ತುಮಕೂರು: ಮಣಿಪುರದಲ್ಲಿ ನಡೆದ ಯುವತಿಯರ ಮೇಲಿನ ಅತ್ಯಾಚಾರ ಹಾಗೂ ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣ ಖಂಡಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಟೌನ್ ಹಾಲ್ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿದರು.
ಈ ವೇಳೆ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಲಪ್ಪ ಮಾತನಾಡಿ, ಜಗತ್ತಿನೆದುರು ಭಾರತ ತಲೆ ತಗ್ಗಿಸುವಂತಹ ಘಟನೆಗಳು ಬಿಜೆಪಿ ಆಡಳಿತದ ಮಣಿಪುರದಲ್ಲಿ ನಡೆಯುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರು ಇದುವರೆಗೂ ಅಲ್ಲಿಗೆ ಭೇಟಿ ನೀಡದಿರುವುದು ದುರಂತ ಎಂದು ವಾಗ್ದಾಳಿ ನಡೆಸಿದರು.
ಮಣಿಪುರದಲ್ಲಿ ಇದುವರೆಗೂ 176 ಬರ್ಬರ ಕೊಲೆಗಳಾಗಿವೆ, ಇಲ್ಲಿಯ ತನಕ 12 ಮಂದಿ ಮಹಿಳೆಯರ ಮೇಲೆ ರಸ್ತೆಯಲ್ಲಿ ರಾಜಾರೋಷವಾಗಿ ಅತ್ಯಾಚಾರ ನಡೆದಿವೆ. ಇದರ ಬಗ್ಗೆ ಪ್ರಧಾನಿಯಿಂದಾಗಲಿ, ಕೇಂದ್ರದ ಗೃಹ ಸಚಿವರಿಂದಾಗಲಿ ನಮಗೆ ಉತ್ತರ ಸಿಕ್ಕಿಲ್ಲ, ಮೊನ್ನೆ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಐಎನ್ಡಿಐಎ (ಇಂಡಿಯಾ) ಸಮಿತಿಯಿಂದ ಅವಿಶ್ವಾಸ ಮಂಡನೆಗೆ ನಿರ್ಣಯ ಕೈಗೊಂಡು ಸ್ಪೀಕರ್ ಗೆ ಪತ್ರ ರವಾನಿಸಿದ್ದಾರೆ. ಇದರ ಉದ್ದೇಶ ಅವಿಶ್ವಾಸ ಸಭೆಯಲ್ಲಿ ಪ್ರಧಾನಿಗಳು ಸಂಸತ್ ನಲ್ಲಿ ಉತ್ತರ ಕೊಡಲೇ ಬೇಕಾದಂತಹ ಪರಿಸ್ಥಿತಿ ಉದ್ಭವವಾಗಿದೆ ಎಂದು ಹೇಳಿದರು.
ಜಗತ್ತಿನೆದುರು ಭಾರತ ತಲೆ ತಗ್ಗಿಸುವಂತಹ ಘಟನೆಗಳು ಬಿಜೆಪಿ ಆಡಳಿತದ ಮಣಿಪುರದಲ್ಲಿ ಜರುಗುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಇದುವರೆಗೂ ಅಲ್ಲಿಗೆ ಭೇಟಿ ನೀಡಬೇಕೆಂದು ಮನಸಾಗಲಿಲ್ಲ. ಮಣಿಪುರದ ಬಗ್ಗೆ ತುಟಿ ಬಿಚ್ಚಲು ಅತ್ಯಂತ ಹೇಯ ಕೃತ್ಯ ನಡೆಯಬೇಕಾಯಿತು, ಈಗಲಾದರೂ ಮೋದಿಯವರು ಮೌನ ಮುರಿದು ಇದಕ್ಕೆ ಉತ್ತರ ಕೊಡುತ್ತಾರೆಂದು ಭಾವಿಸಿದ್ದೇವೆ ಎಂದರು.
ಹಿಂದೆ ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ಅಸ್ಸಾಂನಲ್ಲಿ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಬದಲಾವಣೆ ಮಾಡಿದ್ದೆವು. ಹಾಗೆಯೇ ಈಗ ಇಂಪಾಲ್ ನಲ್ಲಿ ಆಗಿರುವಂತಹ ಪೂರ್ತಿ ಅರಾಜಕತೆ, ಕಾನೂನು ವ್ಯವಸ್ಥೆ ಕುಸಿತಕ್ಕೆ ಮಣಿಪುರ ಸರ್ಕಾರವನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿದರು.
ಮೊನ್ನೆ ರಾಜ್ಯದ ಉಡುಪಿಯಲ್ಲಿ ನಡೆದ ಘಟನೆ ಸಂಬಂಧ ಕೇಂದ್ರ ಮಹಿಳಾ ಆಯೋಗ ಸದಸ್ಯೆ ಖುಷ್ಬು ಸುಂದರ್ ಅವರು ಓಡೋಡಿ ಬಂದರು. ಆದರೆ ಒಂದೂವರೆ ತಿಂಗಳಿನಿಂದ ಮಣಿಪುರ ಹೊತ್ತಿ ಉರಿಯುತ್ತಿದ್ದರೂ ಸಹ ಕೇಂದ್ರ ಮಹಿಳಾ ಆಯೋಗದಿಂದ ಒಬ್ಬರೂ ಸಹ ಭೇಟಿ ನೀಡದೇ ಇರುವುದು ದುರಂತ ಎಂದರು.
ಮಹಿಳಾ ಕಾಂಗ್ರೆಸ್ ಮುಖಂಡರಾದ ಡಾ.ಅರುಂಧತಿ ಮಾತನಾಡಿ, ಮಣಿಪುರದಲ್ಲಿ ಕುಕಿ ಬುಡಕಟ್ಟು ಸಮುದಾಯದ ಮೂವರು ಮಹಿಳೆಯರನ್ನು ಬೆತ್ತಲುಗೊಳಿಸಿ, ಲೈಂಗಿಕ ದೌರ್ಜನ್ಯ ನಡೆಸಿದ ಮತ್ತು ಒಬ್ಬ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಕೃತ್ಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಇದುವರೆಗೂ ತುಟಿ ಬಿಚ್ಚದೇ ಇರುವುದು ಖಂಡನೀಯ ಎಂದರು.
ಮಹಿಳಾ ಕಾಂಗ್ರೆಸ್ ಮುಖಂಡರಾದ ರೂಪತಾರ ಮಾತನಾಡಿ, ಭೇಟಿ ಪಡಾವೋ ಭೇಟಿ ಬಜಾವೋ ಎಂದು ಹೇಳುತ್ತಿದ್ದ ಪ್ರಧಾನಿ ನರೇಂದ್ರ ಮೋದಿಯವರು ಮಣಿಪುರದಲ್ಲಿ ಮಹಿಳೆಯರ ಮತ್ತು ಯುವತಿಯರ ಮೇಲೆ ಅತ್ಯಾಚಾರ ನಡೆಯುತ್ತಿದ್ದರೂ ಮೌನ ವಹಿಸಿರುವುದು ಖಂಡನೀಯ, ನಿಮ್ಮ ಸರ್ಕಾರದಲ್ಲಿ ಮಹಿಳೆಯರಿಗೆಲ್ಲಿದೆ ರಕ್ಷಣೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಕೊತ್ತೊಗೆದು ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ತರುವ ಸಮಯ ಈಗ ಬಂದಿದೆ ಎಂದು ಎಂದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಇಕ್ಬಾಲ್ ಅಹಮದ್, ಷಣ್ಮುಖಪ್ಪ, ರೇವಣಸಿದ್ಧಯ್ಯ, ಸಿದ್ಧಲಿಂಗೇಗೌಡ, ಸಿ.ಡಿ.ಚಂದ್ರಶೇಖರ್, ಆಟೋರಾಜು, ನಯಾಜ್, ಎನ್.ಮಹೇಶ್, ನಟರಾಜಶೆಟ್ಟಿ, ಕೈದಾಳ ರಮೇಶ್, ಶಿವಾಜಿ, ಆದಿಲ್, ಜಗದೀಶ್, ನರಸೀಯಪ್ಪ, ಮಹಿಳಾ ಮುಖಂಡರಾದ ಸುಜಾತ, ಡಾ.ಫರ್ಹಾನ ಬೇಗಂ, ಡಾ.ಅರುಂಧತಿ, ನಾಗಮಣಿ, ಭಾಗ್ಯಶೇಖರ್, ಮಂಗಳ, ಯಶೋಧಮ್ಮ, ಕವಿತಾ, ರೂಪತಾರಾ, ವಸುಂಧರ, ಭಾಗ್ಯಮ್ಮ, ಲಕ್ಷ್ಮಮ್ಮ ಇತರರು ಭಾಗವಹಿಸಿದ್ದರು.
Comments are closed.