ತುಮಕೂರು: ಉದ್ಯೋಗದಲ್ಲಿ ಹಲವಾರು ರೀತಿಯ ಕೌಶಲ್ಯ ಅವಶ್ಯಕತೆ ಇದೆ. ನಾವು ಶಿಕ್ಷಣದಲ್ಲಿ ಇ-ಕಲಿಕೆ ಅಳವಡಿಸಿಕೊಂಡಾಗ ಕೌಶಲ್ಯಗಳಲ್ಲಿ ಪರಿಣಿತಿ ಹೊಂದಬಹುದು ಎಂದು ತುಮಕೂರು ವಿಶ್ವವಿದ್ಯಾಲಯದ ಕುಲಸಚಿವೆ ನಾಹಿದಾ ಜಮ್ ಜಮ್ ತಿಳಿಸಿದರು.
ತುಮಕೂರು ವಿವಿ ಸ್ನಾತಕೋತ್ತರ ವಾಣಿಜ್ಯ ಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ಬೆಂಗಳೂರಿನ ಫಿನ್ವರ್ಸ್ ಅಪ್ ಸ್ಕಿಲ್ಲಿಂಗ್ ಪ್ರೈವೇಟ್ ಲಿಮಿಟೆಡ್ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಉದ್ಯೋಗ ಕೌಶಲ್ಯ ವರ್ಧನೆ ಮತ್ತು ಇ-ಲರ್ನಿಂಗ್ ಮೂಲಕ ಕೌಶಲ್ಯವೃದ್ಧಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಉದ್ಯೋಗವಕಾಶ ಸೃಷ್ಟಿಸಬೇಕು, ಸ್ವ-ಉದ್ಯೋಗಗಳಿಗೆ ಈಗಿನ ಯುಗದಲ್ಲಿ ಹೆಚ್ಚಿನ ಬೆಲೆಯಿದೆ, ಕೌಶಲ್ಯಾಭಿವೃದ್ಧಿ ಶಿಕ್ಷಣ ಈಗಿನ ಅಗತ್ಯವಾಗಿದೆ. ಓದುವ ಸಮಯದಲ್ಲೇ ಉದ್ಯೋಗಕ್ಕೆ ಬೇಕಿರುವ ಕೌಶಲ್ಯ ಕಲಿತರೆ ಒಳಿತು ಎಂದರು.
ಬೆಂಗಳೂರಿನ ಫಿನ್ವರ್ಸ್ ಅಪ್ ಸ್ಕಿಲ್ಲಿಂಗ್ ಪ್ರೈವೇಟ್ ಲಿಮಿಟೆಡ್ ನ ನಿರ್ದೇಶಕ ಮತ್ತು ಸಹ ಸಂಸ್ಥಾಪಕ ಪವನ್ ಶರ್ಮಾ ಮಾತನಾಡಿ, ಸ್ನಾತಕೋತ್ತರ ಪದವಿಯಲ್ಲಿ ಶಿಕ್ಷಣದ ಜೊತೆಗೆ ಇ-ಕಲಿಕೆಯು ಬಹಳ ಮುಖ್ಯವಾಗಿದೆ. ಇ- ಕಲಿಕೆಯಲ್ಲಿ ಹಲವಾರು ರೀತಿಯ ಕೌಶಲ್ಯ ಕಲಿಯಬಹುದಾಗಿದೆ. ಇದರ ಜೊತೆಗೆ ತಂತ್ರಾಂಶಗಳ ಕಲಿಕೆಯೂ ಮುಖ್ಯ, ಈ ಎಲ್ಲಾ ಕೌಶಲ್ಯಗಳಿಂದ ಉತ್ತಮ ಉದ್ಯೋಗ ಪಡೆಯಬಹುದಾಗಿದೆ ಎಂದು ಹೇಳಿದರು.
ಸ್ನಾತಕೋತ್ತರ ಮಾಹಿತಿ ವ್ಯವಸ್ಥೆ ಮತ್ತು ಸಂಶೋಧನ ವಿಭಾಗದ ಸಂಯೋಜಕ ಡಾ.ದೇವರಾಜಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸ್ನಾತಕೋತ್ತರ ವಾಣಿಜ್ಯ ಶಾಸ್ತ್ರ ಮತ್ತು ಸಂಶೋಧನ ವಿಭಾಗದ ಮುಖ್ಯಸ್ಥ ಪ್ರೊ.ಪಿ.ಪರಮಶಿವಯ್ಯ, ಪ್ರಾಧ್ಯಾಪಕರಾದ ಪ್ರೊ.ಜಿ. ಸುದರ್ಶನರೆಡ್ಡಿ, ಪ್ರೊ. ಬಿ. ಶೇಖರ್, ಸ್ನಾತಕೋತ್ತರ ವ್ಯವಹಾರ ಆಡಳಿತ ಮತ್ತು ಸಂಶೋಧನ ವಿಭಾಗದ ಮುಖ್ಯಸ್ಥೆ ಡಾ.ನೂರ್ ಅಫ್ಜಾ, ಫಿನ್ವರ್ಸ್ ಅಪ್ ಸ್ಕಿಲ್ಲಿಂಗ್ ಪ್ರೈವೇಟ್ ಲಿಮಿಟೆಡ್ ನ ಸಿಇಒ ರಯಾನ್ ವಲಸಪಾಲಿ, ಫಿನ್ವರ್ಸ್ ಅಪ್ ಸ್ಕಿಲ್ಲಿಂಗ್ ಪ್ರೈವೇಟ್ ಲಿಮಿಟೆಡ್ ನ ಅರ್ಪಣ ಭಟ್, ಅಶಿಮ್ ಕುಮಾರ್ ಭಾಗವಹಿಸಿದ್ದರು.
Comments are closed.