ಕುಣಿಗಲ್: ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ಸವಲತ್ತು ಪಡೆಯಲು ಬರುವ ವಯೋವೃದ್ಧರಿಗೆ ಪ್ರತ್ಯೇಕ ಕೌಂಟರ್ ಅಥವಾ ಆದ್ಯತೆ ಮೇರೆಗೆ ಸೇವೆ ನೀಡುವತ್ತಾ ತಾಲೂಕು ಕಚೇರಿ ಸಿಬ್ಬಂದಿ ಗಮನ ಹರಿಸಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.
ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ಪಡಿತರ ಕಾರ್ಡ್ ನ ದಾಖಲೆಗಳು ಸುಸ್ಥಿತಿಯಲ್ಲಿರಬೇಕಿದೆ. ಗ್ರಾಮಾಂತರ ಪ್ರದೇಶದಲ್ಲಿ ಎಪ್ಪತ್ತು, ಎಂಭತ್ತು ವರ್ಷದ ವಯೋವೃದ್ಧರು ಇದ್ದು, ಇವರ ಬೆರಳಚ್ಚುಗಳು ವಯೋ ಸಹಜವಾಗಿ ಮೂಡದ ಕಾರಣ ಇವರಿಗೆ ರಿಯಾಯಿತಿ ನೀಡಿ ಪಡಿತರ ವಿತರಣೆ ಮಾಡಲಾಗುತ್ತಿತ್ತು. ಆದರೆ ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ಸದರಿ ವಯೋವೃದ್ಧರು ಇರುವ ಕಾರ್ಡ್ನಲ್ಲಿ ಯಜಮಾನಿ ನೋಂದಣಿ ಇಲ್ಲ, ಅಲ್ಲದೆ ಇಂತಹವರು ಯಾವುದೇ ಮೊಬೈಲ್ ನಂಬರ್ ಇಲ್ಲದೆ ಇರುವುದರಿಂದ ಇವರಿಗೆ ಸಂಬಂಧಿಸಿದಂತೆ ಪಡಿತರ ಕಾರ್ಡ್ ಸೇರಿದಂತೆ ಇತರೆ ತಿದ್ದುಪಡಿ ಮಾಡಿಸಲು ವಯೋವೃದ್ಧರು ಸಹ ತಾಲೂಕು ಕಚೇರಿಗೆ ಆಗಮಿಸಿ ಸಮಸ್ಯೆಗೆ ಎಲ್ಲಿ ಪರಿಹಾರ ಸಿಗುವುದೋ ಎಂದು ತಿಳಿಯದೆ ತಾಲೂಕು ಕಚೇರಿಯಲ್ಲಿ ಇರುವ ಆಧಾರ್ ಸೇವಾ ಕೇಂದ್ರದ ಮುಂದೆ ಕಾದು ಕುಳಿತುಕೊಳ್ಳುವಂತಾಗಿದೆ.
ಆಧಾರ್ ಸೇವಾ ಕೇಂದ್ರದ ಸಿಬ್ಬಂದಿ ಆಧಾರ್ ತಿದ್ದುಪಡಿ ಕಾರ್ಯದಲ್ಲಿ ತೊಡಗಿರುವ ಕಾರಣ ವಯೋವೃದ್ಧರಿಗೆ ಸೂಕ್ತ ಮಾಹಿತಿ ಇಲ್ಲದಂತಾಗಿದೆ. ಇನ್ನು ನೀಲತ್ತಹಳ್ಳಿಯ ಲಕ್ಷ್ಮಮ್ಮ ಎಂಬ ವೃದ್ಧೆ ಏಕಾಂಗಿಯಾಗಿದ್ದು ಈಕೆ ಪಡಿತರ ಕಾರ್ಡ್ ನಲ್ಲಿ ಬೆರಳಚ್ಚು ಇಲ್ಲ, ಅಲ್ಲದೆ ಮೊಬೈಲ್ ಸೇರಿದಂತೆ ಬ್ಯಾಂಕ್ ಖಾತೆ ಹೊಂದಿಲ್ಲ. ಈಕೆಯ ಸಂಬಂಧಿಕರು ಕರೆ ತಂದಿದ್ದು ಇಂತಹ ವೃದ್ಧೆಯರಿಗೆ ಏನು ಮಾಡಬೇಕೆಂದು ತಿಳಿಸುವ ಸೂಕ್ತ ಮಾಹಿತಿ ಕೌಂಟರ್ ಇಲ್ಲದೆ ಬೆಳಗಿನಿಂದ ಮಧ್ಯಾಹ್ನದ ವರೆಗೂ ತಾಲೂಕು ಕಚೇರಿ ಪಡಸಾಲೆಯಲ್ಲಿ ಕೂರುವ ಸ್ಥಿತಿ ಎದುರಾಗಿದೆ.
ಹಿರಿಯ ನಾಗರಿಕರಿಗೆ ಗೌರವ ನೀಡುವ ನಿಟ್ಟಿನಲ್ಲಿ ಮಾನವೀಯತೆ ಆದಾರದ ಹಿನ್ನೆಲೆಯಲ್ಲಿ ಇಂತಹ ವಯೋವೃದ್ಧರಿಗೆ ಸಮರ್ಪಕ ಮಾಹಿತಿ ನೀಡುವ ವ್ಯವಸ್ಥೆ ತಾಲೂಕು ಕಚೇರಿಯಲ್ಲಿ ಆಗಬೇಕಿದೆ, ಅಲ್ಲದೆ ಇಂತಹ ವಯೋವೃದ್ಧರ ಸಮಸ್ಯೆಯನ್ನು ಮೊದಲ ಆದ್ಯತೆ ಮೇರೆಗೆ ನಿವಾರಿಸುವ ಕೆಲಸ ಮಾಡಬೇಕಿದೆ ಎಂದು ನಾಗರಿಕರು ಒತ್ತಾಯಿಸಿದ್ದಾರೆ.
Comments are closed.