ತುಮಕೂರು: ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಜಿಟಿಜಿಟಿ ಮಳೆ ಸುರಿಯುತ್ತಿದ್ದು, ಜನರು ಕೊಂಚ ಪರದಾಡುವಂತಾಗಿದೆ. ಆದರೆ ತುಮಕೂರು ಮಲೆನಾಡಾಯ್ತಾ ಎಂಬ ವಾತಾವರಣ ಸೃಷ್ಟಿಯಾಗಿದೆ.
ಹಗಲು, ರಾತ್ರಿ ಎನ್ನದೆ ಬಿಟ್ಟು ಬಿಡದಂತೆ ಸುರಿಯುವತ್ತಿರುವ ಮಳೆಯಿಂದ ಜನರ ಕೆಲಸ ಕಾರ್ಯಗಳು ಕೆಡುವಂತಾಗಿದೆ.
ಇತ್ತ ಶಾಲಾ ಕಾಲೇಜಿಗೆ ಹೋಗಲು ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಪೋಷಕರು ತಮ್ಮ ಮಕ್ಕಳನ್ನು ಶಾಲೆ ಕಾಲೇಜುಗಳಿಗೆ ಬಿಡಲು ಪರದಾಡುವಂತಾಗಿದೆ.
ತುಮಕೂರು ನಗರದಲ್ಲಿ ಜಿಟಿಜಿಟಿ ಮಳೆಯಿಂದ ರಕ್ಷಣೆ ಪಡೆಯಲು ಎಲ್ಲಿ ನೋಡಿದರೂ ಛತ್ರಿಗಳು (ಕೊಡೆ) ರಾರಾಜಿಸುತ್ತಿವೆ. ರೈನ್ ಕೋಟ್ ತೊಟ್ಟು ಮಳೆಯಲ್ಲಿ ನೆನೆಯದಂತೆ ರಕ್ಷಣೆ ಪಡೆಯುತ್ತಿರುವುದು ಕಂಡು ಬಂತು.
ಮೂಲೆ ಸೇರಿದ್ದ ಛತ್ರಿಗಳು ಹೊರ ಬಂದಿವೆ, ಅಲ್ಮೇರಾದಲ್ಲಿ ಅಡಗಿದ್ದ ಜರ್ಕಿನ್ ಗಳು ಹೊರ ಬಂದಿವೆ, ಪೋಷಕರು ಛತ್ರಿ ಹಿಡಿದು ಮಕ್ಕಳಿಗೆ ಜರ್ಕಿನ್ ಹಾಕಿ ಶಾಲೆಗಳಿಗೆ ಬಿಡುತ್ತಿದ್ದ ದೃಶ್ತ ಸಾಮಾನ್ಯವಾಗಿತ್ತು. ಇನ್ನು ಯುಕೆಜಿ, ಎಲ್ ಕೆಜಿ ಮಕ್ಕಳಿಗೆ ಚಳಿಯಾಗಬಾರದು ಎಂದು ಸ್ಪೆಟರ್ ಹಾಕಿ, ತಲೆಗೆ ಟೋಪಿ, ಮಂಕಿ ಕ್ಯಾಪ್ ಹಾಕಿ ಸ್ಕೂಲ್ ಗೆ ಬಿದುತ್ತಿದ್ದ ದೃಶ್ಯವೂ ಕಂಡು ಬಂತು.
ಬಸ್, ಆಟೋದಲ್ಲಿ ಶಾಲೆಗಳಿಗೆ ಹೋಗುವ ಮಕ್ಕಳಿಗೆ ಯಾವುದೇ ತೊಂದರೆಯಾಗಿದ್ದು ಕಂಡು ಬರಲಿಲ್ಲ, ಆದರೆ ಪೋಷಕರೇ ಮಕ್ಕಳನ್ನು ದ್ವಿಚಕ್ರ ವಾಹನದಲ್ಲಿ ಬಿಡುವವರಿಗೆ ಮಳೆಯಿಂದ ತೊಂದರೆ ಅನುಭವಿಸುವಂತಾಯಿತು. ತಂದೆ ಗಾಡಿ ಹೋಡಿಸಿದ್ರೆ ತಾಯಿ ಛತ್ರಿ ಹಿಡುದು ಮಗುವನ್ನು ನೆನೆಯದಂತೆ ಮಧ್ಯದಲ್ಲಿ ಕೂರಿಸಿಕೊಂಡು ಶಾಲೆಗೆ ಬಿಡುವ ಪರದಾಟವೂ ಕಂಡು ಬಂತು.
ಅತ್ತ ಜೋರಾಗಿ ಬರದು, ಇತ್ತ ಸುಮ್ಮನೂ ಇರದು..
ಜಿಟಿಜಿಟಿ ಮಳೆಯಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳು, ಪೋಷಕರು ಮಾತ್ರ ಪರದಾಡಲಿಲ್ಲ, ಕಚೇರಿಗಳಿಗೆ ಹೋಗುವ ನೌಕರರು, ಪ್ಯಾಕ್ಟರಿ, ಮತ್ತಿತರ ಕಡೆ ಹೋಗುವ ಕೆಲಸಗಾರರು ಮಳೆಯಿಂದ ಸಮಸ್ಯೆ ಅನುಭವಿಸುವುದು ತಪ್ಪಲಿಲ್ಲ. ಅತ್ತ ಜೋರಾಗು ಬರಲ್ಲ, ಇತ್ತ ಸುಮ್ಮನೂ ಇರಲ್ಲ ಎಂಬ ಮಾತುಗಳು ಜನರ ಬಾಯಿಂದ ಬರುವ ಮೂಲಕ ಸಿನೆಮಾ ಹಾಡೊಂದು ನೆನಪಾಗುವಂತಾಯಿತು.
ಬೋಂಡ, ಬಜ್ಜಿಗೆ ಡಿಮ್ಯಾಂಡ್..
ಸುರಿಯುತ್ತಿರುವ ಸೋನೆ ಮಳೆಯಿಂದ ಮೈ ಕೊರೆಯುವ ಚಳಿ ಶುರುವಾಗಿದ್ದು, ಜನರು ಬಿಸಿಬಿಸಿ ಕುರುಕಲು ತಿಂಡಿಗಳಿಗೆ ಮೊರೆ ಹೋಗಿದ್ದಾರೆ. ಸಂಜೆಯಾಯಿತು ಎಂದರೆ ಛತ್ರಿ ಹಿಡಿದ ಜನರು ಬೋಂಡಾ, ಬಜ್ಜಿ ಅಂಗಡಿ ಮುಂದೆ ಜಮಾಯಿಸಿ ಮನೆಗೆ ಪಾರ್ಸೆಲ್ ತೆಗೆದುಕೊಂಡು ಹೋಗುತ್ತಿದ್ದಾರೆ. ಬೋಂಡಾ, ಬಜ್ಜಿ ಅಂಗಡಿಯವರಿಗೂ ಭರ್ಜರಿ ವ್ಯಾಪಾರ.
ಇದಿಷ್ಟೇ ಅಲ್ಲದೆ ಪಾಸ್ಟ್ ಫುಡ್ ಗೂ ಬೇಡಿಕೆ ಹೆಚ್ಚಾಗಿದೆ. ಗೋಬಿ, ನೂಡಲ್ಸ್, ಎಗ್ ರೈಸ್ ಸೇರಿದಂತೆ ವಿವಿಧ ಪಾಸ್ಟ್ ಫುಡ್ ಚಳಿಗೆ ಹೇಳಿ ಮಾಡಿಸಿದ ಡಿಶ್ ಆಗಿವೆ.
ಬಿತ್ತನೆ ಕಾರ್ಯ ಚುರುಕು..
ತುಮಕೂರು ಜಿಲ್ಲೆಯಲ್ಲಿ ಮುಂಗಾರು ಮಳೆ ತಡವಾಗಿ ಆಗಮಿಸಿದೆ. ಆದರೆ ಅಬ್ಬರಿಸಿ ಬೊಬ್ಬಿರಿಯುತ್ತಿಲ್ಲ. ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಜಮೀನಿಗಳು ತಂಪಾಗಿದ್ದು, ತುಮಕೂರು ಹೊರ ವಲಯ ಸೇರಿದಂತೆ ಜಿಲ್ಲೆಯ ವಿವಿಧೆಡೆ ರೈತರು ಬಿತ್ತನೆ ಆರಂಭಿಸಿದ್ದಾರೆ. ಹೊಲ ಹಸನು ಮಾಡಿ ರಾಗಿ, ಜೋಳ ಬಿತ್ತನೆ ಮಾಡುತ್ತಿದ್ದ ದೃಶ್ಯ ಕಂಡು ಬಂತು.
ಒಟ್ಟಾರೆ ಜಿಟಿಜಿಟಿ ಮಳೆ ಒಂದಷ್ಟು ಸಮಸ್ಯೆಗೆ ಕಾರಣವಾಗಿದೆಯಾದರೂ ರೈತರಿಗೆ ಭಿತ್ತನೆ ಮಾಡಲು ಅನುವು ಮಾಡಿಕೊಟ್ಟಿದೆ.
Comments are closed.