇಕು ಎಂದು ಆಗ್ರಹಿಸಿದರು.

ಬಹಳಷ್ಟು ಪ್ರಕರಣಗಳಲ್ಲಿ ಕೇಂದ್ರ ಸರ್ಕಾರ ದ್ವಂದ್ವ ನೀತಿ ಅನುಸರಿಸುತ್ತಿದೆ. ಬಲ್ಕಿಸ್ ಬಾನು ಪ್ರಕರಣದಲ್ಲಿ ಆರೋಪಿಗಳನ್ನು ಸರ್ಕಾರ ಬಿಡುಗಡೆಗೊಳಿಸಿದೆ. ಕುಸ್ತಿಪಟುಗಳ ಹೋರಾಟದಲ್ಲಿಯೂ ಸರ್ಕಾರ ಸರಿಯಾಗಿ ಸ್ಪಂದಿಸಲಿಲ್ಲ. ಮಹಿಳಾ ಕುಸ್ತಿಪಟುಗಳು ಹೋರಾಟಕ್ಕಿಳಿದರೂ ಪರಿಗಣನೆ ಮಾಡಲಿಲ್ಲ, ಬದಲಾಗಿ ಆರೋಪಿ ಸ್ಥಾನದಲ್ಲಿರುವ ಬ್ರಿಜ್ ಭೂಷಣ್ ಪರ ನಿಂತಿತು. ಇಂತಹ ಹಲವಾರು ಪ್ರಕರಣಗಳಲ್ಲಿ ಸರ್ಕಾರದ ತಾರತಮ್ಯ ನೀತಿ ಎದ್ದು ಕಾಣುತ್ತಿದೆ. ಇಂತಹ ಪ್ರಸಂಗಗಳಿಂದಲೇ ಪೈಶಾಚಿಕ ಘಟನೆಗಳು ಹೆಚ್ಚತೊಡಗಿವೆ ಎಂದು ಹರಿಹಾಯ್ದರು.

ಬಾ.ಹ.ರಮಾಕುಮಾರಿ, ಮಲ್ಲಿಕಾ ಬಸವರಾಜು, ಕಲ್ಯಾಣಿ, ಬಿ.ಸಿ.ಪ್ರವೇಣಿ, ಮಂಜುಳ ಗೋನವಾರ, ರಾಣಿ ಚಂದ್ರಶೇಖರ್, ಸೈಯದ್ ಮುಜೀಬ್, ಸುಬ್ರಹ್ಮಣ್ಯ, ಸಾ.ಚಿ.ರಾಜಕುಮಾರ್, ಡಾ.ಮುರಳೀಧರ್, ನರಸಿಂಹಮೂರ್ತಿ, ನಟರಾಜಪ್ಪ, ರಾಘವೇಂದ್ರ, ತಾಜುದ್ದೀನ್ ಷರೀಫ್, ಪಾರ್ವತಮ್ಮ, ಗಂಗಲಕ್ಷ್ಮಿ, ಗೀತಾ ನಾಗೇಶ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ, ಲೇಖಕಿಯರ ಸಂಘ, ಎಐಎಂಎಸ್, ವರದಕ್ಷಿಣೆ ವಿರೋಧಿ ವೇದಿಕೆ, ಸಿಐಟಿಯು, ಎಐಡಿಎಸ್ಒ, ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಮೊದಲಾದ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!