ಜನರ ಸೇವೆ ವೈದ್ಯರ ಪ್ರಥಮ ಆದ್ಯತೆಯಾಗಲಿ

ಜನರ ಜೀವನ ಬದಲಾಯಿಸುವ ಶಕ್ತಿ ವೈದ್ಯರಿಗಿದೆ: ಆರೋಗ್ಯ ಸಚಿವ

101

Get real time updates directly on you device, subscribe now.


ತುಮಕೂರು: ವೈದ್ಯಕೀಯ ಕ್ಷೇತ್ರ ಸೇವಾ ಕ್ಷೇತ್ರವಾಗಿದ್ದು, ಜನರ ಸೇವೆ ಮಾಡುವುದೇ ವೈದ್ಯರ ಪ್ರಥಮ ಆದ್ಯತೆಯಾಗಬೇಕು. ವೈದ್ಯರಲ್ಲಿ ಸೇವಾ ಮನಸ್ಥಿತಿ ಸದಾ ಜಾಗೃತವಾಗಿರಬೇಕು, ಜನರ ಜೀವನ ಬದಲಾಯಿಸುವ ಶಕ್ತಿ ವೈದ್ಯರಿಗೆ ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡುರಾವ್ ತಿಳಿಸಿದರು.

ನಗರದ ಶ್ರೀ ಸಿದ್ದಾರ್ಥ ವೈದ್ಯಕೀಯ ಮಹಾವಿದ್ಯಾಲಯದ ಸೂಪರ್ ಸ್ಪೆಷಾಲಿಟಿ ಹೊರ ರೋಗಿ ವಿಭಾಗ ಹಾಗೂ ಸಿಬ್ಬಂದಿ ವಸತಿ ಗೃಹ ಸಮುಚ್ಚಯದ ಉದ್ಘಾಟನೆ ನೆರವೇರಿಸಿ ನಂತರ ಗಂಗಾಧರಯ್ಯ ಸ್ಮಾರಕ ಭವನದಲ್ಲಿ ಏರ್ಪಡಿಸಲಾಗಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಯಾವುದೇ ಅಭಿವೃದ್ಧಿ ಹೊಂದುತ್ತಿರುವ ದೇಶಕ್ಕೆ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಬೆಳವಣಿಗೆ ಅತಿ ಮುಖ್ಯವಾಗುತ್ತದೆ. ಯಾವುದೇ ದೇಶದ ಅಥವಾ ರಾಜ್ಯದ ಆರೋಗ್ಯ ಮತ್ತು ಶೈಕ್ಷಣಿಕ ವಲಯ ಅತ್ಯುತ್ತಮವಾಗಿದ್ದಲ್ಲಿ ಆ ದೇಶವನ್ನು ಅಭಿವೃದ್ಧಿ ಹೊಂದಿದ ದೇಶವೆಂದು ಪರಿಗಣಿಸಬಹುದಾಗಿದೆ ಎಂದರು.

ಸಮಾಜದ ಸಾಮಾನ್ಯ ಮನುಷ್ಯನಿಗೂ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ವೈದ್ಯಕೀಯ ಚಿಕಿತ್ಸೆಗಳು ದೊರಕಬೇಕು ಎಂಬುವುದೇ ತಮ್ಮ ಆಶಯವಾಗಿದೆ ಎಂದ ಅವರು ವೈದ್ಯ ವೃತ್ತಿ ಅತ್ಯಂತ ಪವಿತ್ರ ಹಾಗೂ ಉತ್ತಮ ವೃತ್ತಿಯಾಗಿದೆ. ಜನರ ಸೇವೆಯೇ ದೇಶ ಸೇವೆಯಾಗಿದ್ದು ಈ ಮೂಲಕ ವೈದ್ಯರು ರಾಷ್ಟ್ರ ಸೇವೆಗೆ ತಮ್ಮನ್ನು ತಾವು ಮುಡುಪಾಗಿಡಬೇಕು. ಜನರ ಜೀವನದ ಮೇಲೆ ಪ್ರಭಾವ ಬೀರುವ, ಬದುಕನ್ನು ಬದಲಾಯಿಸುವ ಶಕ್ತಿ ವೈದ್ಯಕೀಯ ಲೋಕಕ್ಕಿದೆ. ಬಡ ರೋಗಿಗಳು ಆಸ್ಪತ್ರೆಗೆ ಭೇಟಿ ನೀಡಿದಾಗ ಅವರನ್ನು ನಗು ಮುಖದಿಂದ ಮಾತನಾಡಿಸಿ ಉತ್ತಮ ಚಿಕಿತ್ಸೆ ನೀಡಿ ಗುಣಮುಖರಾಗಿ ಕಳುಹಿಸುವ ನಿಟ್ಟಿನಲ್ಲಿ ವೈದ್ಯರು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.

ಶ್ರೀ ಸಿದ್ಧಾರ್ಥ ವೈದ್ಯಕೀಯ ಶಿಕ್ಷಣ ಸಂಸ್ಥೆ ಸಕಲ ಆಧುನಿಕ ವೈದ್ಯಕೀಯ ಸೌಲಭ್ಯ ಹಾಗೂ ಹಚ್ಚ ಹಸಿರಿನ ವಾತಾವರಣ ಒಳಗೊಂಡ ಅತ್ಯುತ್ತಮ ಸಂಸ್ಥೆಯಾಗಿದೆ ಎಂದು ಶ್ಲಾಸಿದರು.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ಗ್ರಾಮೀಣ ಭಾಗದ ಜನರಿಗೆ ಉತ್ತಮ ಆರೋಗ್ಯ ನೀಡುವಲ್ಲಿ ರಾಜ್ಯ ಸರ್ಕಾರ ಮುಂಚೂಣಿಯಲ್ಲಿದೆ. ರಾಜ್ಯದಲ್ಲಿ ಸುಮಾರು ಎರಡೂವರೆ ಸಾವಿರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು ಗ್ರಾಮೀಣ ಜನರಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಗ್ರಾಮೀಣ ಭಾಗದ ಜನರಿಗೆ ಗುಣಮಟ್ಟದ ಚಿಕಿತ್ಸೆಯನ್ನು ಕಡಿಮೆ ಖರ್ಚಿನಲ್ಲಿ ನೀಡುವುದು ಸಿದ್ಧಾರ್ಥ ಸಂಸ್ಥೆಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ವೈದ್ಯರು ಕೆಲಸ ನಿರ್ವಹಿಸುತ್ತಿದ್ದಾರೆ. ಗ್ರಾಮೀಣ ಭಾಗದ ಜನರು ಯಾವುದೇ ರೀತಿಯ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವುದಕ್ಕೆ ಬೆಂಗಳೂರು ಖಾಸಗಿ ಆಸ್ಪತ್ರೆಗೆ ಹೋದರೆ ಕನಿಷ್ಠ 5ಲಕ್ಷ ಹಣ ಖರ್ಚಾಗುತ್ತದೆ. ನಮ್ಮ ಸಂಸ್ಥೆಯಲ್ಲಿ ಕಡಿಮೆ ಖರ್ಚಿನಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಗುವುದು ಎಂದು ತಿಳಿಸಿದರು.
ಮಾಜಿ ಪ್ರಧಾನ ಮಂತ್ರಿಗಳಾದ ಡಾ.ಮನಮೋಹನ್ ಸಿಂಗ್ ಅವರು ರಾಷ್ಟ್ರೀಯ ಆರೋಗ್ಯ ನೀತಿ ಜಾರಿಗೆ ತಂದ ಪರಿಣಾಮ ಆರೋಗ್ಯ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆ ಆಗಿದ್ದು, ಪ್ರತಿ ಸಾವಿರ ಮಕ್ಕಳಿಗೆ 55 ರಷ್ಟಿದ್ದ ಶಿಶು ಮರಣ ಪ್ರಕರಣ 30ಕ್ಕೆ ಇಳಿದಿರುವುದು ಕ್ರಾಂತಿಕಾರಕ ಬೆಳವಣಿಗೆಯಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಿದ್ದಾರ್ಥ ವೈದ್ಯಕೀಯ ಮಹಾ ವಿದ್ಯಾಲಯದ ಉಪ ಕುಲಪತಿ ಕೆ.ವಿ.ಲಿಂಗೇಗೌಡ, ಕುಲಸಚಿವ ಎಂ.ಜೆಡ್.ಕುರಿಯಾನ್, ಪ್ರಾಂಶುಪಾಲರಾದ ಡಾ.ಮಲ್ಲಿಕಾರ್ಜುನ್ ಸಾನಿಕೊಪ್ಪ, ಸಿದ್ದಾರ್ಥ್, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪೂರ್ವಾಡ್ ಇತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!