ಜ.5ಕ್ಕೆ ಮತದಾರರ ಅಂತಿಮ ಪಟ್ಟಿ ಪ್ರಕಟ: ಡೀಸಿ

ಹೌಸ್ ಟು ಹೌಸ್ ಸರ್ವೇ ಮೂಲಕ ಮತದಾರರ ಪಟ್ಟಿ ಪರಿಷ್ಕರಣೆ

120

Get real time updates directly on you device, subscribe now.


ತುಮಕೂರು: ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಗೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಈಗಾಗಲೇ ಆರಂಭಿಸಿರುವ ಹೌಸ್ ಟು ಹೌಸ್ ಸರ್ವೇ ಕಾರ್ಯ ಆಗಸ್ಟ್ 21ರ ವರೆಗೆ ಹಮ್ಮಿಕೊಂಡು 2024ರ ಜನವರಿ 5 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದರು.

ತಮ್ಮ ಕೊಠಡಿಯಲ್ಲಿ ಮಾನ್ಯತೆ ಪಡೆದ ರಾಷ್ಟ್ರೀಯ ಹಾಗೂ ರಾಜ್ಯ ರಾಜಕೀಯ ಪಕ್ಷಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಗಸ್ಟ್ 21ರ ವರೆಗೆ ನಡೆಯುವ ಹೌಸ್ ಟು ಹೌಸ್ ಸರ್ವೇ ಕಾರ್ಯದಲ್ಲಿ ಸಂಬಂಧಿಸಿದ ಮತಗಟ್ಟೆ ಮಟ್ಟದ ಅಧಿಕಾರಿಗಳು ತಮ್ಮ ಮತಗಟ್ಟೆ ವ್ಯಾಪ್ತಿಯಲ್ಲಿರುವ ಮನೆಗಳಿಗೆ ಖುದ್ದಾಗಿ ಭೇಟಿ ನೀಡಿ ಅರ್ಹ ಮತದಾರರ ಮಾಹಿತಿ ಸಂಗ್ರಹಿಸಲಿದ್ದಾರೆ. ಸರ್ವೇ ಕಾರ್ಯಕ್ಕಾಗಿ ಚುನಾವಣಾ ಆಯೋಗವು ಹೊಸದಾಗಿ ಬಿಎಲ್ಓ ಆ್ಯಪ್ ಸಿದ್ಧಪಡಿಸಿದ್ದು, ಬಿಎಲ್ಓಗಳು ಈ ಆ್ಯಪ್ ಮೂಲಕ ಮತದಾರರ ಮಾಹಿತಿ ಇಂದೀಕರಿಸಲಿದ್ದಾರೆ ಎಂದು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.

ಬಿಎಲ್ಓಗಳು ಮನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮನೆಯಲ್ಲಿ ವಾಸವಿರುವ ಒಟ್ಟು ಜನಸಂಖ್ಯೆ ನಮೂನೆ 6, 7, 8 ಅರ್ಜಿಗಳ ಸ್ವೀಕೃತಿ, ಯುವ ಮತದಾರರ ನೋಂದಣಿ, ವಿಕಲಚೇತನರು, ವಿಐಪಿ ಹಾಗೂ ವಿವಿಐಪಿ ಮತದಾರರು ಸೇರಿದಂತೆ ಅರ್ಹ ಮತದಾರರ ಮಾಹಿತಿ ಸಂಗ್ರಹಿಸಿ ನಿಗಧಿತ ನಮೂನೆಯಲ್ಲಿ ಬಿಎಲ್ಓ ಆ್ಯಪ್ ಮೂಲಕ ಭರ್ತಿ ಮಾಡಲಿದ್ದಾರೆ ಎಂದು ತಿಳಿಸಿದರಲ್ಲದೆ, ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಗೆ ಸಂಬಂಧಿಸಿದಂತೆ 2023ರ ಅಕ್ಟೋಬರ್ 1, 2024ರ ಜನವರಿ 1, ಏಪ್ರಿಲ್ 1 ಹಾಗೂ ಜುಲೈ 1ನ್ನು ಅರ್ಹತಾ ದಿನಾಂಕವನ್ನಾಗಿಟ್ಟುಕೊಂಡು 18 ವರ್ಷ ಪೂರ್ಣಗೊಳ್ಳಲಿರುವ ಭಾವಿ ಮತದಾರರಿಂದ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದರು.

ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಹೊರಡಿಸಿರುವ ವೇಳಾಪಟ್ಟಿಯನ್ವಯ ಬಿಎಲ್ಓಗಳು ಆಗಸ್ಟ್ 21 ರೊಳಗಾಗಿ ಹೌಸ್ ಟು ಹೌಸ್ ಸರ್ವೇ ಕಾರ್ಯ ಪೂರ್ಣಗೊಳಿಸಲಿದ್ದಾರೆ. ನಂತರ ಅಕ್ಟೋಬರ್ 17 ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುವುದು. ಕರಡು ಪಟ್ಟಿಗೆ ಸಂಬಂಧಿಸಿದಂತೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಮತದಾರರಿಗೆ ಅಕ್ಟೋಬರ್ 17 ರಿಂದ ನವೆಂಬರ್ 30ರ ವರೆಗೆ ಅವಕಾಶ ನೀಡಲಾಗುವುದು. ಈ ಅವಧಿಯಲ್ಲಿ 2 ಶನಿವಾರ ಮತ್ತು ಭಾನುವಾರಗಳಂದು ವಿಶೇಷ ಪ್ರಚಾರ ನಡೆಸಲಾಗುವುದು, ನಂತರ ಡಿಸೆಂಬರ್ 26 ರಂದು ಹಕ್ಕು ಮತ್ತು ಆಕ್ಷೇಪಣೆಗಳನ್ನು ವಿಲೇವಾರಿ ಮಾಡಲಾಗುವುದು ಎಂದು ತಿಳಿಸಿದರು.

ಮತದಾರರ ಪಟ್ಟಿ ಸಂಕ್ಷಿಪ್ತ ಪರಿಷ್ಕರಣೆ ಅವಧಿಯಲ್ಲಿ ಸಾರ್ವಜನಿಕರು ತಮ್ಮ ನಿವಾಸ ವ್ಯಾಪ್ತಿಯ ಮತಗಟ್ಟೆಯ ಮತದಾರರ ಪಟ್ಟಿಯಲ್ಲಿ ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರ ಹೆಸರು ನಮೂದಿಸಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬಹುದಾಗಿದೆ. ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆಗೆ ನಮೂನೆ 6, ಅನಿವಾಸಿ ಭಾರತೀಯರ ಹೆಸರು ಸೇರ್ಪಡೆಗೆ ನಮೂನೆ 6ಎ, ಹೆಸರು ತೆಗೆದು ಹಾಕಲು ನಮೂನೆ 7, ಮತದಾರರ ವಿಳಾಸ ಬದಲಾವಣೆ, ತಿದ್ದುಪಡಿಗೆ ನಮೂನೆ 8ರಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಹ ಮತದಾರರು ಈ ಅವಕಾಶವನ್ನು ತಪ್ಪದೆ ಬಳಸಿಕೊಳ್ಳಬೇಕೆಂದು ಮನವಿ ಮಾಡಿದರು.

ನೋಡಲ್ ಅಧಿಕಾರಿಗಳ ನೇಮಕ
ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಮುಂಬರುವ ಲೋಕಸಭಾ ಚುನಾವಣೆ ಸಂಬಂಧ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಅಗತ್ಯ ತರಬೇತಿ, ಮೇಲ್ವಿಚಾರಣೆ ಹಾಗೂ ಕಾರ್ಯ ತತ್ಪರತೆ ಹೆಚ್ಚಿಸಲು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು, ತಾಲ್ಲೂಕು ಮಟ್ಟದಲ್ಲಿ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಪುರಸಭೆ ಮುಖ್ಯ ಅಧಿಕಾರಿಗಳು ಹಾಗೂ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.

ನೇಮಕ ಮಾಡಲಾದ ನೋಡಲ್ ಅಧಿಕಾರಿಗಳು ತಮ್ಮ ಇಲಾಖಾ ವ್ಯಾಪ್ತಿಯ ಅಧೀನ ಬಿಎಲ್ಓ, ನೌಕರರ ಮೇಲ್ವಿಚಾರಣೆ ನಡೆಸಿ ಹೌಸ್ ಟು ಹೌಸ್ ಸರ್ವೇ, ರ್ಯಾಷನಲೈಸೇಷನ್ ಆಫ್ ಪೋಲಿಂಗ್ ಸ್ಟೇಷನ್ಸ್ ಸೇರಿದಂತೆ ಮತ್ತಿತರ ಚುನಾವಣಾ ವಿಷಯದಲ್ಲಿ ಅಗತ್ಯ ಮಾರ್ಗದರ್ಶನ ನೀಡಿ ಸಂಬಂಧಿಸಿದ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು. ಚುನಾವಣಾ ಕಾರ್ಯದಲ್ಲಿ ಯಾವುದೇ ನಿರ್ಲಕ್ಷ್ಯತೆಯನ್ನು ಗಂಭೀರವಾಗಿ ಪರಿಗಣಿಸಿ ನೋಡಲ್ ಅಧಿಕಾರಿಗಳನ್ನೇ ನೇರ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಚುನಾವಣಾ ತಹಶೀಲ್ದಾರ್ ಗೌರಮ್ಮ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!