ಪ್ಲಾಸ್ಟಿಕ್ ಬಳಕೆ ಪರಿಸರಕ್ಕೆ ಮಾರಕ ಎಚ್ಚರ

106

Get real time updates directly on you device, subscribe now.


ತುಮಕೂರು: ಪ್ಲಾಸ್ಟಿಕ್ ಬಳಕೆ ನಿಲ್ಲಿಸುವುದರಿಂದ ಆಗುವ ಅನುಕೂಲಗಳ ಬಗ್ಗೆ ಮಕ್ಕಳು ಪೋಷಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಮಹಾ ನಗರ ಪಾಲಿಕೆಯ 15ನೇ ವಾರ್ಡಿನ ಸದಸ್ಯೆ ಗಿರಿಜಾ ಧನಿಯಕುಮಾರ್ ತಿಳಿಸಿದ್ದಾರೆ.

ನಗರದ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿರುವ ಬಯಲು ರಂಗಮಂದಿರದಲ್ಲಿ ಜುಲೈ 28ರ ವಿಶ್ವ ಪರಿಸರ ಸಂರಕ್ಷಣಾ ದಿನ ಹಾಗೂ ಪ್ಲಾಸ್ಟಿಕ್ ಮುಕ್ತ ತುಮಕೂರು ಅಭಿಯಾನದ ಅಂಗವಾಗಿ ನಗರಪಾಲಿಕೆ 15ನೇ ವಾರ್ಡಿನ ಸದಸ್ಯರಾದ ಗಿರಿಜಾ ಧನಿಯಕುಮಾರ್, ಜೆ.ಡಿ.ಸ್ಕೂಲ್ ಅಫ್ ಅರ್ಟ್ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶಾಲಾ ಮಕ್ಕಳಿಗೆ ಸ್ಥಳದಲ್ಲಿಯೇ ಚಿತ್ರ ಬಿಡುಸುವ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿ, ಭವಿಷ್ಯ ಪ್ರಜೆಗಳಾದ ಮಕ್ಕಳು, ತಾವು ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿಕೊಳ್ಳು ವುದಲ್ಲದೆ, ಮನೆಯಲ್ಲಿ ತಮ್ಮ ತಂದೆ, ತಾಯಿಗಳಿಗೆ, ನೆರೆ, ಹೊರೆಯವರಿಗೂ ತಿಳಿಸುವ ಪರಿಸರ ರಾಯಭಾರಿಗಳಾಗಿ ಕೆಲಸ ಮಾಡಬೇಕೆಂದರು.

ಅತಿಯಾದ ಪ್ಲಾಸ್ಟಿಕ್ ಬಳಕೆ, ಅರಣ್ಯ ನಾಶದ ಪರಿಣಾಮವಾಗಿ ಇಂದು ವಿಪರೀತ ಪ್ರಾಕೃತಿಕ ವಿಕೋಪಗಳಿಗೆ ತುತ್ತಾಗತ್ತಿದ್ದೇವೆ. ಒಂದೆಡೆ ಅತಿಯಾದ ಮಳೆಯಾದರೆ, ಮತ್ತೊಂದಡೆ ಮಳೆಯೇ ಇಲ್ಲ, ಭೂಮಿಯಲ್ಲಿ ಕರಗದ, ಕೊಳೆಯದ, ಸುಡಲಿಕ್ಕೂ ಆಗದ ಪ್ಲಾಸ್ಟಿಕ್ ಗೆ ಬಿಸಿ ತಾಕಿದಾಗ ಅನೇಕ ವಿಷಕಾರಿ ರಾಸಾಯನಿಕಗಳು ಬಿಡುಗಡೆಯಾಗುತ್ತವೆ. ಪ್ಲಾಸ್ಟಿಕ್ ತಟ್ಟೆಯಲ್ಲಿ ಊಟ ಮಾಡುವುದು, ಪ್ಲಾಸ್ಟಿಕ್ ಲೋಟದಲ್ಲಿ ನೀರು, ಜ್ಯೂಸ್ ಕುಡಿಯುವುದು, ಪ್ಲಾಸ್ಟಿಕ್ ಡಬ್ಬಗಳಲ್ಲಿ ಊಟ ತೆಗೆದುಕೊಂಡು ಹೋಗುವುದರಿಂದ ಕ್ಯಾನ್ಸರ್, ದಮ್ಮು, ಅಸ್ತಮದಂತಹ ಕಾಯಿಲೆಗಳಿಗೆ ಜನರು ತುತ್ತಾಗುತಿದ್ದಾರೆ. ಹಾಗಾಗಿ ಇದರ ಬಳಕೆ ಕಡಿಮೆ ಮಾಡಿ, ಕ್ಯಾರಿ ಬ್ಯಾಗ್ ಬದಲು ಬಟ್ಟೆ ಬ್ಯಾಗ್, ಊಟವನ್ನು ಸ್ಟೀಲ್ ಡಬ್ಬಿಗಳಲ್ಲಿ ಊಟ ತೆಗೆದುಕೊಂಡು ಹೋಗುವುದನ್ನು ಅಭ್ಯಾಸ ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಬಾಲಾಜಿ ಪುಡ್ ವರ್ಲ್ಡ್ ನ ಸಂತೋಷ್ ಮಾತನಾಡಿ, ಕನ್ನಡ ಸೇನೆಯ ಅಧ್ಯಕ್ಷ ಧನಿಯಕುಮಾರ್ ಮತ್ತು ಗಿರಿಜಾ ಧನಿಯಕುಮಾರ್ ಅವರದ್ದು ಸೃಜನ ಶೀಲ ವ್ಯಕ್ತಿತ್ವ, ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ ಎಲ್ಲಾ ಕ್ಷೇತ್ರಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಭವಿಷ್ಯದ ಪ್ರಜೆಗಳಾದ ಮಕ್ಕಳಲ್ಲಿ ಪರಿಸರದ ಕಾಳಜಿ ಮೂಡಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಈ ಚಿತ್ರ ಕಲಾ ಸ್ಪರ್ಧೆ ಶ್ಲಾಘನೀಯ ಎಂದರು.

ನಗರಪಾಲಿಕೆ ಪರಿಸರ ಇಂಜಿನಿಯರ್ ಪೂರ್ಣೀಮ ಮಾತನಾಡಿ, ರಾಜ್ಯದಲ್ಲಿ ಪ್ಲಾಸ್ಟಿಕ್ ಮುಕ್ತ ಮಾಡಿ ಇಂದಿಗೆ ಒಂದು ವರ್ಷ ತುಂಬಿದೆ. ಹಾಗಾಗಿ ಜುಲೈ ತಿಂಗಳಲ್ಲಿ ತುಮಕೂರು ನಗರವನ್ನು ಪ್ಲಾಸ್ಟಿಕ್ ಮುಕ್ತ ನಗರವಾಗಿಸಲು ಪಾಲಿಕೆ ಮುಂದಾಗಿದೆ. ಇದಕ್ಕೆ 15ನೇ ವಾರ್ಡಿನ ಸದಸ್ಯರಾದ ಗಿರಿಜಾ ಧನಿಯಕುಮಾರ್ ಸಹಕಾರ ನೀಡಿದ್ದಾರೆ. ಜುಲೈ 28ರ ವಿಶ್ವ ಪರಿಸರ ಸಂರಕ್ಷಣಾ ದಿನದ ಅಂಗವಾಗಿ ಇಂತಹ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಮಕ್ಕಳಲ್ಲಿ ಮೊದಲು ಪರಿಸರದ ಬಗ್ಗೆ ಕಾಳಜಿ ಬಂದರೆ ಅವರಿಂದ ದೊಡ್ಡವರು ಕಲಿಯುತ್ತಾರೆ ಎಂಬುದು ನಮ್ಮ ಉದ್ದೇಶವಾಗಿದೆ. ಮನೆ ಮನೆ ಕಸ ಸಂಗ್ರಹಕ್ಕೆ ಬರುವ ವಾಹನಕ್ಕೆ ಹಸಿಕಸ, ಒಣ ಕಸ ವಿಂಗಡಿಸಿ ನೀಡುವುದು, ಪ್ಲಾಸ್ಟಿಕ್ ಬದಲಾಗಿ ಬಟ್ಟೆ ಬ್ಯಾಗ್, ಸ್ಟೀಲ್ ಊಟದ ಡಬ್ಬಿ, ಕುಡಿಯುವ ನೀರಿನ ಬಾಟಲ್ ಉಪಯೋಗಿಸುವುದರಿಂದ ಮಾರಕ ರೋಗಗಳಿಂದ ತಮ್ಮ ಮಕ್ಕಳನ್ನು ಪೋಷಕರು ಕಾಪಾಡಬಹುದು ಎಂದು ಸಲಹೆ ನೀಡಿದರು.

ಜೆ.ಡಿ.ಸ್ಕೂಲ್ ಅಫ್ ಆರ್ಟ್ಸ್ ನ ಮುಖ್ಯಸ್ಥ ಡೇವಿಡ್ ಮಾತನಾಡಿ, ಚಿತ್ರಕಲೆ ಎಂಬುದು ಒಂದು ಪ್ರಬಲ ಮಾಧ್ಯಮ, ಅದರ ಮೂಲಕ ಮಕ್ಕಳಿಗೆ ಪರಿಸರ ಪ್ರಜ್ಞೆ ಮೂಡಿಸುವ ನಿಟ್ಟಿನಲ್ಲಿ ಇದೊಂದು ಒಳ್ಳೆಯ ಪ್ರಯತ್ನ, 15ನೇ ವಾರ್ಡ್ನ ಪಾಲಿಕೆ ಸದಸ್ಯರಾದ ಗಿರಿಜಾ ಧನಿಯಕುಮಾರ್ ಮತ್ತು ಕನ್ನಡ ಸೇನೆಯ ಅಧ್ಯಕ್ಷ ಧನಿಯಕುಮಾರ್ ಅವರು ತಮ್ಮ ವಾರ್ಡಿನಲ್ಲಿ ಈ ರೀತಿಯ ಒಂದಿಲ್ಲೊಂದು ಕಾರ್ಯಕ್ರಮ ಆಯೋಜಿಸುತ್ತಾ ಮಕ್ಕಳನ್ನು ಅದರಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಿಂದ ಭವಿಷ್ಯದ ಪ್ರಜೆಗಳಾದ ಮಕ್ಕಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಇಲ್ಲಿ ಪ್ರಶಸ್ತಿ ಎಂಬುದು ಒಂದು ಸಂಕೇತವಷ್ಟೇ, ಮಕ್ಕಳು ಪರಿಸರದ ಬಗ್ಗೆ ಎಷ್ಟು ತಿಳಿದುಕೊಂಡಿದ್ದಾರೆ ಎಂಬುದಕ್ಕೆ ಈ ಚಿತ್ರಕಲಾ ಸ್ಪರ್ಧೆ ಸಾಕ್ಷಿಯಾಗಲಿದೆ ಎಂದರು.

ಪ್ಲಾಸ್ಟಿಕ್ ಮುಕ್ತ ತುಮಕೂರು ಚಿತ್ರಕಲಾ ಸ್ಪರ್ಧೆಯಲ್ಲಿ ವಿವಿಧ ಶಾಲೆಗಳ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದು, ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢಶಾಲಾ ಎಂಬ ವಿಭಾಗ ಮೂರು ಹಂತದಲ್ಲಿ ಸ್ಪರ್ಧೆ ಏರ್ಪಡಿಸಲಾಗಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಎಲ್ಲಾ ಮಕ್ಕಳಿಗೆ ಪ್ರಶಂಸನಾ ಪತ್ರ ಹಾಗೂ ಪೆನ್ ನೀಡಿ ಅಭಿನಂದಿಸಲಾಯಿತು.

ಈ ವೇಳೆ ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಧನಿಯಕುಮಾರ್, ಜೆ.ಡಿ.ಸ್ಕೂಲ್ ಅಫ್ ಆರ್ಟ್ಸ್ ನ ಉಪನ್ಯಾಸಕರಾದ ಸಿಸಿಲಿಯ ಹಾಗೂ ಸ್ಪರ್ಧೆಗೆ ಆಗಮಿಸಿದ್ದ ಮಕ್ಕಳ ಪೋಷಕರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!