ತುಮಕೂರು: ಒಡಿಶಾ ಮೂಲದ ಖಾಸಗಿ ಸುದ್ದಿ ವಾಹಿನಿ ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿಸಿದ ಕೃತಕ ಸುದ್ದಿ ವಾಚಕಿ ಪರಿಚಯಿಸಿದ ಬೆನ್ನಲ್ಲೇ, ಕ್ಲಾಸ್ ರೂಂನ್ನೇ ಸುದ್ದಿಮನೆಯಾಗಿ ಪರಿವರ್ತಿಸಿಕೊಂಡಿರುವ ಇಲ್ಲಿನ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಹಾಗೂ ಎಲೆಕ್ಟ್ರಾನಿಕ್ ಮೀಡಿಯಾ ವಿಭಾಗ ಮುನ್ನಡೆಸುತ್ತಿರುವ ಸಿದ್ದಾರ್ಥ ನ್ಯೂಸ್ ಯುಟ್ಯೂಬ್ ಚಾನಲ್ ನಲ್ಲಿ ಕೃತಕ ಬುದ್ಧಿಮತ್ತೆ (ಎಐ) ಯಿಂದ ಸೃಷ್ಟಿಸಿದ ಕೃತಕ ಸುದ್ದಿ ವಾಚಕಿ ಭಾನು ಅವರನ್ನು ಪರಿಚಯಿಸುವ ಮೂಲಕ ರಾಜ್ಯದ ಮಾಧ್ಯಮ ಕ್ಷೇತ್ರದ ಗಮನ ಸೆಳೆದಿದೆ.
ಅತ್ಯಾಧುನಿಕ ಸೌಲಭ್ಯ ಹೊಂದುವ ಮೂಲಕ ವಿನೂತನ ಪ್ರಯೋಗಗಳಿಗೆ ಮಾದರಿಯಾಗಿರುವ ಸಿದ್ಧಾರ್ಥ ಮಾಧ್ಯಮ ಕೇಂದ್ರದ ಪತ್ರಿಕೋದ್ಯಮ ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿಸಲಾದ ಸುದ್ದಿ ವಾಚಕಿ ಭಾನು ಅವರ ಮೂಲಕ ಸುದ್ದಿ ವಾಚನ ಸಫಲತೆ ಸಾಧಿಸಿದ್ದಾರೆ.
ಆಧುನಿಕ ತಂತ್ರಜ್ಞಾನ ನಾಲ್ಕು ಹಂತಗಳಲ್ಲಿ ಬಳಸುವುದರ ಮೂಲಕ ಸಿದ್ದಾರ್ಥ ನ್ಯೂಸ್ ಚಾನಲ್ ನಲ್ಲಿ ವಿದ್ಯಾರ್ಥಿಗಳು ಸದಾ ಮುಂದಿದ್ದಾರೆ. ಹಾಗಾಗಿ ಸಿದ್ದಾರ್ಥ ಟಿವಿಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ಪ್ರಾಯೋಗಿಕವಾಗಿ ನ್ಯೂಸ್ ಬುಲೆಟಿನ್ ಪ್ರಸಾರ ಮಾಡಲಾಗಿದೆ.
ಮೊದಲ ಹಂತದಲ್ಲಿ ಸಾಂಪ್ರದಾಯಿಕ ವಿಧಾನದಲ್ಲಿ ನ್ಯೂಸ್ ಸ್ಕ್ರಿಪ್ಟ್ ಬರೆದು ಸಿದ್ಧಪಡಿಸಿಕೊಂಡು, 2ನೇ ಹಂತದಲ್ಲಿ ಎಐ ತಂತ್ರಜ್ಞಾನ ಬಳಸಿ, ಸ್ಕಿಪ್ ಗೆ ಧ್ವನಿ ನೀಡಲಾಗಿದೆ. 3ನೇ ಹಂತದಲ್ಲಿ ಎಐ ಮೂಲಕ ಮುದ್ರಿಸಿದ ಧ್ವನಿಗೆ ಮತ್ತೊಂದು ಟ್ರ್ಯಾಕ್ ಸಹಾಯದಿಂದ ನ್ಯೂಸ್ ಆ್ಯಂಕರ್ ಗೆ ಸಂಕಲನ ಮಾಡಲಾದ ವೀಡಿಯೋ ತುಣಕುಗಳನ್ನು ಜೋಡಿಸಲಾಗಿದೆ. ಜೊತೆಗೆ ಗ್ರಾಫಿಕ್ಸ್ ಕೂಡ ಅಳವಡಿಸಲಾಗಿದೆ.
ಮಾಧ್ಯಮ ಕ್ಷೇತ್ರದಲ್ಲಿ ಹೊಸ ಹೊಸ ತಂತ್ರಜ್ಞಾನಗಳ ಪರಿಚಯ ಮತ್ತು ಅಳವಡಿಕೆಯ ಪ್ರಯೋಗ ನಡೆಯುತ್ತಿದ್ದು, ಆ ತಂತ್ರಜ್ಞಾನವನ್ನು ಕಾಲೇಜಿನ ಕ್ಲಾಸ್ ರೂಂಗೆ ಪರಿಚಯಿಸುತ್ತಿದ್ದೇವೆ. ಭವಿಷ್ಯದ ದಿನಗಳಲ್ಲಿ ಮಾಧ್ಯಮ ಕೇತ್ರಕ್ಕೆ ವಿದ್ಯಾರ್ಥಿಗಳು ಕಾಲಿಟ್ಟಾಗ ಉಪಯೋಗಕ್ಕೆ ಬರುತ್ತದೆ ಎನ್ನುತ್ತಾರೆ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಡಾ.ಬಿ.ಟಿ.ಮುದ್ದೇಶ್.
ಸಿದ್ಧಾರ್ಥ ನ್ಯೂಸ್ ಯುಟ್ಯೂಬ್ ಚಾನಲ್ ನಲ್ಲಿ ಕೃತಕ ಬುದ್ಧಿಮತ್ತೆ ಸುದ್ದಿ ಸಂಚಿಕೆ ಬಿಡುಗಡೆ
ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್ತಿನ ಮಾಜಿ ಕಾರ್ಯಕಾರಿ ಕಾರ್ಯದರ್ಶಿ ಡಾ.ಎಸ್.ಜಿ.ಶ್ರೀಕಂಠೇಶ್ವರ ಸ್ವಾಮಿ ಸಿದ್ಧಾರ್ಥ ನ್ಯೂಸ್ ಯುಟ್ಯೂಬ್ ಚಾನಲ್ ನಲ್ಲಿ ಕೃತಕ ಬುದ್ದಿಮತ್ತೆ (ಎಐ) ಬುಲೆಟಿನ್ ಬಿಡುಗಡೆಗೊಳಿಸಿದರು, ನಂತರ ಮಾತನಾಡಿದ ಅವರು ಕೃತಕ ಬುದ್ಧಿಮತ್ತೆಯ ನಿರೂಪಕರು ಬಹು ಉಪಯೋಗಿಯಾಗಿದ್ದು, ಭವಿಷ್ಯದಲ್ಲಿ ಶೇ.90 ರಷ್ಟು ಉದ್ಯೋಗಿಗಳ ಮೇಲೆ ಪರಿಣಾಮ ಬೀರಬಹುದು, ಕೃತಕ ಬುದ್ಧಿಮತ್ತೆ ಮತ್ತು ಮಿಷನ್ ಲರ್ನಿಂಗ್ ಮೂಲಕ ವಿದ್ಯಾರ್ಥಿಗಳು ಹೆಚ್ಚಿನ ವಿಷಯ ಕಲಿಯಲು ಸಾಧ್ಯ ಎಂದರು.
ಬಿಡುಗಡೆ ಕಾರ್ಯಕ್ರಮದಲ್ಲಿ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಬಿ.ಟಿ. ಮುದ್ದೇಶ್, ಸಹಾಯಕ ಪ್ರಾಧ್ಯಾಪಕರಾದ ಜ್ಯೋತಿ.ಸಿ, ಶ್ವೇತ.ಎಂ.ಪಿ ಮತ್ತು ಹರೀಶ್ ಕುಮಾರ್.ಬಿ.ಸಿ ಹಾಗೂ ವಿದ್ಯಾರ್ಥಿಗಳು ಇದ್ದರು.
ಗ್ರಾಫಿಕ್ಸ್ ಬಳಕೆ: ಈಗಾಗಲೇ ಕನ್ನಡ ಭಾಷೆಯ ಎಐ ಸುದ್ದಿ ವಾಚಕರನ್ನು ಕೆಲ ಖಾಸಗಿ ವಾಹಿನಿಗಳು ಹಾಗೂ ಯೂಟ್ಯೂಬ್ ವಾಹಿನಿಗಳು ಪರಿಚಯಿಸಿವೆ. ಅವುಗಳ ಪೈಕಿ ಕೆಲವೊಂದರಲ್ಲಿ ನೈಜ ಹಿನ್ನೆಲೆ ಧ್ವನಿಗೆ ಎಐ ದೃಶ್ಯಗಳನ್ನು ಜೋಡಿಸಲಾಗಿದೆ, ಆದರೆ ಸಿದ್ದಾರ್ಥ ಟಿವಿಯಲ್ಲಿ ನಿರೂಪಕಿಯ ಧ್ವನಿ ಹಾಗೂ ದೃಶ್ಯದ ಜೊತೆಗೆ ಗ್ರಾಫಿಕ್ಸ್ ಬಳಸಲಾಗಿರುವುದು ವಿಶೇಷ.
ಪ್ರಶಂಸೆ: ಕೃತಕ ಬುದ್ಧಿಮತ್ತೆ ಸುದ್ದಿ ವಾಚನದ ಪ್ರಾಯೋಗಿಕ ಪ್ರಯತ್ನಕ್ಕೆ ಶ್ರೀಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಕುಲಾಧಿಪತಿ ಹಾಗೂ ಕರ್ನಾಟಕ ಸರ್ಕಾರ ಗೃಹ ಸಚಿವ ಡಾ.ಪರಮೇಶ್ವರ ಅವರು ಸಂತಸ ವ್ಯಕ್ತಪಡಿಸಿದ್ದು, ಮಾಧ್ಯಮ ಕೇಂದ್ರದಲ್ಲಿನ ವಿನೂತನ ಪ್ರಯೋಗಗಳು ಮುಂದುವರಿಯಲಿ ಎಂದಿದ್ದಾರೆ.
Comments are closed.