ಮೂಢನಂಬಿಕೆಯ ಸೂತಕಕ್ಕೆ ಮಗು ಬಲಿ

ಸೂತಕದ ಹೆಸರಲ್ಲಿ ಊರಾಚೆ ಗುಡಿಸಲು ಸೇರಿದ್ದ ಬಾಣಂತಿ

11,481

Get real time updates directly on you device, subscribe now.


ತುಮಕೂರು: ಮೂಢ ನಂಬಿಕೆ ಇನ್ನೂ ಜೀವಂತವಾಗಿದ್ದು, ಅದು ಒಂದು ಮಗುವನ್ನೇ ಬಲಿ ಪಡೆದ ಘಟನೆ ತುಮಕೂರು ತಾಲ್ಲೂಕು ಬೆಳ್ಳಾವಿ ಹೋಬಳಿ ಮಲ್ಲೇನಹಳ್ಳಿಯ ಗೊಲ್ಲರಹಟ್ಟಿಯಲ್ಲಿ ನಡೆದಿದೆ.
ಸೂತಕವು ದೇವರಿಗೆ ಆಗಲ್ಲ ಎಂದು ಬಾಣಂತಿ, ಹಸುಗೂಸನ್ನೇ ಊರಿನಿಂದ ಹೊರಗಿಟ್ಟ ಕುಟುಂಬಸ್ಥರು ಇದೀಗ ಮೌಡ್ಯ ಆಚರಣೆಯಿಂದಾಗಿ ಮಗುವನ್ನೇ ಕಳೆದುಕೊಂಡಿದ್ದಾರೆ.

ತುಮಕೂರು ಸಮೀಪದ ಮಲ್ಲೇನಹಳ್ಳಿ ಗೊಲ್ಲರಹಟ್ಟಿಯಲ್ಲಿ ಸಿದ್ದೇಶ್ ಮತ್ತು ವಸಂತ ದಂಪತಿಯ ಮಗು ವಿಪರೀತ ಶೀತದಿಂದ ಬಳಲಿ ಮೃತಪಟ್ಟಿದೆ. ಶೀತ ಹೆಚ್ಚಾಗಿದ್ದರಿಂದ ಮಗುವನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು, ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಸುಗೂಸು ಪ್ರಾಣಬಿಟ್ಟಿದೆ. ತಮ್ಮ ದೇವರಿಗೆ ಸೂತಕ ಆಗಲ್ಲ ಎಂದು ಬಾಣಂತಿ, ಮಗುವನ್ನು ಕುಟುಂಬಸ್ಥರು ಊರ ಹೊರಗಿಟ್ಟಿದ್ದರು. ಮಳೆ, ಗಾಳಿಯಿದ್ದರೂ ತಾಯಿ, ಮಗು ಊರ ಹೊರಗಿನ ಚಿಕ್ಕ ಗುಡಿಸಲಿನಲ್ಲಿಯೇ ವಾಸವಿದ್ದರು, ಇದೀಗ ಮೌಢ್ಯತೆಯೇ ಮಗುವಿನ ಜೀವ ತೆಗೆದಿದೆ.

ತುಮಕೂರಿನ ಮಲ್ಲೇನಹಳ್ಳಿಯಲ್ಲಿ ತಾತ್ಕಾಲಿಕ ಟೆಂಟ್ ನಲ್ಲಿ ವಸಂತಾ ತನ್ನ ಮಗುವಿನೊಂದಿಗೆ ವಿಪರೀತ ಗಾಳಿ, ಮಳೆ ಇದ್ದರೂ ಸಹ ಊರ ಹೊರಗೆ ಇದ್ದರು. ಇದರಿಂದ ಮಗುವಿಗೆ ಅನಾರೋಗ್ಯ ಕಾಣಿಸಿಕೊಂಡಿತ್ತು ಎನ್ನಲಾಗಿದೆ.

ಗ್ರಾಮದ ಸಿದ್ದೇಶ್ ಅವರ ಪತ್ನಿ ವಸಂತ ಕಳೆದ ತಿಂಗಳು 22 ರಂದು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ವಸಂತಗೆ ಹೆರಿಗೆ ಆಗಿತ್ತು. ಈ ವೇಳೆ ಒಂದು ಮಗು ಸಾವನ್ನಪ್ಪಿದ್ದರೆ, ಇನ್ನೊಂದು ಮಗು ಬದುಕುಳಿದಿತ್ತು. ಏಳು ತಿಂಗಳಿಗೆ ಹೆರಿಗೆ ಆಗಿದ್ದರಿಂದ ಪ್ರಿಮ್ಯಾಚೂರ್ಡ್ ಬೇಬಿಯನ್ನು ಜಿಲ್ಲಾಸ್ಪತ್ರೆಯ ಐಸಿಯುನಲ್ಲಿಡಲಾಗಿತ್ತು. ಕಳೆದ ಜು.14 ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು.
ಆಸ್ಪತ್ರೆಯಿಂದ ಬರುತ್ತಿದ್ದಂತೆ ಕುಟುಂಬಸ್ಥರು ತಾಯಿ ಮತ್ತು ಮಗುವನ್ನು ಊರಾಚೆ ಇರುವ ಗುಡಿಸಲಿಗೆ ರವಾನೆ ಮಾಡಿದ್ದರು. ಹೀಗಾಗಿ ಬಾಣಂತಿ ವಸಂತ ಮತ್ತು ಹಸುಗೂಸು ಉಸಿರುಗಟ್ಟಿಸುವಂತಹ ಸಣ್ಣ ಗುಡಿಸಲಿನಲ್ಲೇ ಹಗಲು, ರಾತ್ರಿ ಇರಬೇಕಾದ ಪರಿಸ್ಥಿತಿ ಎದುರಾಗಿತ್ತು. ಇದೀಗ ವಿಪರೀತ ಮಳೆ, ಗಾಳಿಗೆ ಮಗು ಅನಾರೋಗ್ಯಕೀಡಾಗಿ ಪ್ರಾಣಬಿಟ್ಟಿದೆ. ಮೂಢ ನಂಬಿಕೆ ಅನ್ನೋದು ಮಗುವಿನ ಪ್ರಾಣ ತೆಗೆದಿದೆ. ಇನ್ನಾದರು ಈ ಕುಟುಂಬ ಎಚ್ಚತ್ತುಕೊಳ್ಳಬೇಕಿದೆ.

Get real time updates directly on you device, subscribe now.

Comments are closed.

error: Content is protected !!